ಬೆಂಗಳೂರು,ಡಿ.24- ಮಾಂಸದ ಅಂಗಡಿ ಯೊಂದರಲ್ಲಿ ಹಣಕಾಸು ವಿಚಾರವಾಗಿ ಇಬ್ಬರು ಮಾಂಸ ವ್ಯಾಪಾರಿಗಳ ನಡುವೆ ಜಗಳ ನಡೆದು ಮಚ್ಚಿನಿಂದ ವ್ಯಾಪಾರಿಯ ತಲೆಗೆ ಹೊಡೆದು ಕೊಲೆ ಮಾಡಿರುವ ಘಟನೆ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಶಿವಾಜಿನಗರ ನಿವಾಸಿ ಅಫ್ಸರ್ (45) ಕೊಲೆಯಾದ ವ್ಯಕಿ.್ತ ಆರೋಪಿ ಅಕ್ಬರ್ನನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ 8 ತಿಂಗಳ ಹಿಂದೆ ಅಕ್ಬರ್ ಹಾಗೂ ಅಫ್ಸರ್ ಒಟ್ಟಾಗಿ ಮಾಂಸದ ಅಂಗಡಿ ಆರಂಭಿಸಿದ್ದರು.
ಆದರೆ ಅಂಗಡಿಯಲ್ಲಿ ವ್ಯಾಪಾರ ಸರಿಯಾಗಿ ಆಗುತ್ತಿರಲಿಲ್ಲ. ಇದರಿಂದ ಪ್ರತ್ಯೇಕ ಅಂಗಡಿ ತೆರೆಯಲು ಅಕ್ಬರ್ ನಿರ್ಧರಿಸಿದ್ದ.
ಹಾಗಾಗಿ ಹಾಕಿದ್ದ ಬಂಡವಾಳದ ಹಣ ವಾಪಸ್ ನೀಡುವಂತೆ ಅಫ್ಸರ್ನನ್ನು ಕೇಳಿದ್ದಾನೆ. ಅಫ್ಸರ್ ಸುಮಾರು 3 ಲಕ್ಷ ಹಣ ವಾಪಸ್ ನೀಡಿದ್ದನು. ಆದರೆ ಬಾಕಿ 20ಸಾವಿರ ಹಣ ಕೊಡುವಂತೆ ಅಕ್ಬರ್ ಒತ್ತಾಯಿಸಿದ್ದ. ಇದೇ ವಿಚಾರಕ್ಕೆ ತಡ ರಾತ್ರಿ ಇಬ್ಬರ ಮಧ್ಯೆ ಗಲಾಟೆ ನಡೆದಿದೆ.
ಗಲಾಟೆ ವೇಳೆ ಇಬ್ಬರ ನಡುವೆ ತಳ್ಳಾಟ, ನೂಕಾಟವಾಗಿದೆ. ಆ ಸಂದರ್ಭದಲ್ಲಿ ತಾಳೆ ಕಳೆದುಕೊಂಡ ಅಕ್ಬರ್ ಅಂಗಡಿಯಲ್ಲಿದ್ದ ಮಾಂಸ ಕತ್ತರಿಸುವ ಮಚ್ಚಿನಿಂದಲೇ ಅಫ್ಸರ್ ತಲೆಗೆ ಹೊಡೆದಿದ್ದಾನೆ. ಇದರಿಂದ ತೀವ್ರ ರಕ್ತಸ್ರಾವವಾಗಿ ಅಫ್ಸರ್ ಅಂಗಡಿಯಲ್ಲೇ ಪ್ರಾಣಬಿಟ್ಟಿದ್ದಾನೆ.
ಸುದ್ದಿ ತಿಳಿದು ಬೇಗೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿ, ಆರೋಪಿ ಅಕ್ಬರ್ನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.