Monday, December 23, 2024
Homeರಾಜ್ಯಸಿ.ಟಿ.ರವಿ ಪ್ರಕರಣದಿಂದ ಎಚ್ಚೆತ್ತುಕೊಂಡ ಬಿಜೆಪಿ, ರಾಜ್ಯಸರ್ಕಾರದ ವಿರುದ್ಧ ಒಗ್ಗಟ್ಟಿನ ಹೋರಾಟ

ಸಿ.ಟಿ.ರವಿ ಪ್ರಕರಣದಿಂದ ಎಚ್ಚೆತ್ತುಕೊಂಡ ಬಿಜೆಪಿ, ರಾಜ್ಯಸರ್ಕಾರದ ವಿರುದ್ಧ ಒಗ್ಗಟ್ಟಿನ ಹೋರಾಟ

BJP wakes up after C.T. Ravi case, united fight against state government

ಬೆಂಗಳೂರು,ಡಿ.22- ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ಬಿಜೆಪಿ ಮುಂದಿನ ದಿನಗಳಲ್ಲಿ ರಾಜ್ಯಸರ್ಕಾರದ ವಿರುದ್ಧ ಒಗ್ಗಟ್ಟಿನಿಂದ ಹೋರಾಟಕ್ಕೆ ಧುಮಕಲಿದೆ.

ಕಳೆದ ಗುರುವಾರ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಘಟನೆ ನಂತರ ರಾಜ್ಯಸರ್ಕಾರದ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದನ್ನು ಪಕ್ಷದ ಸಂಘಟನೆಗೆ ಬಳಸಿಕೊಳ್ಳಬೇಕೆಂದು ಕೇಂದ್ರ ವರಿಷ್ಠರು ಸೂಚನೆ ಕೊಟ್ಟಿದ್ದಾರೆ.

ಸರ್ಕಾರ ಈ ಪ್ರಕರಣವನ್ನು ಸರಿಯಾಗಿ ನಿರ್ವಹಣೆ ಮಾಡದಿರುವುದು ಸಾರ್ವಜನಿಕ ವಲಯದಲ್ಲೂ ಟೀಕೆಗೆ ಗ್ರಾಸವಾಗಿದೆ. ಕಾರಣ ಸಚಿವೆ ಲಕ್ಷ್ಮೀಹೆಬ್ಬಾಳ್ಕರ್‌ ಅವರಿಗೆ ರವಿ ಅಶ್ಲೀಲ ಪದಬಳಕೆ ಮಾಡಿದ್ದು ಎಷ್ಟು ಸಮಂಜಸವಲ್ಲವೋ ಅದೇ ರೀತಿ ರವಿಯವರನ್ನು ನಡೆಸಿಕೊಂಡಿದ್ದಕ್ಕೆ ಟೀಕೆಗಳು ವ್ಯಕ್ತವಾಗಿವೆ.

ಪಕ್ಷದೊಳಗೆ ಏನೇ ಭಿನ್ನಾಭಿಪ್ರಾಯ, ಅಪಸ್ವರ ಇದ್ದರೂ ಎಲ್ಲದನ್ನೂ ಬದಿಗೊತ್ತಿ ಬರುವ ದಿನಗಳಲ್ಲಿ ಪಕ್ಷದ ಸಂಘಟನೆಗಳು ಒತ್ತು ನೀಡುವಂತೆ ರಾಜ್ಯಘಟಕಕ್ಕೆ ಕಿವಿಮಾತು ಹೇಳಿದ್ದಾರೆ.
ಇದರ ಸುಳಿವು ಅರಿತೇ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ರವಿ ಬಂಧನದ ನಂತರ ಪಕ್ಷದೊಳಗಿನ ಅಸಮಾಧಾನವನ್ನು ಬದಿಗೊತ್ತಿ ಹಿರಿಯರು ಮತ್ತು ಕಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಮುನ್ನಡೆದಿದ್ದಾರೆ.

ಮುಂದಿನ ದಿನಗಳಲ್ಲಿ ಸರ್ಕಾರ ರವಿಯವರನ್ನು ನಡೆಸಿಕೊಂಡ ರೀತಿ ದೂರು ನೀಡಿದ್ದರೂ ಸಚಿವೆಯ ವಿರುದ್ಧ ದಾಖಲಾಗದ ದೂರು ಗೃಹಸಚಿವರನ್ನು ಕತ್ತಲಲ್ಲಿಟ್ಟು ಪ್ರಭಾವಿ ಸಚಿವರೊಬ್ಬರ ನಿದರ್ಶನದ ಮೇರೆಗೆ ಈ ಘಟನೆ ನಡೆದಿದೆ ಎಂದು ಬಿಂಬಿಸಲು ಬಿಜೆಪಿ ಮುಂದಾಗಿದೆ.

ಸುವರ್ಣ ಸೌಧದಲ್ಲಿ ಘಟನೆ ನಡೆದ ನಂತರ ಗೃಹಸಚಿವ ಡಾ.ಜಿ.ಪರಮೇಶ್ವರ್‌ ಅವರಿಗೆ ಯಾವುದೇ ಮಾಹಿತಿ ಇರಲಿಲ್ಲ ಎಂಬುದು ಬಿಜೆಪಿ ಆರೋಪವಾಗಿದೆ. ಘಟನೆ ನಡೆದು ಸದನವನ್ನು ಮುಂದೂಡಿದಾಗ ಸಭಾಪತಿ ಹೊರಟ್ಟಿ ಅವರ ಕಚೇರಿಗೆ ಬಂದ ಪ್ರಭಾವಿ ಸಚಿವರು ರವಿ ಅವರನ್ನು ಸದಸ್ಯತ್ವದಿಂದ ಅನರ್ಹಗೊಳಿಸುವಂತೆ ಒತ್ತಡ ಹಾಕಿದ್ದರು ಎನ್ನಲಾಗಿದೆ.

ಅಲ್ಲದೆ ಸದನದ ಒಳಗೆ ಲಕ್ಷ್ಮೀ ಹೆಬ್ಬಾಳ್ಕರ್‌ ಬೆಂಬಲಿಗರು ನುಗ್ಗಿ ದಾಂಧಲೆ ನಡೆಸಿದಾಗಲೂ ಸುವರ್ಣಸೌಧದಲ್ಲೇ ಇದ್ದ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಹಿತೇಂದ್ರ, ಬೆಳಗಾವಿ ನಗರ ಪೊಲೀಸ್‌‍ ಆಯುಕ್ತ ಯಡಾ ಮಾರ್ಟಿನ್‌, ಜಿಲ್ಲಾ ಪೊಲೀಸ್‌‍ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಪರಮೇಶ್ವರ್‌ ಅವರಿಗೆ ಮಾಹಿತಿ ನೀಡುವ ಬದಲು ಘಟನೆಯ ವಿವರಣೆಯನ್ನು ಪ್ರಭಾವಿ ಸಚಿವರಿಗೆ ತಿಳಿಸಿದರು ಎಂದು ತಿಳಿದುಬಂದಿದೆ.

ಕಾಂಗ್ರೆಸ್‌‍ ಹಾಗೂ ಆ ಪಕ್ಷದ ವಿರುದ್ಧ ಅತಿಯಾಗಿ ಟೀಕೆ ಮಾಡುತ್ತಿದ್ದ ರವಿ ಪ್ರಕರಣವನ್ನು ತಾರ್ಕಿಕ ಹಂತಕ್ಕೆ ಕೊಂಡೊಯ್ಯಲೇಬೇಕೆಂದು ತೀರ್ಮಾನಿಸಿದ ಪ್ರಭಾವಿ ಸಚಿವರು ಗೃಹಸಚಿವರಿಗೆ ಯಾವುದೇ ಮಾಹಿತಿ ಕೊಡದೆ ಬಂಧನಕ್ಕೆ ನಿರ್ದೇಶನ ನೀಡಿದ್ದರು. ನಂತರ ನಡೆದಿದ್ದಲ್ಲೆವೂ ಇತಿಹಾಸ.

ಸ್ವತಃ ಗೃಹಸಚಿವರೇ ನನಗೆ ಈ ಬಗ್ಗೆ ಮಾಹಿತಿ ಇಲ್ಲ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದೇ ಬಿಜೆಪಿಗೆ ಅಸ್ತ್ರವಾಗಿದೆ. ಇದನ್ನೇ ಮುಂದಿಟ್ಟುಕೊಂಡು ರಾಜ್ಯಾದ್ಯಂತ ಕಾಂಗ್ರೆಸ್‌‍ ವಿರುದ್ಧ ಬೀದಿಗಿಳಿಯಲು ಬಿಜೆಪಿ ಮುಂದಾಗಿದೆ.

ಇನ್ನು ಹೈಕಮಾಂಡ್‌ ಕೂಡ ಪಕ್ಷದೊಳಗೆ ಯಾವುದೇ ಅಸಮಾಧಾನ, ನಾಯಕತ್ವ ಬದಲಾವಣೆ, ಭಿನ್ನಮತೀಯ ಚಟುವಟಿಕೆಗಳು ಯಾವುದೂ ಇರಕೂಡದು ಎಂದು ಸ್ಪಷ್ಟ ಸೂಚನೆ ನೀಡಿದೆ.
ರಾಜ್ಯ ಉಸ್ತುವಾರಿ ಮೋಹನ್‌ ಅಗರ್‌ವಾಲ್‌ ಅವರೇ ಖುದ್ದು ಸರ್ಕಾರದ ವಿರುದ್ಧ ಹೋರಾಟಕ್ಕೆ ನೀಲನಕ್ಷೆ ಸಿದ್ಧಪಡಿಸಿದ್ದಾರೆ.

ಏನೇ ಅಪಸ್ವರಗಳಿದ್ದರೂ ಪಕ್ಷದ ವೇದಿಕೆಯಲ್ಲೇ ಮಾತನಾಡಬೇಕು. ಯಾವುದೇ ಕಾರಣಕ್ಕೂ ಚೌಕಟ್ಟು ಮೀರಬಾರದು ಎಂದು ಸೂಚನೆ ಕೊಟ್ಟಿದ್ದಾರೆ. ಹೀಗಾಗಿಯೇ ಬೆಳಗಾವಿ ಅಧಿವೇಶನದಲ್ಲೂ ಮಾಧ್ಯಮಗಳ ಮುಂದೆ ಅಬ್ಬರಿಸಿದ್ದ ಯತ್ನಾಳ್‌, ರಮೇಶ್‌ ಜಾರಕಿಹೊಳಿ ಮತ್ತಿತರರು ಸದ್ಯಕ್ಕೆ ಮೌನಕ್ಕೆ ಜಾರಿದ್ದಾರೆ.

RELATED ARTICLES

Latest News