ಬೆಂಗಳೂರು, ಡಿ.24- ಅನಾರೋಗ್ಯದ ನಿಮಿತ್ತ ಅಮೆರಿಕಾಕ್ಕೆ ತೆರಳಿರುವ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ಇಂದು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದು, ತಮ ನೆಚ್ಚಿನ ನಟನ ಆರೋಗ್ಯಕ್ಕಾಗಿ ಅಭಿಮಾನಿಗಳು ದೇವರಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
ಅಮೆರಿಕಾದ ಮಿಯಾಮಿ ಕ್ಯಾನ್ಸರ್ ಇನ್ಸಿಟ್ಯೂಟ್ ನಲ್ಲಿ ಸರ್ಜರಿ ನಡೆಯಲಿದ್ದು, ಮಾಗಡಿ ರಸ್ತೆ ಯಲ್ಲಿರುವ ವಿರೇಶ್ ಚಿತ್ರಮಂದಿರದ ಸಮೀಪವಿರುವ ನಾಗಸುಬ್ರಹಣ್ಯ ದೇವಸ್ಥಾನದಲ್ಲಿ ಅಭಿಮಾನಿಗಳು ವಿಶೇಷ ಪೂಜೆ ನಡೆಸುತ್ತಿದ್ದಾರೆ.ಅಲ್ಲದೆ ರಾಜ್ಯದ ಹಲವು ದೇಗುಲಗಳಲ್ಲಿ ಶಿವರಾಜ್ ಕುಮಾರ್ ಅಭಿಮಾನಿಗಳು ಹೋಮ- ಹವನ ಗಳನ್ನು ನೆರವೇರಿಸಿದ್ದಾರೆ.
ಶಿವಣ್ಣನ ಕಾರು ಚಾಲಕನಿಂದ ವಿಶೇಷ ಪೂಜೆ:
ನಟ ಶಿವರಾಜ್ ಕುಮಾರ್ ಬಳಿ 32 ವರ್ಷಗಳಿಂದ ಕಾರು ಚಾಲಕನಾಗಿರುವ ಗೋವಿಂದು ಅವರು ತಮ ಪತ್ನಿ ಸಮೇತ ಮಲ್ಲೇಶ್ವರಂನಲ್ಲಿರುವ ಕಾಡು ಮಲ್ಲೇಶ್ವರ ದೇಗುಲದಲ್ಲಿ ಶಿವಣ್ಣನ ಮನೆಯಲ್ಲಿ ಪೂಜೆ ಮಾಡುವ ಗಂಗಾಧರ ಸ್ವಾಮಿಗಳ ನೇತೃತ್ವದಲ್ಲಿ ಗಣಪತಿ ಹೋಮ, ಗುರು ಪ್ರಾರ್ಥನ ಸಂಕಲ್ಪ , ನವಗ್ರಹ ಪೂಜೆ ಸೇರಿದಂತೆ ಹಲವು ವಿಶೇಷ ಪೂಜೆಗಳನ್ನು ದೇವರಿಗೆ ಸಲ್ಲಿಸುವ ಮೂಲಕ ಶಿವಣ್ಣನ ಆರೋಗ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸಿದ್ದಾರೆ.
35 ದಿನಗಳ ಕಾಲ ಅಮೇರಿಕಾದಲ್ಲೇ ವಾಸ:
ಬೈರತಿ ರಣಗಲ್ ಸಿನಿಮಾದ ಪ್ರಚಾರದ ವೇಳೆಯೇ ನಟ ಶಿವರಾಜ್‌ಕುಮಾರ್ ಆರೋಗ್ಯದಲ್ಲಿ ಏರುಪೇರಾಗಿತ್ತು. ಅಲ್ಲದೆ ಸ್ಥಳೀಯ ಆಸ್ಪತ್ರೆಗಳಲ್ಲಿ ವಿವಿಧ ಚಿಕಿತ್ಸೆ ಪಡೆದಿದ್ದರು. ಆದರೆ ಡಿಸೆಂಬರ್ 18 ರಂದು ಅಮೇರಿಕಾದಲ್ಲಿ ನಡೆಯುವ ಶಸ್ತ್ರಚಿಕಿತ್ಸೆಯ ಅಂಗವಾಗಿ ಪತ್ನಿ ಗೀತಾ ಶಿವರಾಜ್ ಕುಮಾರ್ ಹಾಗೂ ಪುತ್ರಿ ನಿವೇದಿತಾರೊಂದಿಗೆ ತೆರಳಿದ್ದರು.
ಇಂದು ಶಿವಣ್ಣನಿಗೆ ಶಸ್ತ್ರಚಿಕಿತ್ಸೆ ನಡೆಯಲಿದ್ದು, ಮುಂದಿನ 35 ದಿನಗಳ ಕಾಲ ಅಮೇರಿಕಾದಲ್ಲೇ ವಿಶ್ರಾಂತಿ ಪಡೆಯಲಿದ್ದು , ಜನವರಿ 25 ರಂದು ಬೆಂಗಳೂರಿಗೆ ಮರಳಲಿದ್ದಾರೆ.