ಮಂಗಳೂರು, ಡಿ. 23- ಸೈಬರ್ ವಂಚಕರಿಗೆ ಅಕ್ರಮವಾಗಿ ಸಿಮ್ ಕಾರ್ಡ್ ಪೂರೈಸುತ್ತಿದ್ದ ಆರೋಪಿಯನ್ನು ಮಂಗಳೂರಿನ ಸೆನ್ ಕ್ರೈಂ ಬ್ರಾಂಚ್ ಪೊಲೀಸರು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕಣಾತಲ ವಾಸುದೇವ ರೆಡ್ಡಿ (25) ಎಂದು ಗುರುತಿಸಲಾಗಿದೆ. ಆರೋಪಿ ಸೈಬರ್ ವಂಚಕರಿಗೆ ಭಾರತದಿಂದ ವಿವಿಧ ಕಂಪನಿಗಳ 500ಕ್ಕೂ ಹೆಚ್ಚು ಸಿಮ್ಗಳನ್ನು ಪೂರೈಕೆ ಮಾಡಿದ್ದ ಆರೋಪ ಎದುರಿಸುತ್ತಿದ್ದಾನೆ.
ಆರೋಪಿ ಕಣಾತಲ ವಾಸುದೇವ ರೆಡ್ಡಿ ಓಡಿಶಾ ಮೂಲದವನು. ಸೈಬರ್ ವಂಚನೆ ಪ್ರಕರಣದ ತನಿಖೆ ನಡೆಸುತ್ತಿದ್ದ ವೇಳೆ ಆರೋಪಿ ಕಣಾತಲ ವಾಸುದೇವ ರೆಡ್ಡಿ ಸಿಮ್ ಪೂರೈಕೆ ಮಾಹಿತಿ ಮಂಗಳೂರಿನ ಸೆನ್ ಪೊಲೀಸರಿಗೆ ಗೊತ್ತಾಗಿದೆ. ಕೂಡಲೇ ಕಾರ್ಯಪ್ರವತ್ತರಾದ ಪೊಲೀಸರು ಆರೋಪಿ ಕಣಾತಲ ವಾಸುದೇವ ರೆಡ್ಡಿಯ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ವಂಚಕ ನಡವೂಲು ವೀರವೆಂಕಟ ಸತ್ಯನಾರಾಯಣ ರಾಜು ಎಂಬುವನು ಹಣ ವಿನಿಯೋಗಿಸಲು ವಾಟ್ಸಾಪ್ ಮೂಲಕ ನಕಲಿ ಲಿಂಕ್ ಕಳುಹಿಸಿ ಅದರ ಮೂಲಕ ಲಕ್ಷಾಂತರ ರೂ. ದೋಚಿದ್ದನು. ಹೀಗೆ, ಹಂತ ಹಂತವಾಗಿ 10,84,017 ರೂಪಾಯಿ ಪಡೆದು ವಂಚನೆ ಎಸಗಿದ್ದಾನೆ. ಪ್ರಕರಣ ಸಂಬಂಧ ಪೊಲೀಸರು ಈಗಾಗಲೇ ಸೈಬರ್ ವಂಚಕ ನಡವೂಲು ವೀರವೆಂಕಟ ಸತ್ಯನಾರಾಯಣ ರಾಜುನನ್ನು ಬಂಧಿಸಿದ್ದಾರೆ.
ಆರೋಪಿ ನಡವೂಲು ವೀರವೆಂಕಟ ಸತ್ಯನಾರಾಯಣ ರಾಜುನನ್ನು ವಿಚಾರಣೆಗೆ ಒಳಪಡಿಸಿದಾಗ ಸಿಮ್ ಮಾರಾಟ ದಂಧೆಯ ಬಗ್ಗೆ ಬಾಯಿ ಬಿಟ್ಟಿದ್ದಾನೆ. ಕೂಡಲೇ ಪೊಲೀಸರು ಕಣಾತಲ ವಿರುದ್ಧ ಲುಕ್ಔಟ್ ನೋಟಿಸ್ ಹೊರಡಿಸಿದ್ದರು. ಆರೋಪಿ ಕಣಾತಲ ದುಬೈಗೆ ತೆರಳು ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ, ಇಲ್ಲಿನ ಇಮಿಗ್ರೇಶನ್ ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆದರು. ಇನ್ನುಳಿದ ಆರೋಪಿಗಳ ಪತ್ತೆಗೆ ಮಂಗಳೂರು ಪೊಲೀಸರಿಂದ ತನಿಖೆ ಮುಂದುವರೆದಿದೆ.
ಪ್ರಕರಣ ಸಂಬಂಧ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅರ್ಗವಾಲ್ ಮಾತನಾಡಿ, ಮೂಡಬಿದಿರೆ ನಿವಾಸಿಯೊಬ್ಬರು ಸೈಬರ್ ವಂಚನೆ ಬಗ್ಗೆ ದೂರು ನೀಡಿದ್ದರು. ತನಿಖೆ ಕೈಗೊಂಡು ಹಣ ವರ್ಗಾವಣೆಯಾದ ಖಾತೆಯನ್ನು ಫ್ರೀಜ್ ಮಾಡಿದ್ದೇವು. 9,50,000 ಹಣವನ್ನು ನಾವು ಫ್ರೀಝ್ ಮಾಡಿದ್ದೇವೆ ಎಂದು ಹೇಳಿದರು.
ಸತ್ಯನಾರಾಯಣ ರಾಜು ಬೇರೆ ಬೇರೆಯವರ ಹೆಸರಿನಲ್ಲಿ ಸಿಮ್ ಕಾರ್ಡ್ ಪಡೆಯುತ್ತಿದ್ದನು. ದುಬೈನಲ್ಲಿದ್ದ ವಿನ್ಸೆಕ್ಟ್ ಎಂಬ ಕಂಪೆನಿಗೆ ಈ ಸಿಮ್ ಪೂರೈಸುತ್ತಿದ್ದನು. ಪ್ರಾಥಮಿಕ ಮಾಹಿತಿ ಪ್ರಕಾರ ಇದು ಚೀನಾ ಮೂಲದ ಕಂಪನಿಯಂದು ಗೊತ್ತಾಗಿದೆ. ದುಬೈನಲ್ಲಿ ಕಾಲ್ ಸೆಂಟರ್ ತೆರೆದು ಜನರಿಗೆ ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಎಂದು ಹೇಳಿ ವಂಚನೆ ಮಾಡುತ್ತಿತ್ತು ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
ಸತ್ಯನಾರಾಯಣ ರಾಜು ವಿಚಾರಣೆ ವೇಳೆ ಮುತ್ತು ಶಿವ ಮತ್ತು ಕಣಾತಲ ವಾಸುದೇವ ರೆಡ್ಡಿ ಎಂಬ ಇಬ್ಬರ ಹೆಸರುಗಳ ಬಗ್ಗೆ ಬಾಯಿಬಿಟ್ಟಿದ್ದನು. ಇವರಿಬ್ಬರು ದುಬೈನಲ್ಲಿ ಆಪರೇಟ್ ಮಾಡುತ್ತಿದ್ದರು. ಇಬ್ಬರ ಸಂಪೂರ್ಣ ಮಾಹಿತಿ ಪಡೆದು ಲುಕ್ ಔಟ್ ನೋಟೀಸ್ ಜಾರಿ ಮಾಡಿದ್ದೇವು. ಲುಕ್ಔಟ್ ಜಾರಿ ಬಳಿಕ ಮುತ್ತು ಶಿವನನ್ನು ಮೂರು ತಿಂಗಳ ಹಿಂದೆ ಬಂದಿಸ್ದೆಿವು. ಎರಡುದಿನದ ಹಿಂದೆ ದೆಹಲಿಯಿಂದ ದುಬೈಗೆ ಹೋಗುವಾಗ ವಾಸುದೇವ ರೆಡ್ಡಿಯನ್ನು ಬಂಧಿಸಿದ್ದೇವೆ ಎಂದು ಹೇಳಿದರು.