ಹಾಸನ,ಡಿ.24– ರಾಜ್ಯದಲ್ಲಿ ಮತ್ತೊಮೆ ಮೈತ್ರಿ ಸರ್ಕಾರ ಶೀಘ್ರದಲ್ಲೇ ಬಂದೇ ಬರುತ್ತದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಸಕಲೇಶಪುರದಲ್ಲಿ ನಡೆದ ಕಾಫಿ ಬೆಳೆಗಾರರ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಮುಂದೆ ಜೆಡಿಎಸ್-ಬಿಜೆಪಿ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದೇ ಬರುತ್ತದೆ. ನಾನು ಸಿಎಂ ಆಗಿದ್ದ ಎರಡು ಅವಧಿಗಳಲ್ಲಿ ಅಪೂರ್ಣವಾಗಿರುವ ಎಲ್ಲಾ ಕೆಲಸಗಳನ್ನೂ ಆಗ ನಾವು ಮಾಡಿ ಮುಗಿಸುತ್ತೇವೆ ಎಂದರು.
2006ರಲ್ಲಿ ಜೆಡಿಎಸ್ ಮತ್ತು ಬಿಜೆಪಿ ಸಮಿಶ್ರ ಸರಕಾರ ರಚನೆಯಾದಾಗ ಅನೇಕ ಜನಪರ ಕಾರ್ಯಕ್ರಮಗಳನ್ನು ನೀಡಿದ್ದೇವೆ.ಮುಂದೆ ನಿಮೆಲ್ಲರ ಆಶೀರ್ವಾದದಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ ಬರುವ ಆಶಯವಿದೆ. ನನ್ನ ಕನಸಿನ ಕೆಲವು ಶಾಶ್ವತ ಯೋಜನೆಗಳು ಹಾಗೆಯೇ ಉಳಿದಿವೆ. ಅವುಗಳನ್ನೆಲ್ಲಾ ಸಾಕಾರಗೊಳಿಸಬೇಕಿದೆ. ರೈತರ ಬದುಕನ್ನು ಕಟ್ಟಿಕೊಡುತ್ತೇವೆ ಎಂದು ಕೇಂದ್ರ ಸಚಿವರು ನುಡಿದರು.
ಕಾಫಿ ಬೆಳೆಗಾರರಿಗೆ ಸಚಿವರ ಅಭಯ:
ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಸಕಲೇಶಪುರಕ್ಕೆ ಬಂದಿದ್ದು, ಕಾಫಿ ಬೆಳೆಗಾರರ ಸಮಸ್ಯೆಗಳಿಗೆ ಖಂಡಿತವಾಗಿಯೂ ಪರಿಹಾರ ಸಿಕ್ಕೇ ಸಿಗುತ್ತದೆ ಎನ್ನುವ ವಿಶ್ವಾಸ ನನಗಿದೆ. ಸಕಲೇಶಪುರ ಜನರು ಆನೆ ಹಾವಳಿಗೆ ತುತ್ತಾಗಿ ಬಹಳಷ್ಟು ಕಷ್ಟ ಎದುರಿಸುತ್ತಿದ್ದಾರೆ. ಈ ಬಗ್ಗೆ ದೆಹಲಿ ಮಟ್ಟದಲ್ಲಿ ಚರ್ಚೆಗಳು ನಡೆದಿವೆ. ನಾನೂ ಮನವಿ ಮಾಡಿದ್ದೇನೆ ಎಂದರು.
ಕೇಂದ್ರದಲ್ಲಿ ಪರಿಸರ ಇಲಾಖೆ ಸಚಿವರು ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಅವರ ಗಮನಕ್ಕೆ ಮತ್ತೊಮೆ ಈ ವಿಷಯ ತರುತ್ತೇನೆ. ಪಿಯೂಷ್ ಗೋಯಲ್ ಮತ್ತು ನಾನು ಭೇಟಿ ಮಾಡಿ ಮನವಿ ಮಾಡುತ್ತೇವೆ. ಆನೆ ಕಾರಿಡಾರ್ ನಿರ್ಮಾಣ ಮಾಡಲು ಅರಣ್ಯ ಇಲಾಖೆ ಹದಿನೈದು ಸಾವಿರ ಎಕರೆ ಗುರುತಿಸಿದೆ. ರೈತರು ಮೂರು ಸಾವಿರ ಎಕರೆ ಬಿಟ್ಟುಕೊಡಲು ಸಿದ್ದರಿದ್ದಾರೆ. ಆದರೆ ಆ ಯೋಜನೆ ನೆನೆಗುದಿಗೆ ಬಿದ್ದಿದೆ. ನಾನು ಮುಖ್ಯಮಂತ್ರಿಯಾದಾಗ ತಡೆಗೋಡೆ ನಿರ್ಮಾಣ ಮಾಡಲು ನೂರು ಕೋಟಿ ಬಿಡುಗಡೆ ಮಾಡಿದ್ದೆ ಎಂದು ಅವರು ಮಾಹಿತಿ ನೀಡಿದರು.
ಮಾಜಿ ಸಚಿವರಾದ ಹೆಚ್.ಕೆ.ಕುಮಾರಸ್ವಾಮಿ, ಮೋಟಮ, ಕರ್ನಾಟಕ ಗ್ರೋವರ್ಸ್ ಫೆಡರೇಶನ್ ಅಧ್ಯಕ್ಷ ಡಾ.ಹೆಚ್.ಟಿ. ಮೋಹನ್ ಕುಮಾರ್, ಸಂಸದರಾದ ತೇಜಸ್ವಿ ಸೂರ್ಯ, ಶ್ರೇಯಸ್ ಪಟೇಲ್, ಶಾಸಕರಾದ ಎಸ್.ಮಂಜುನಾಥ್, ಹೆಚ್.ಕೆ. ಸುರೇಶ್, ಮಂಥರ್ ಗೌಡ, ಸ್ವರೂಪ್ ಪ್ರಕಾಶ್, ಕಾಫಿ ಮಂಡಳಿ ಅಧ್ಯಕ್ಷ ಡಿ.ಜೆ.ದಿನೇಶ್ ಹಾಗೂ ಕಾಫಿ ಬೆಳೆಗಾರರು ಉಪಸ್ಥಿತರಿದ್ದರು.