ಬೆಳಗಾವಿ,ಡಿ.21- ವಿಧಾನಪರಿಷತ್ ಸದಸ್ಯತ್ವ ಸ್ಥಾನದಿಂದ ಸಿ.ಟಿ.ರವಿಯವರನ್ನು ವಜಾಗೊಳಿಸಬೇಕೆಂದು ಬೆಳಗಾವಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಇಲ್ಲಿನ ಸಿ.ಪಿ.ಇ.ಡಿ ಯಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ರ್ಯಾಲಿ ನಡೆಸಲಾಯಿತು.
ಅಣಕು ಶವಯಾತ್ರೆ ನಡೆಸಿ, ಚಪ್ಪಲಿ ಹಾರ ಹಾಕಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ವ್ಯಕ್ತಿಯೊಬ್ಬರಿಗೆ ಸಿ.ಟಿ.ರವಿಯವರ ಮುಖವಾಡ ಹಾಕಿ ಹಾದಿಯುದ್ದಕ್ಕೂ ಆತನ ಮೇಲೆ ವಾಗ್ದಾಳಿ ನಡೆಸುತ್ತಾ, ಚಪ್ಪಲಿ ತೋರಿಸುತ್ತಾ ಪ್ರತಿಭಟನೆ ನಡೆಸಲಾಗಿದೆ.
ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಸಿ.ಟಿ.ರವಿ ಮತ್ತು ಸಚಿವೆ ಲಕ್ಷ್ಮೀಹೆಬ್ಬಾಳ್ಕರ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಸಿ.ಟಿ.ರವಿ ಬಳಸಿದ ಭಾಷೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ಜೊತೆಗೆ ಸಿ.ಟಿ.ರವಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಕೂಡ ದಾಖಲಾಗಿದೆ.
ವಿಧಾನಮಂಡಲದ ಅಧಿವೇಶನದಲ್ಲೇ ಮಹಿಳೆಯರನ್ನು ಅಪಮಾನಿಸಿರುವ ಸಿ.ಟಿ.ರವಿ ಅವರನ್ನು ವಿಧಾನಪರಿಷತ್ ಸದಸ್ಯತ್ವದಿಂದ ವಜಾಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಮಹಿಳೆಯರನ್ನು ಅಪಮಾನಿಸುವುದೇ ಬಿಜೆಪಿಯ ಸಂಸ್ಕೃತಿಯಾಗಿದೆ. ಹಲವಾರು ಬಾರಿ ದುರುದ್ದೇಶಪೂರಿತವಾಗಿಯೇ ಮಹಿಳೆಯರನ್ನು ನಿಂದಿಸಿ ಅವಹೇಳನ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.