ನೆಲಮಂಗಲ,ಡಿ.21- ಚಲಿಸುತ್ತಿದ್ದ ಕಾರಿನ ಮೇಲೆ ಕಂಟೈನರ್ ಲಾರಿ ಉರುಳಿ ಬಿದ್ದ ಪರಿಣಾಮ ಸಾಫ್ಟ್ ವೇರ್ ಕಂಪೆನಿಯೊಂದರ ಕುಟುಂಬದ 6 ಮಂದಿ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಘಟನೆ ಇಂದು ಮಧ್ಯಾಹ್ನ ರಾಷ್ಟ್ರೀಯ ಹೆದ್ದಾರಿ 4ರ ಬಳಿ ಸಂಭವಿಸಿದೆ. ಬೆಂಗಳೂರಿನ ಐಎಸ್‌ಡಿ ಸಾಫ್ಟವೇರ್ ಸಲ್ಯೂಷನ್ ಕಂಪನಿ ಮಾಲೀಕ ಚಂದ್ರಮ್‌ಯಾಗಪ್ಪ ಗೋಳ(48) ಮತ್ತು ಕುಟುಂಬದವರಾದ ಗೌರಾಬಾಯಿ(42), ಮಕ್ಕಳಾದ ದೀಕ್ಷಾ(12), ಜಾನ್(16), ಆರ್ಯ(6), ವಿಜಯಲಕ್ಷ್ಮಿ(36) ಮೃತಪಟ್ಟ ದುರ್ದೈವಿಗಳು.
ವಿಜಯಪುರ ಮೂಲದ ಸಾಫ್ಟ್ ವೇರ್ ಉದ್ಯಮಿ ಚಂದ್ರಮ್ ಯಾಗಪ್ಪ ಅವರ ಕುಟುಂಬ ನಗರದ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ನೆಲೆಸಿದ್ದು, ಇಂದು ಬೆಳಿಗ್ಗೆ ಕುಟುಂಬದವರೊಂದಿಗೆ ಕಾರಿನಲ್ಲಿ ವಿಜಯಪುರಕ್ಕೆ ಹೋಗುತ್ತಿದ್ದರು.
ತುಮಕೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ತಾಳೇಕೆರೆ ಬಳಿ ಹೋಗುತ್ತಿದ್ದಾಗ ಅತೀ ವೇಗವಾಗಿ ಬಂದ ಕಂಟೈನರ್ ಲಾರಿಯೊಂದು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಕ್ಕದ ರಸ್ತೆಗೆ ಬಂದು ಸರಣಿ ಅಪಘಾತ ಮಾಡಿ ಚಲಿಸುತ್ತಿದ್ದ ಕಾರಿನ ಮೇಲೆ ಉರುಳಿ ಬಿದ್ದ ಪರಿಣಾಮ ಅದರಲ್ಲಿದ್ದವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸರಣಿ ಅಪಘಾತದಲ್ಲಿ ಒಂದು ಕಾರು, ಬೈಕುಗಳು, ಬಸ್ಸು ಜಖಂಗೊಂಡಿವೆ.
ಸುದ್ದಿ ತಿಳಿಯುತ್ತಿದ್ದಂತೆ ನೆಲಮಂಗಲ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿಯನ್ನು ಅವಲೋಕಿಸಿ ತಕ್ಷಣ ಮೂರು ಕ್ರೇನ್‌ಗಳನ್ನು ಸ್ಥಳಕ್ಕೆ ಕರೆಸಿಕೊಂಡು ಕಾರಿನ ಮೇಲಿದ್ದ ಕಂಟೈನರ್ ಅನ್ನು ತೆರವುಗೊಳಿಸಿದ್ದಾರೆ.
ಸ್ಥಳೀಯರ ನೆರವಿನಿಂದ ಕಾರಿನೊಳಗೆ ಸಿಕ್ಕಿಕೊಂಡಿದ್ದ ಆರು ಮಂದಿಯ ಮೃತದೇಹಗಳನ್ನು ಹೊರಗೆ ತೆಗೆಯಲು ಹರಸಾಹಸ ಪಟ್ಟು ಪೊಲೀಸರು ಕೊನೆಗೂ ಎಲ್ಲರ ಮೃತದೇಹಗಳನ್ನು ಹೊರತೆಗೆದು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
10 ಕಿ.ಮೀ. ಟ್ರಾಫಿಕ್ ಜಾಮ್:
ಈ ಮಾರ್ಗದಲ್ಲಿ ಸರಣಿ ಅಪಘಾತ ಹಾಗೂ ಕಾರಿನ ಮೇಲೆ ಕಂಟೈನರ್ ಲಾರಿ ಉರುಳಿ ಬಿದ್ದು ಭೀಕರ ಅಪಘಾತವಾದ ಪರಿಣಾಮ ಬೇಗೂರು ಬಳಿ ಟ್ರಾಫಿಕ್ ಜಾಮ್ ಆಗಿ ಸುಮಾರು 10 ಕಿ.ಮೀ. ವರೆಗೂ ವಾಹನಗಳು ಗಂಟೆಗಟ್ಟಲೆ ನಿಂತಿದ್ದು ಕಂಡು ಬಂತು.
ಸುದ್ದಿ ತಿಳಿದು ಎಸ್‌ಪಿ ಸಿ.ಕೆ. ಬಾಬ ಸ್ಥಳಕ್ಕೆ ಆಗಮಿಸಿ ಪೊಲೀಸರಿಂದ ಮಾಹಿತಿ ಪಡೆದಿದ್ದಾರೆ. ಮೃತರ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದ್ದು, ಅವರು ಬಂದ ನಂತರವಷ್ಟೇ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಗುತ್ತದೆ ಎಂದು ಸಂಚಾರಿ ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.ನಂತರ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಂಚಾರಿ ದಟ್ಟಣೆಯನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.