ಮಂಡ್ಯ,ಡಿ.22- ಒಂಟಿ ಮನೆಗೆ ನುಗ್ಗಿದ ದುಷ್ಕರ್ಮಿಯೊಬ್ಬ ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲೀಕನನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಪಾಂಡವಪುರ ತಾಲ್ಲೂಕಿನ ಕ್ಯಾತನಹಳ್ಳಿಯ ತೋಟದ ಮನೆಯಲ್ಲಿ ನಡೆದಿದೆ.
ರಮೇಶ್ ಕೊಲೆಯಾದ ವ್ಯಕ್ತಿ. ಕಳೆದ ರಾತ್ರಿ ಮರ ಕತ್ತರಿಸುವ ಯಂತ್ರದೊಂದಿಗೆ ಒಂಟಿ ಮನೆಗೆ ಬಂದ ದುಷ್ಕರ್ಮಿ ಯಂತ್ರವನ್ನು ಆನ್ಲೈನ್ನಲ್ಲಿ ಆರ್ಡರ್ ಮಾಡಿದ್ದೀರಾ ಎಂದು ತಿಳಿಸಿದ್ದಾನೆ.
ಈ ವೇಳೆ ಪತ್ನಿ ಯಶೋದಮ, ನಾವು ಯಾವ ಯಂತ್ರವನ್ನೂ ಆರ್ಡರ್ ಮಾಡಿಲ್ಲ ಎಂದು ಬಾಗಿಲು ಹಾಕಿಕೊಂಡಿದ್ದಾರೆ. ತಕ್ಷಣ ಯಂತ್ರವನ್ನು ಚಾಲನೆ ಮಾಡಿ ಯಶೋದಮನ ಕುತ್ತಿಗೆ ಹಿಡಿದಿದ್ದಾನೆ.
ಯಂತ್ರದ ಬ್ಲೇಡ್ ಮಹಿಳೆಯ ಕತ್ತಿಗೆ ತಾಗಿ ಗಾಯಗೊಂಡು ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದಾರೆ. ನಂತರ ಮನೆಯೊಳಗೆ ನುಗ್ಗಿದ ಆರೋಪಿ ಮಲಗಿದ್ದ ರಮೇಶ್ ಅವರನ್ನು ನೋಡಿ ಅವರ ಕುತ್ತಿಗೆಗೆ ಯಂತ್ರವನ್ನು ಇಟ್ಟಿದ್ದಾನೆ.
ಅಷ್ಟರಲ್ಲಿ ಪತ್ನಿ ಎಚ್ಚರಗೊಂಡು ಅವರಿದ್ದ ಕೊಠಡಿಯ ಬಾಗಿಲನ್ನು ಬಂದ್ ಮಾಡಿ ಅಕ್ಕಪಕ್ಕದವರನ್ನು ಕೂಗಿದ್ದಾಳೆ. ಅಷ್ಟರೊಳಗೆ ಕೊಲೆ ನಡೆದು ಹೋಗಿತ್ತು ಎನ್ನಲಾಗಿದೆ.
ನಂತರ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ದುಷ್ಕರ್ಮಿಯನ್ನು ಮನೆಯೊಳಗೆ ಕೂಡಿ ಹಾಕಿದ್ದು, ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಈ ಘಟನೆಯಿಂದ ಪಾಂಡವಪುರ ತಾಲ್ಲೂಕಿನ ಜನತೆ ಬೆಚ್ಚಿ ಬಿದ್ದಿದ್ದಾರೆ.