ಬೆಂಗಳೂರು, ನ.27- ಅಧಿಕಾರ ಹಂಚಿಕೆಯ ಗೊಂದಲಗಳು ತೀವ್ರವಾಗಿರುವ ನಡುವೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಪದಶಕ್ತಿ, ವಿಶ್ವಶಕ್ತಿ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಆದರೆ ಈ ಪೋಸ್ಟ್ ತಾವು ಮಾಡಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡುವೆ ಅಧಿಕಾರ ಹಂಚಿಕೆಯ ಸಂಬಂಧ ಪಟ್ಟಂತೆ ದೆಹಲಿಯಲ್ಲಿ ಮಾತುಕತೆಯಾಗಿದ್ದು, ಸಿದ್ದರಾಮಯ್ಯ ಅವರು ಎರಡೂವರೆ ವರ್ಷದ ಬಳಿಕ ಅಧಿಕಾರ ಬಿಟ್ಟು ಕೊಡುವ ಭರವಸೆ ನೀಡಿದ್ದರು ಎಂದು ರಾಜಕಾರಣದಲ್ಲಿ ಭಾರಿ ಚರ್ಚೆಗಳಾಗುತ್ತಿವೆ.
ಈ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರು ತಮ ಸಾಮಾಜಿಕ ಜಾಲತಾಣದಲ್ಲಿ, ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಅವರಿಗೆ ಕೊಟ್ಟ ಮಾತು ನೆನಪಿಸಿದ್ದಾರೆ. ಇದೇ ಮಾತನ್ನು ನಿನ್ನೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಂವಿಧಾನ ದಿನಾಚರಣೆಯಲ್ಲಿ ಡಿ.ಕೆ.ಶಿವಕುಮಾರ್ ಹೇಳಿದ್ದರು.
ತಾವು ಸರಿರಾತ್ರಿಯಲ್ಲೂ ಕೆಲಸ ಮಾಡುತ್ತಿರುವುದು, ಅರ್ಧ ರಾತ್ರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಿರುವ ಫೋಟೋವನ್ನು ಲಗತ್ತಿಸಿ ವರ್ಡ್ ಪವರ್ ಈಸ್, ವರ್ಲ್‌್ಡ ಪವರ್ ಎಂದು ಪೋಸ್ಟ್ ಮಾಡಿದ್ದಾರೆ. ನಿನ್ನೆ ಆಡಿದ ಮಾತುಗಳನ್ನೇ ಅದೇ ವಾಕ್ಯಗಳನ್ನು ಇಂಗ್ಲಿಷ್ ಗೆ ತುರ್ಜುಮೆ ಮಾಡಿ, ಪದ ಶಕ್ತಿಯೇ ವಿಶ್ವಶಕ್ತಿ ಎಂಬರ್ಥದ ಈ ವಾಕ್ಯ ಭಾರೀ ಚರ್ಚೆಗೆ ಗ್ರಾಸವಾಗಿತ್ತು ವಿಶ್ವದಲ್ಲಿ ಅತಿ ದೊಡ್ಡ ಬಲ ಎಂದರೆ, ಅದು ಕೊಟ್ಟ ಮಾತನ್ನು ನಡೆಸಿಕೊಡುವುದು. ನ್ಯಾಯಾಧೀಶರೇ ಆಗಿರಲಿ,ಅಧ್ಯಕ್ಷರೇ ಆಗಲಿ, ನನ್ನನ್ನೂ ಸೇರಿದಂತೆ ಯಾರೇ ಆಗಲಿ ನುಡಿದಂತೆ ನಡೆಯಬೇಕು ಎಂದಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲೇ ಈ ಪೋಸ್ಟ್ ಕಾಣಿಸಿಕೊಂಡಿದೆ.
ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಈವರೆಗೂ ಡಿ.ಕೆ.ಶಿವಕುಮಾರ್ ಅವರ ಆಪ್ತ ಬಳಗ ಮಾತ್ರ ಲಾಬಿ ನಡೆಸುತ್ತಿತ್ತು. ಡಿ.ಕೆ.ಶಿವಕುಮಾರ್ ನೇರವಾಗಿ ಅಖಾಡಕ್ಕೆ ಇಳಿದಿರಲಿಲ್ಲ. ಒಂದು ಹಂತದಲ್ಲಿ ತಾವು ಮುಖ್ಯಮಂತ್ರಿ ಹುದ್ದೆ ಕೇಳಿಲ್ಲ ಎಂದು ಕೇಳುವ ಮೂಲಕ ಅಚ್ಚರಿ ಮೂಡಿಸಿದ್ದರು .ಪ್ರತಿ ಬಾರಿಯೂ ಸಿದ್ದರಾಮಯ್ಯ ಅಧಿಕಾರ ಪೂರ್ಣಗೊಳಿಸುವುದಾಗಿ ಹೇಳಿದ್ದಾರೆ, ಅವರಿಗೆ ಶುಭವಾಗಲಿ, ಅಭಿನಂದನೆಗಳು ಎಂಬರ್ಥದಲ್ಲೇ ಮಾತನಾಡುತ್ತಾ ತಾವು ತೆರೆಮರೆಯಲ್ಲಿದ್ದರು. ಅವರ ಬೆಂಬಲಿಗರು ದೆಹಲಿ ಯಾತ್ರೆ ನಡೆಸಿ ನಾಯಕತ್ವ ಬದಲಾವಣೆಗೆ ವರಿಷ್ಠರ ಮೇಲೆ ಒತ್ತಡ ಹೇರುತ್ತಿದ್ದರು.
ಈಗ ಅಕಾಲಿಕವಾದಂತಹ ಪೋಸ್ಟ್ ಹಾಕುವ ಮೂಲಕ ಡಿ.ಕೆ. ಶಿವಕುಮಾರ್ ರಂಗ ಪ್ರವೇಶದ ಸುಳಿವು ನೀಡಿದ್ದಾರೆ ಎಂದು ವಿಶ್ಲೇಷಿಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಯಲ್ಲಾಗಿರುವ ಮಾತುಕತೆಯ ಬಗ್ಗೆ ಯಾವುದೇ ಹೇಳಿಕೆಗಳನ್ನು ಈವರೆಗೂ ನೀಡುತ್ತಿಲ್ಲ. ಬದಲಾಗಿ ಹೈಕಮಾಂಡ್ ಹೇಳಿದಂತೆ ತಾವು ನಡೆದುಕೊಳ್ಳುವುದಾಗಿ ಪ್ರತಿಪಾದಿಸುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಕೂಡ ಹೈಕಮಾಂಡ್ ಮಾತಿಗೆ ಬದ್ಧರಾಗಿರಬೇಕು ಎಂಬ ಆಗ್ರಹ ಸಿದ್ದರಾಮಯ್ಯ ಅವರದಾಗಿದೆ.
ಆರಂಭದಲ್ಲಿ ತಾವೇ ಐದು ವರ್ಷ ಅವಧಿ ಪೂರ್ಣಗೊಳಿಸುವುದಾಗಿ ಹೇಳುತ್ತಿದ್ದ ಸಿದ್ದರಾಮಯ್ಯ ಡಿ.ಕೆ. ಬಣದ ಶಾಸಕರ ದೆಹಲಿಯಾತ್ರೆ ಬಳಿಕ ಮೆತ್ತಗಾಗಿದ್ದು, ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುತ್ತೇನೆ ಎನ್ನುತ್ತಿದ್ದಾರೆ.ಡಿ.ಕೆ.ಶಿವಕುಮಾರ್ ಅವರ ಸಹೋದರರೂ ಆಗಿರುವ ಮಾಜಿ ಸಂಸದ ಡಿ.ಕೆ.ಸುರೇಶ್, ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ ಎಂದು ಹೇಳುವ ಮೂಲಕ ದೆಹಲಿಯ ವಚನವನ್ನು ನೆನಪು ಮಾಡಿಕೊಟ್ಟಿದ್ದರು.
ಆ ಒಪ್ಪಂದ, ಮಾತುಕತೆ, ಕೊಟ್ಟ ಮಾತು ಏನು ಎಂದು ಈವರೆಗೂ ಯಾರೂ ಬಹಿರಂಗಪಡಿಸಿಲ್ಲ. ಡಿ.ಕೆ.ಶಿವಕುಮಾರ್ ಕೂಡ ನೇರವಾಗಿ ಹೇಳದೆ ದೆಹಲಿಯಲ್ಲಿ ನಮ ಐದಾರು ಮಂದಿಯ ನಡುವೆ ನಡೆದ ಒಪ್ಪಂದದ ವ್ಯಾಪಾರ ಎಂದು ಗುಟ್ಟಾಗಿ ಹೇಳುವ ಮೂಲಕ ರಾಜಕೀಯವನ್ನು ಮತ್ತಷ್ಟು ಕುಲುಮೆಯನ್ನಾಗಿ ಮಾಡಿದ್ದರು.
ನಾನು ಪೋಸ್ಟ್ ಮಾಡಿಲ್ಲ, ಅದು ನಕಲಿ:
ಇಂದು ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸುವ ಮುನ್ನಾ ಸುದ್ದಿಗಾರರೊಂದಿಗೆ ಮಾತನಾಡಿದ್ದ ಡಿ.ಕೆ.ಶಿವಕುಮಾರ್, ಆ ಪೋಸ್ಟ್ ತಾವು ಮಾಡಿಲ್ಲ. ಕೊಟ್ಟ ಮಾತಿನ ಬಗ್ಗೆ ನಾನೆಲ್ಲೂ ಪ್ರಸ್ತಾಪ ಮಾಡಿಲ್ಲ. ಸಾಮಾಜಿಕ ಜಾಲತಾಣದಲ್ಲಿರುವ ಪೋಸ್ಟ್ ನಕಲಿ ಎಂದಿದ್ದಾರೆ.
