ಬೆಂಗಳೂರು,ಡಿ.21- ಸಚಿವೆ ಲಕ್ಷ್ಮೀಹೆಬ್ಬಾಳ್ಕರ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕ್ರಿಮಿನಲ್ ಮೊಕದ್ದಮೆಗೆ ಗುರಿಯಾ ಗಿರುವ ಸಿ.ಟಿ.ರವಿ ಪ್ರಕರಣದಲ್ಲಿ ಪೊಲೀಸರ ವಾದವನ್ನು ಕೇಳದೆ ತೀರ್ಪು ನೀಡಲಾಗಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ವ್ಯಾಖ್ಯಾನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪ್ರಕರಣದಲ್ಲಿ ಬೇರೆ ರೀತಿಯ ಮಾಹಿತಿಗಳನ್ನು ಕೇಳುವ ಸಂದರ್ಭ ದಲ್ಲಿ ಸರ್ಕಾರದ ಪರವಾದ ವಾದ ಕೇಳದೆ ತೀರ್ಪು ಪ್ರಕಟಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣ ನ್ಯಾಯಾಲಯದಲ್ಲಿದೆ. ಹೀಗಾಗಿ ಅದರ ಸತ್ಯಾಸತ್ಯತೆಗಳ ಬಗ್ಗೆ ತಾವು ಹೇಳಿಕೆ ನೀಡಲು ಬಯಸುವುದಿಲ್ಲ ಎಂದರು.ವಿಧಾನಪರಿಷತ್ ವ್ಯಾಪ್ತಿಯಲ್ಲಿ ನಡೆಯುವ ಪ್ರಕರಣಗಳು ಸಭಾಪತಿಯವರ ವ್ಯಾಪ್ತಿಗೊಳಪಡುತ್ತವೆ. ಪೊಲೀಸ್ ಠಾಣೆ ಮೆಟ್ಟಿಲೇರುವ ಅಗತ್ಯವಿಲ್ಲ ಎಂಬ ವಾದಗಳಿವೆ. ಆದರೆ ಅಧಿವೇಶನ ಮುಂದೂಡಿಕೆಯಾಗಿದ್ದ ಸಂದರ್ಭದಲ್ಲಿ ಕೃತ್ಯ ನಡೆದಿದೆ.
ಹೀಗಾಗಿ ಇದು ಸಭಾಪತಿ ವ್ಯಾಪ್ತಿಗೆ ಒಳಪಡುವುದಿಲ್ಲ ಎಂಬ ವಿಶ್ಲೇಷಣೆಯೂ ಇದೆ. ಇನ್ನೂ ಕೆಲವರು ಸದನ ಚಾಲ್ತಿಯಲ್ಲಿತ್ತು. ಹೀಗಾಗಿ ಸಭಾಪತಿಯವರೇ ಇತ್ಯರ್ಥ ಮಾಡಬೇಕಿತ್ತು ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಸಿ.ಟಿ.ರವಿಯವರನ್ನು ಬಂಧಿಸಿದ ಬಳಿಕ ಇಡೀರಾತ್ರಿ ಬೇರೆಕಡೆಯಲ್ಲೆಲ್ಲಾ ಸುತ್ತಾಡಿಸಲಾಗಿದೆ ಎಂಬ ವಿಚಾರ ನನಗೆ ಮಾಹಿತಿ ಇಲ್ಲ. ಸಿ.ಟಿ.ರವಿ ನೀಡಿರುವ ಹೇಳಿಕೆಯನ್ನು ಗಮನಿಸಿದ್ದೇನೆ. ನನ್ನನ್ನು ಕೊಲೆ ಮಾಡಲು ಯತ್ನಿಸಲಾಗಿದೆ ಎಂದು ಸಿ.ಟಿ.ರವಿ ಹೇಳಿರುವ ಕುರಿತು ಪ್ರಕರಣ ದಾಖಲಿಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.
ಸಿ.ಟಿ.ರವಿ ವಿರುದ್ಧ ದಾಳಿ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ 24 ಮಂದಿಯನ್ನು ಬಂಧಿಸಲಾಗಿತ್ತು. ನಂತರ ಬಿಡುಗಡೆ ಮಾಡಲಾಗಿದೆ. ಬಿಡುಗಡೆ ಮಾಡಿರುವ ಕುರಿತು ಸಿ.ಟಿ.ರವಿ ಪ್ರಶ್ನೆ ಮಾಡುತ್ತಿದ್ದಾರೆ. ಅವರು ಎಲ್ಲದಕ್ಕೂ ಆರೋಪ ಮಾಡುತ್ತಾರೆ ಎಂದು ತಿರುಗೇಟು ನೀಡಿದರು.
ಜಾಮೀನನ್ನು ರದ್ದುಗೊಳಿಸಿ ತನಿಖೆ ಮುಂದುವರೆಸಲು, ಅಗತ್ಯ ಕಾನೂನು ಕ್ರಮ ಕೈಗೊಳ್ಳಲು ಚರ್ಚೆ ನಡೆಸಿದ್ದೇವೆ. ಲೆಕ್ಕಾ ಚುಕ್ತಾ ಮಾಡುತ್ತೇವೆ ಎಂದು ಸಿ.ಟಿ.ರವಿ ಹೇಳಿರುವುದಕ್ಕೆ ಚುಕ್ತವಾಗಬಹುದು ಎಂದು ಮಾರ್ಮಿಕವಾಗಿ ಹೇಳಿದರು.
ಗೃಹ ಇಲಾಖೆಯಲ್ಲಿ ಅನ್ಯರ ಹಸ್ತಕ್ಷೇಪ ಸಾಧ್ಯವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಇಲಾಖೆಗಿಂತಲೂ ಉನ್ನತ ಸ್ಥಾನದಲ್ಲಿದ್ದಾರೆ. ಅವರನ್ನು ಹೊರತುಪಡಿಸಿ ಬೇರೆ ಯಾರೂ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಇಲಾಖೆಯ ನಿರ್ವಹಣೆಗೆ ನನಗೆ ಸಂಪೂರ್ಣ ಸ್ವಾತಂತ್ರ್ಯ ಇದೆ. ಇದರಲ್ಲಿ ಯಾವುದೇ ತಗಾದೆಗಳಿಲ್ಲ ಎಂದು ಹೇಳಿದರು.
ಬೆಳಗಾವಿಯ ಅಧಿವೇಶನದಲ್ಲಿ ಪಂಚಮಸಾಲಿಗಳು, ಶಿಕ್ಷಕರು, ವಕೀಲರು, ಕಾರ್ಮಿಕರು, ರೈತರು, ಪರಿಶಿಷ್ಟ ಜಾತಿಗಳು ಸೇರಿದಂತೆ ಅನೇಕ ವರ್ಗಗಳು ತಮ ಬೇಡಿಕೆಗಳಿಗಾಗಿ ಪ್ರತಿಭಟಿಸಿದ್ದಾರೆ. ಅದರ ನಡುವೆಯೂ ಉತ್ತರ ಕರ್ನಾಟಕ ಅಭಿವೃದ್ಧಿಯ ಬಗ್ಗೆ ಸುದೀರ್ಘ ಚರ್ಚೆಯಾಗಿದೆ. ವಕ್‌್ಫ ಮೇಲಿನ ಚರ್ಚೆಯಲ್ಲಿ 45 ಮಂದಿ ಭಾಗಿಯಾಗಿದ್ದರು. ಸಮರ್ಪಕ ಉತ್ತರವನ್ನೂ ನೀಡಲಾಗಿದೆ ಎಂದರು.