ಬೆಂಗಳೂರು,ಡಿ.25- ಕೋಟ್ಯಂತರ ರೂ. ಮೌಲ್ಯದ ಚಿನ್ನ ವಂಚನೆ ಆರೋಪ ದಲ್ಲಿ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರಿಂದ ಬಂಧನಕ್ಕೊಳ ಗಾಗಿರುವ ಶ್ವೇತಾ ಗೌಡ ಜಾಲದಲ್ಲಿ ಮತ್ತೊಬ್ಬ ಮೈಸೂರು ಪಾಕ್ ರಾಜಕಾರಣಿ ಸಿಲುಕಿಕೊಂಡಿದ್ದ ಎನ್ನುವುದು ಇದೀಗ ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.
ವರ್ತೂರು ಪ್ರಕಾಶ್ ಅವರ ನಂಬರ್ ಅನ್ನು ತನ್ನ ಮೊಬೈಲ್ನಲ್ಲಿ ಗುಲಾಬ್ ಜಾಮೂನು ಹಾಗೂ ಮತ್ತೊಬ್ಬ ವ್ಯಕ್ತಿಯ ಹೆಸರನ್ನು ರಸಗುಲ್ಲ ಎಂದು ಸೇವ್ ಮಾಡಿಕೊಂಡಿದ್ದ ಶ್ವೇತಾ ಗೌಡ ತನ್ನ ಬಲೆಗೆ ಬಿದ್ದಿದ್ದ ಬಕರಾ ರಾಜಕಾರಣಿಯ ನಂಬರ್ ಅನ್ನು ಮೈಸೂರು ಪಾಕ್ ಎಂದು ಸೇವ್ ಮಾಡಿಕೊಂಡಿದ್ದರು ಎನ್ನಲಾಗಿದೆ.
ಚಿನ್ನ ವಂಚನೆ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು ಆಕೆಯ
ಮೊಬೈಲ್ ಫೋನ್ ವಶಕ್ಕೆ ಪಡೆದು ಪರಿಶೀಲಿಸಿದಾಗ ಮೈಸೂರು ಪಾಕ್ ಎಂದು ನಂಬರ್ ಸೇವ್ ಆಗಿರುವುದನ್ನು ಕಂಡು ಬೆರಗಾಗಿದ್ದರು.ಯಾರಪ್ಪ ಈ ಮೈಸೂರು ಪಾಕ್ ಎನ್ನುವುದನ್ನು ಪತ್ತೆ ಹಚ್ಚಲು ಮುಂದಾದ ಪೊಲೀಸರಿಗೆ ಆ ನಂಬರ್ ಕೋಲಾರದ ಮತ್ತೊಬ್ಬ ರಾಜಕಾರಣಿಗೆ ಸೇರಿದ್ದು ಎನ್ನುವುದು ಗೊತ್ತಾಗಿದೆ.
ಹೀಗಾಗಿ ಮೈಸೂರು ಪಾಕ್ ಜಾಡು ಹಿಡಿದು ಹೊರಟ ಪೊಲೀಸರಿಗೆ ಶ್ವೇತಾ ವರ್ತೂರು ಪ್ರಕಾಶ್ ಅವರಂತೆ ಕೋಲಾರದ ಮತ್ತೊಬ್ಬ ರಾಜಕಾರಣಿಯನ್ನು ತನ್ನ ಖೆಡ್ಡಾಕ್ಕೆ ಬೀಳಿಸಲು ಸಿದ್ದತೆ ನಡೆಸಿದ್ದಳು ಎನ್ನುವ ವಿಷಯ ತಿಳಿದುಬಂದಿದೆ.
ಯಾರು ಈ ಮೈಸೂರು ಪಾಕ್? ಕೋಲಾರದಲ್ಲಿ ಪ್ರಮುಖ ರಾಜಕೀಯ ಪಕ್ಷವೊಂದರ ಮುಖಂಡರಾಗಿರುವ ಭಾರಿ ಕುಳದ ವ್ಯಕ್ತಿಯನ್ನು ಕೆಲ ದಿನಗಳ ಹಿಂದೆ ಶ್ವೇತಾ ಫೇಸ್ಬುಕ್ ಮೂಲಕ ಪರಿಚಯ ಮಾಡಿಕೊಂಡಿದ್ದಳು. ಈಕೆಯ ಸ್ನೇಹಕ್ಕೆ ಸೋತು ಹೋಗಿದ್ದ ಅ ಮಹಾನುಭಾವ ಥಾರ್ ಜೀಪ್ ಅನ್ನು ಉಡುಗೊರೆಯಾಗಿ ನೀಡಿದ್ದ ಇದರಿಂದ ಆತನನ್ನು ತನ್ನ ಖೆಡ್ಡಾಕ್ಕೆ ಬೀಳಿಸಿಕೊಳ್ಳಲು ಸಂಚು ರೂಪಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಶ್ವೇತಾಗೌಡ ಪರಿಚಯವಾದ ಸಂದರ್ಭದಲ್ಲಿ ಆತ ಕೋಲಾರದ ವೆಂಕಟೇಶ್ವರ ಸ್ವೀಟ್ ಸ್ಟಾಲ್ನಿಂದ ಮೈಸೂರು ಪಾಕ್ ತಂದುಕೊಟ್ಟಿದ್ದ ಹೀಗಾಗಿ ಆತನ ಫೋನ್ ನಂಬರ್ ಅನ್ನು ತನ್ನ ಮೊಬೈಲ್ನಲ್ಲಿ ಮೈಸೂರು ಪಾಕ್ ಎಂದು ಸೇವ್ ಮಾಡಿಕೊಂಡಿದ್ದಳು.ಕಮರ್ಷಿಯಲ್ ಸ್ಟೀಟ್ನಲ್ಲಿರುವ ಚಿನ್ನದ ಅಂಗಡಿಗೆ ವಂಚಿಸಿದ್ದ ಶ್ವೇತಾಗೌಡ ಅವರನ್ನು ಬಂಧಿಸುವ ವೇಳೆ ಆಕೆ ಮೈಸೂರು ಪಾಕ್ ರಾಜಕಾರಣಿ ಗಿಫ್‌್ಟ ಆಗಿ ನೀಡಿದ್ದ ಥಾರ್ ಜೀಪ್ನಲ್ಲಿ ಇದ್ದಳು ಎನ್ನುವುದು ವಿಶೇಷವಾಗಿದೆ.
ಬಕರಾ ಬಲೆಗೆ ಬಿತ್ತು ಎಂದು ಆತನನ್ನು ತನ್ನ ಖೆಡ್ಡಾಕ್ಕೆ ಬೀಳಿಸಿಕೊಳ್ಳಲು ಶ್ವೇತಾ ಮಾಸ್ಟರ್ ಪ್ಲಾನ್ ಮಾಡಿದ್ದಳು. ಒಂದು ವೇಳೆ ಪೊಲೀಸರು ಆಕೆಯನ್ನು ಚಿನ್ನ ವಂಚನೆ ಪ್ರಕರಣದಲ್ಲಿ ಬಂಧಿಸದಿದ್ದರೆ ಆಕೆ ಮೈಸೂರು ಪಾಕ್ಗೆ ಒಂದು ಗತಿ ಕಾಣಿಸುತ್ತಿದ್ದಳು ಎಂದು ತಿಳಿದುಬಂದಿದೆ. ಆತನ ಗ್ರಹಚಾರ ನೆಟ್ಟಗಿದ್ದ ಪರಿಣಾಮ ಆತ ಶ್ವೇತಾ ಜಾಲದಿಂದ ಬಚಾವಾಗಿದ್ದಾನೆ. ಇಲ್ಲದಿದ್ದರೆ ಗುಲಾಬ್ ಜಾಮೂನು ವರ್ತೂರು ಪ್ರಕಾಶ್ ಅವರಂತೆ ಸಂಕಷ್ಟಕ್ಕೆ ಸಿಲುಕಿಕೊಳ್ಳಬೇಕಿತ್ತು ಎನ್ನುತ್ತವೆ ಪೊಲೀಸ್ ಮೂಲಗಳು.