ಕಲಬುರಗಿ,ಡಿ.22- ಕೇಂದ್ರ ಸರ್ಕಾರ ರಾಜ್ಯಕ್ಕೆ ಸರಿಯಾದ ಪಾಲು ನೀಡುತ್ತಿಲ್ಲ. ವಸೂಲಿ ಆಗುವ ತೆರಿಗೆಯಲ್ಲಿ ಅರ್ಧಭಾಗ ವಾಪಸ್ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಒಟ್ಟು ತೆರಿಗೆ ಸಂಗ್ರಹದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಒಟ್ಟು 4.50 ಲಕ್ಷ ಕೋಟಿ ರೂ.ಗಳನ್ನು ಕೇಂದ್ರಕ್ಕೆ ನಮಿಂದ ಸಂಗ್ರಹವಾಗುತ್ತಿದೆ. ಆದರೆ ನಮಗೆ ವಾಪಸ್ ನೀಡುತ್ತಿರುವುದು ಒಂದು ರೂಪಾಯಿಗೆ ಹದಿಮೂರು ಪೈಸೆ ಮಾತ್ರ. ಅರ್ಧಭಾಗ ತೆರಿಗೆಯಲ್ಲಿ ವಾಪಸ್ ನೀಡುವುದಾದರೆ 2 ಲಕ್ಷ ಕೋಟಿ ರೂ.ಗೂ ಅಧಿಕ ಮೊತ್ತವನ್ನು ನೀಡಬೇಕಾಗುತ್ತದೆ ಎಂದರು.
ಕೇಂದ್ರ ಸರ್ಕಾರ ಮೊದಲಿನಿಂದಲೂ ಈ ರೀತಿಯ ಅನ್ಯಾಯವನ್ನು ಮಾಡಿಕೊಂಡೇ ಬಂದಿದೆ. ಇತ್ತೀಚಿನ ವರ್ಷಗಳಲ್ಲಿ ಸೂಕ್ತ ನ್ಯಾಯ ದೊರಕಿಸಿಲ್ಲ. ನಮಗಾಗುತ್ತಿರುವ ಅನ್ಯಾಯದ ಬಗ್ಗೆ ಬಿಜೆಪಿಯವರು ಬಾಯಿ ಬಿಡುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಹಣದಿಂದ ಕಲಬುರಗಿಯಲ್ಲಿ ಜಯದೇವ ಆಸ್ಪತ್ರೆಯ 371 ಹಾಸಿಗೆಯನ್ನು ಇಂದು ಉದ್ಘಾಟನೆ ಮಾಡಿದ್ದೇವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕರು ಇದರಲ್ಲಿ ಭಾಗವಹಿಸಿದ್ದಾರೆ ಎಂದರು.
ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಸಚಿವಾಲಯ ರಚಿಸಬೇಕು ಎಂಬ ಬೇಡಿಕೆ ಹಲವು ದಿನಗಳಿಂದ ಇದೆ. ಉತ್ತರ ಕರ್ನಾಟಕ ವಿಮೋಚನಾ ದಿನದಂದೇ ಈ ಬಗ್ಗೆ ಹೇಳಿಕೆ ನೀಡಿದ್ದೇವೆ. ಅದರ ಪರಿಶೀಲನೆ ನಡೆಯುತ್ತಿದೆ ಎಂದರು.
ತೊಗರಿ ಬೆಳೆಗೆ ಪ್ರತ್ಯೇಕ ಪ್ಯಾಕೆಜ್ ನೀಡಬೇಕು ಎಂಬ ಬೇಡಿಕೆಯ ಕುರಿತು ವರದಿ ಪಡೆಯಲಾಗುತ್ತಿದ್ದು, ಅದರ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಬೆಳಗಾವಿಯಲ್ಲಿ ನಡೆಯಲಿರುವ ಕಾಂಗ್ರೆಸ್ ಮಹಾ ಅಧಿವೇಶನವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ದೇಶಾದ ಪ್ರಮುಖ ನಾಯಕರು ಭಾಗವಹಿಸುತ್ತಿದ್ದಾರೆ. ಅಂದು ವಿಸ್ತೃತ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಕೂಡ ನಡೆಯುತ್ತಿದೆ. ಬಿಜೆಪಿಯ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿಯವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಬಳಸಿರುವ ಪದ ಅತ್ಯಂತ ಅನಾಗರೀಕವಾದುದು.
ಕ್ರಿಮಿನಲ್ ಅಪರಾಧ ಕೂಡ. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಪದಾಧಿಕಾರಿಯಾಗಿದ್ದ ಸಿ.ಟಿ.ರವಿಯ ಬಾಯಲ್ಲಿ ಆ ರೀತಿ ಪದಬಳಕೆಯಾಗಿರುವುದು ಸಮರ್ಥನೀಯವಲ್ಲ. ಸಿ.ಟಿ.ರವಿ ವಿಧಾನಮಂಡಲದ ಅಧಿವೇಶನದಲ್ಲಿ ಆ ರೀತಿ ಹೇಳಿರುವುದು ಸತ್ಯ ಎಂದರು.