ಬೆಂಗಳೂರು,ಡಿ.24- ವಿವಿಧ ಸಚಿವಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗುತ್ತಿಗೆ ಆಧಾರದ ಸಿಬ್ಬಂದಿಗಳ ಸಂಚಿತ ವೇತನವನ್ನು ಪರಿಷ್ಕರಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
7ನೇ ವೇತನ ಆಯೋಗದ ಶಿಫಾರಸ್ಸಿನ ಮೇರೆಗೆ ಕರ್ನಾಟಕ ನಾಗರಿಕ ಸೇವೆಗಳು(ಪರಿಷ್ಕೃತ ವೇತನ ) ನಿಯಮಗಳು 2024ನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದ್ದು, ಅದರಂತೆ ಗುತ್ತಿಗೆ ಆಧಾರದ ಸಿಬ್ಬಂದಿಯ ಪರಿಷ್ಕೃತ ಸಂಚಿತ ವೇತನ ನ.1ರಿಂದ ಜಾರಿಗೆ ಬಂದಿದೆ.
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ವಿಧಾನಸಭೆ, ವಿಧಾನಪರಿಷತ್, ಲೋಕಸಭೆ, ರಾಜ್ಯಸಭೆ ಸದಸ್ಯರ ಆಪ್ತ ಸಿಬ್ಬಂದಿ ಕಾರ್ಯಾಲಯ, ಸಂಪುಟ ದರ್ಜೆ ಸಚಿವರ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಗಳ, ಸಚಿವರ ಸ್ಥಾನಮಾನ ಪಡೆದ ಪ್ರಾಧಿಕಾರಗಳ ಆಪ್ತ ಶಾಖೆಗಳಲ್ಲಿ ಮತ್ತು ಕೆಲವು ಆಯೋಗಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಇದು ಅನ್ವಯವಾಗಲಿದೆ.
ಪರಿಷ್ಕೃತ ವೇತನ ಶ್ರೇಣಿಯ ವೇತನ ಹಂತವನ್ನು ಪರಿಷ್ಕರಿಸಿದ್ದು, ಹೊರಗುತ್ತಿಗೆ ಆಧಾರದ ಮೇಲೆ ನೇಮಕವಾದ ಸಿಬ್ಬಂದಿಗಳಿಗೆ ಅನ್ವಯಿಸುವುದಿಲ್ಲ ಎಂಬ ಷರತ್ತು ವಿಧಿಸಲಾಗಿದೆ.
ವಿಶೇಷ ಅಧಿಕಾರಿ/ವಿಶೇಷ ಕರ್ತವ್ಯಾಧಿಕಾರಿಗಳಿಗೆ 69250 ರೂ. ಸಹಾಯಕರ ಹುದ್ದೆ, ಶೀಘ್ರ ಲಿಪಿಗಾರರಿಗೆ 49,050 ರೂ.ಕ ಕಿರಿಯ ಸಹಾಯಕ/ದ್ವಿತೀಯ ದರ್ಜೆ ಸಹಾಯಕ, ಬೆರಳಚ್ಚುಗಾರರು ಹಾಗೂ ವಾಹನ ಚಾಲಕರಿಗೆ 34,100 ರೂ. ಹಾಗೂ ಡಿ ದರ್ಜೆ ನೌಕರರಿಗೆ 27 ಸಾವಿರ ರೂ.ವರೆಗೆ ವೇತನ ಪರಿಷ್ಕರಣೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ.