ಬೆಂಗಳೂರು,ಡಿ.23– ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವಿನ ಕಹಿ ಮಾಸುವ ಮುನ್ನವೇ ಬೆಂಗಳೂರಿನಲ್ಲಿ ಹೆರಿಗೆಯಾದ ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯೊಬ್ಬರು ಬಹು ಅಂಗಾಂಗ ವೈಫಲ್ಯ ಹಾಗೂ ಇತರ ಆರೋಗ್ಯ ಸಮಸ್ಯೆಗಳಿಂದ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ವರದಿಯಾಗಿದೆ.
ಅನುಷಾ ಎಂಬ ಮಹಿಳೆ ಬೆಂಗಳೂರಿನ ನಾಗರಬಾವಿಯ ಖಾಸಗಿ ಆಸ್ಪತ್ರೆಯಲ್ಲಿ
ಕೊನೆ ಉಸಿರೆಳೆದಿದ್ದು, ಕುಟುಂಬದವರ ದುಃಖ ಕರುಳು ಹಿಂಡುವಂತಿದೆ.ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಗರ್ಜೆ ಗ್ರಾಮದವರಾದ ಅನುಷ ಹೆರಿಗೆಗಾಗಿ ತರೀಕೆರೆಯ ರಾಜ್ ನರ್ಸಿಂಗ್ ಹೋಂಗೆ ದಾಖಲಾಗಿದ್ದರು.
ನಾರ್ಮಲ್ ಡೆಲಿವರಿಯ ಮೂಲಕ ಮಗು ಜನಿಸಿತ್ತು. ಹೆರಿಗೆಗೂ ಮುನ್ನ ಸ್ಕ್ಯಾನಿಂಗ್ ಮಾಡಿದಾಗ ಕಿಡ್ನಿಸ್ಟೋನ್ ಇದೆ ಎಂಬ ವರದಿಯಿದ್ದು, ಹೆರಿಗೆಯಾದ ಬಳಿಕ ತಿಂಗಳ ನಂತರ ಶಿವಮೊಗ್ಗದ ಖಾಸಗಿ ನರ್ಸಿಂಗ್ ಹೋಂನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ವೇಳೆ ಕರುಳಿಗೆ ಹಾನಿಯಾಗಿತ್ತು ಎಂಬ ಆರೋಪವನ್ನು ಕುಟುಂಬದ ಸದಸ್ಯರು ಮಾಡುತ್ತಿದ್ದಾರೆ.
ವೈದ್ಯರ ಎಡವಟ್ಟನ್ನು ಮುಚ್ಚಿಡಲಾಗಿದ್ದು, ಅನುಷಾ ಅವರನ್ನು ಮನೆಗೆ ಕರೆತಂದ ಬಳಿಕ ಆಕೆಯ ಕೈಕಾಲಿನಲ್ಲಿ ಊತ ಕಾಣಿಸಿಕೊಂಡಿತ್ತು. ಮತ್ತೆ ಆಸ್ಪತ್ರೆಗೆ ಹೋದಾಗ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿ ಖಾಸಗಿ ಆಸ್ಪತ್ರೆಯ ವೈದ್ಯರು ಸಾಗಿಹಾಕಿದ್ದರು. ಆದರೆ ಅನುಷ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದಾಗಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಮತ್ತೊಂದು ಆಸ್ಪತ್ರೆ ಅನುಷಾಗೆ ಜಾಂಡೀಸ್ ಇದೆ ಎಂದು ಗುರುತಿಸಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆತಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮಹಿಳೆಯ ಆರೋಗ್ಯದ ವಿಚಾರದಲ್ಲಿ ದಿನಕ್ಕೊಂದು ಕತೆ ಹೇಳಿ ಕುಟುಂಬದ ಸದಸ್ಯರಿಂದ ಸಿಟಿ ಸ್ಕ್ಯಾನಿಂಗ್, ಎಂಆರ್ಐ ಸ್ಕ್ಯಾನಿಂಗ್, ಶಸ್ತ್ರಚಿಕಿತ್ಸೆ ಎಂಬೆಲ್ಲಾ ಕಾರಣ ನೀಡಿ ಹಣ ಸುಲಿಗೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.ಲಿವರ್ ಸಮಸ್ಯೆ ಎಂದು ಮತ್ತೊಂದು ಆಪರೇಷನ್ ಮಾಡಲಾಗಿದೆ. ಅಂದಿನಿಂದ ಆಕೆ ಕಣ್ಣು ಬಿಡದೆ ಅರೆ ಪ್ರಜ್ಞಾವಸ್ಥೆಗೆ ತಲುಪಿದ್ದಾರೆ. ಮಹಿಳೆಗೆ ಹೃದಯದ ಸಮಸ್ಯೆ ಇದೆ ಎಂದು ವೈದ್ಯರು ಹೇಳಿ ಮತ್ತಷ್ಟು ಆತಂಕ ಮೂಡಿಸಿದ್ದಾರೆ.
ಸತತ ಚಿಕಿತ್ಸೆ ಹಾಗೂ ವೈದ್ಯಕೀಯ ನಿಗಾವಣೆ ಹೊರತಾಗಿ ಮಹಿಳೆ ಮೃತಪಟ್ಟಿದ್ದಾರೆ. ವೈದ್ಯರ ನಿರ್ಲಕ್ಷ್ಯವೇ ತಮ ಪತ್ನಿಯ ಸಾವಿಗೆ ಕಾರಣ ಎಂದು ಆಕೆಯ ಪತಿ ಆರೋಪಿಸಿದ್ದಾರೆ.
ನಗುಮುಖದೊಂದಿಗೆ ಲಕ್ಷಣವಾಗಿದ್ದ ಅನುಷಾ ಕೊನೆಯ ದಿನಗಳಲ್ಲಿ ಆಸ್ಪತ್ರೆಯಲ್ಲಿ ನರಳಿದ್ದನ್ನು ನೋಡಿ ಕುಟುಂಬಸ್ಥರು ನೊಂದುಕೊಂಡಿದ್ದಾರೆ. ಕೊನೆಗೂ ಆಕೆ ಉಳಿಯದೆ ಮಗು ಅನಾಥವಾಗಿದ್ದು, ಕುಟುಂಬ ಸದಸ್ಯರ ದುಃಖ ಮೇರೆ ಮೀರಿದೆ.
ಬಳ್ಳಾರಿಯಲ್ಲಿ ಸಿಸೇರಿಯನ್ ಚಿಕಿತ್ಸೆಗೆ ಒಳಗಾದ ಐದು ಮಂದಿ ಮಹಿಳೆಯರು ಮೃತಪಟ್ಟಿದ್ದರು. ಅದರ ಬೆನ್ನಲ್ಲೇ ಬೆಳಗಾವಿಯಲ್ಲೂ ಒಂದಷ್ಟು ಪ್ರಕರಣಗಳು ವರದಿಯಾಗಿದ್ದವು. ನಿನ್ನೆ ಕೂಡ ಮತ್ತೊಬ್ಬ ಬಾಣಂತಿಯ ಸಾವಿನ ಪ್ರಕರಣ ಬೆಳಕಿಗೆ ಬಂದು ಎದೆ ನಡುಗಿಸಿತ್ತು. ಈಗ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿನ ಮಹಿಳೆಯ ಸಾವು ಸಾರ್ವಜನಿಕರಲ್ಲಿ ಆಕ್ರೋಶವನ್ನು ಹೆಚ್ಚಿಸಿದೆ.