ಬೆಂಗಳೂರು,ಡಿ.21- ತಮಗೆ ಈಗಲೂ ಪ್ರಾಣಬೆದರಿಕೆ ಕರೆಗಳು ಬರುತ್ತಿದ್ದು, ಕೆಲ ಪ್ರಭಾವಿಗಳು ಶಾಮೀಲಾಗಿರುವ ಸಾಧ್ಯತೆ ಇರುವುದರಿಂದ ರಾಜ್ಯ ಸರ್ಕಾರವು ಕೂಡಲೇ ತಮ್ಮ ಪ್ರಕರಣವನ್ನು ನ್ಯಾಯಾಂಗ ತನಿಖೆ ನಡೆಸಬೇಕೆಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಪ್ರಕರಣ ನಡೆದ ನಂತರ ಕೆಲವು ಅನಾಮಧೇಯ ವ್ಯಕ್ತಿಗಳು ಕರೆ ಮಾಡಿ ಪ್ರಾಣ ಬೆದರಿಕೆಯೊಡ್ಡುತ್ತಿದ್ದಾರೆ. ನನ್ನ ಜೀವಕ್ಕೆ ತೊಂದರೆಯಾದರೆ ಅದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ. ಕರೆ ಮಾಡುತ್ತಿರುವವರ ದೂರವಾಣಿ ಕರೆಗಳನ್ನು ಪರಿಶೀಲಿಸಬೇಕು. ಇದು ಪೊಲೀಸರಿಂದ ನಿಷ್ಪಕ್ಷಪಾತ ತನಿಖೆಯಾಗಲು ಸಾಧ್ಯವಿಲ್ಲ. ಹೀಗಾಗಿ ನ್ಯಾಯಾಂಗ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿದರು. ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಕರಣ ಕುರಿತಂತೆ ಪ್ರತಿಯೊಂದು ವಿವರಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟರು.
ಈಗಲೂ ನನ್ನ ಮೊಬೈಲ್ ಟಾಪಿಂಗ್ ಮಾಡಲಾಗುತ್ತಿದೆ.ಯಾರು ಯಾವ ಕಾರಣಕ್ಕಾಗಿ ಮಾಡುತ್ತಿದ್ದಾರೋ ಗೊತ್ತಿಲ್ಲ. ಘಟನೆ ನಡೆದ ನಂತರ ಪೊಲೀಸರು ಕೆಲವರ ನಿರ್ದೇಶನದಂತೆ ಕೆಲಸ ಮಾಡಿದ್ದಾರೆ. ಅವರಿಗೆ ಪ್ರತಿ 10-15 ನಿಮಿಷಕ್ಕೊಮೆ ದೂರವಾಣಿ ಕರೆಗಳು ಬರುತ್ತಿದ್ದವು. ನನ್ನ ಮೊಬೈಲ್ ಲೊಕೇಷನ್ ಎಲ್ಲವೂ ಇದೆ. ಆ ಸಂದರ್ಭದಲ್ಲಿ ನನ್ನ ಜೊತೆಗಿದ್ದ ಪೊಲೀಸ್ ಅಧಿಕಾರಿಗಳ ಸಿಡಿಆರ್ ದಾಖಲಾಗಿರುತ್ತದೆ. ನಿಷ್ಪಕ್ಷಪಾತವಾಗಿ ತನಿಖೆ ನಡೆಯಲಿ ಎಂದು ಮನವಿ ಮಾಡಿದರು.
ನಾನು ತಪ್ಪು ಮಾಡಿದ್ದರೆ ಕಾನೂನಿನ ಪ್ರಕಾರ ಶಿಕ್ಷೆಯಾಗಲಿ. ನಾನು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿರುವ ವ್ಯಕ್ತಿ. ನಾನು ತಪ್ಪು ಮಾಡಿದ್ದರೆ ನನ್ನ ಮೇಲೆ ಸಭಾಪತಿಗಳು ಕ್ರಮ ತೆಗೆದುಕೊಳ್ಳಲಿ. ಇದರಲ್ಲಿ ಯಾವುದೇ ಅಭ್ಯಂತರವಿಲ್ಲ ಎಂದು ಸ್ಪಷ್ಟಪಡಿಸಿದರು. ಪರಿಷತ್ನಲ್ಲಿ ಕಾನೂನು ಕ್ರಮ ಜರುಗಿಸಲು ಸಭಾಪತಿಗಳಿಗೆ ಅವಕಾಶವಿದೆ. ಆದರೆ ಹಲ್ಲೆ ಮಾಡಲು ಸದಸ್ಯರಿಗೆ ಅವಕಾಶವಿಲ್ಲ. ನನ್ನ ದನಿಯನ್ನು ಎಫ್ಎಸ್ಎಲ್ಗೆ ಕಳುಹಿಸಿಕೊಡಲಿ. ಅಲ್ಲಿ ಧ್ವನಿ ಮುದ್ರಣ , ಫೋನ್ ದಾಖಲಾತಿ, ಸ್ಟೆನೋ ಎಲ್ಲವೂ ಇರುತ್ತದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ನಾನು ಆಕ್ಷೇಪಾರ್ಹ ಪದ ಬಳಸಿರುವುದಕ್ಕೆ ದಾಖಲೆಗಳಿಲ್ಲ ಎಂದು ಸಭಾಪತಿಯವರೇ ರೂಲಿಂಗ್ ಕೊಟ್ಟಿದ್ದಾರೆ ಎಂದರು.
ನಾನು ಸಚಿವರನ್ನು ನಿಂದಿಸಿದ್ದೇನೆ ಎಂದು ನನ್ನ ತಾಯಿ, ಹೆಂಡತಿ, ಮಕ್ಕಳ ಮೇಲೂ ಮಾನಹೀನವಾಗಿ ಮಾತನಾಡಿದರು. ಅದೇ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚೆನ್ನರಾಜ ಹಟ್ಟಿ ಅವರು ಆಚೆ ಬಾ ನಿನ್ನನ್ನು ನೋಡಿಕೊಳ್ಳುತ್ತೇನೆ. ಬೆಳಗಾವಿಯಿಂದ ಹೇಗೆ ಹೋಗುತ್ತೀಯ ಎಂದೆಲ್ಲ ಧಮ್ಕಿ ಹಾಕಿದರು. ಇದು ಪರಿಷತ್ ವ್ಯಾಪ್ತಿಗೆ ಬರುವುದಿಲ್ಲವೇ ಎಂದು ಪ್ರಶ್ನೆ ಮಾಡಿದರು.
ಚಿಕ್ಕಮಗಳೂರು ಸಂಸ್ಕೃತಿ ಗೊತ್ತು: ಹಿರಿಯ ಸಚಿವರೊಬ್ಬರು ನನ್ನ ಪ್ರಕರಣ ಕುರಿತಂತೆ ಇದು ಚಿಕ್ಕಮಗಳೂರಿನ ಸಂಸ್ಕೃತಿಯೇ ಎಂದು ಪ್ರಶ್ನೆ ಮಾಡಿದ್ದಾರೆ. ಮಲೆನಾಡು ಮತ್ತು ಚಿಕ್ಕಮಗಳೂರು ಸಂಸ್ಕೃತಿ ಏನೆಂಬುದು ಕರ್ನಾಟಕದ ಜನತೆಗೆ ಗೊತ್ತು. ನಮಲ್ಲಿ ಏಕವಚನದಲ್ಲೇ ಮಾತನಾಡಲು ಹಿಂದೆಮುಂದೆ ನೋಡುತ್ತಾರೆ. ನಿಮ ಹಿನ್ನೆಲೆ ಏನೆಂಬುದು ನೀವು ನೋಡಿಕೊಳ್ಳಿ. ನನ್ನ ಹಿನ್ನೆಲೆ ಏನೆಂಬುದನ್ನು ಜಿಲ್ಲೆಯ ಜನತೆ ನೋಡಿಕೊಳ್ಳುತ್ತಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ತಿರುಗೇಟು ನೀಡಿದರು.
ಸದನದ ಒಳಗೆಯೇ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಡಿ.ಕೆ.ಶಿವಕುಮಾರ್ ಪ್ರಾಣ ಬೆದರಿಕೆ ಒಡ್ಡಿದರು. ಸಿ.ಟಿ.ರವಿ ಬೆಳಗಾವಿಯಿಂದ ಹೊರಬಂದಿದ್ದೇ ಹೆಚ್ಚು ಎಂದು ಹೇಳುತ್ತಾರೆ. ನಾನು ಮಾತನಾಡಿದ್ದು ತಪ್ಪು ಎನ್ನುವುದಾದರೆ ಇದು ಕೂಡ ತಪ್ಪಲ್ಲವೇ? ಕಾನೂನು ಎಲ್ಲರಿಗೂ ಒಂದೇ. ತಾರತಮ್ಯ ಏಕೆ ಎಂದು ಪ್ರಶ್ನೆ ಮಾಡಿದರು.
ನನ್ನ ವಿರುದ್ಧ ದೂರು ಕೊಟ್ಟ ಕ್ಷಣವೇ ಎಫ್ಐಆರ್ ದಾಖಲಾಗುತ್ತದೆ. ನಾನು ಅದೂ ಸಚಿವೆ ವಿರುದ್ಧ ದೂರು ಕೊಟ್ಟರೆ ದೂರೇ ದಾಖಲಾಗುವುದಿಲ್ಲ. ಒಬ್ಬ ಜನಪ್ರತಿನಿಧಿಯ ಕತೆ ಇದಾದರೆ ಸಾಮಾನ್ಯಜನರ ಕತೆಯೇನು ಎಂದು ರವಿ ಪ್ರಶ್ನಿಸಿದರು.
ಸತ್ಯಕ್ಕೆ ಯಾವತ್ತೂ ಜಯ. ಸುಳ್ಳಿಗೆ ತಾತ್ಕಾಲಿಕ ಜಯ ಸಿಗಬಹುದು. ಅಂತಿಮವಾಗಿ ಸತ್ಯಕ್ಕೆ ಜಯ ಸಿಕ್ಕೇ ಸಿಗುತ್ತದೆ. ಅದಕ್ಕೆ ನಾನು ಸತ್ಯ ಮೇವ ಜಯತೆ ಎಂದು ಹೇಳಿದ್ದೆ. ಅತ್ತೆಗೊಂದು ಕಾಲವಾದರೆ ಸೊಸೆಗೊಂದು ಕಾಲ ಎಂದು ತಮ ಹೇಳಿಕೆಯನ್ನೂ ಸಮರ್ಥನೆ ಮಾಡಿಕೊಂಡರು.
ಅಕ್ಕಾ ಅಂತಾನೆ ಮಾತಾಡಿಸ್ತಾ ಇದ್ದೆ. ನಾನು ಅವರು ಎದುರಿಗೆ ಸಿಕ್ಕಾಗ ಲಕ್ಷಿ ಹೆಬ್ಬಾಳಕರ್ ಅವರಿಗೆ ಏನಕ್ಕ ಅಂತಾ ಮಾತಾಡಿಸಿದ್ದೇನೆ, ಏನ್ ಲಕ್ಷಿ ಅಕ್ಕ, ನಿಮ ಮುಖದಲ್ಲಿ ಇಷ್ಟೊಂದು ಕಳೆ ಅಂತೆಲ್ಲ ಮಾತಾಡಿಸಿದ್ದೇನೆ. ನಾನು ಏನ್ ಮಾತಾಡಿದೆ, ಅವ್ರು ಏನ್ ಮಾತಾಡಿದ್ದಾರೆ ಎಂಬುದರ ಬಗ್ಗೆ ದಾಖಲಾತಿ ಇರದೆ ಇರಬಹುದು. ನಾನು ಏನು ಮಾತಾಡಿದ್ದೇನೆ, ಅವ್ರು ಏನ್ ಮಾಡಿದ್ದಾರೆ ಎದು ಸಭಾಪತಿಗಳು ನಿಮ ಅಂತರಾತಕ್ಕೆ ಪ್ರಶ್ನೆ ಮಾಡಿಕೊಳ್ಳಿ ಎಂದಿದ್ದಾರೆ. ಅದೇ ರೀತಿ ನಾನು ಕೂಡ ನನ್ನ ಅಂತರಾತಕ್ಕೆ ಪ್ರಶ್ನೆ ಮಾಡಿಕೊಂಡಿದ್ದೇನೆ ಎಂದೇಳಿದೆ ಎಂದು ನುಡಿದರು.