ಬೆಂಗಳೂರು, ಜ.23- ಗ್ರೇಟರ್ ಬೆಂಗಳೂರು ಚುನಾವಣೆ ಮೀಸಲಾತಿ ಕುರಿತು ಇದುವರೆಗೂ 700ಕ್ಕೂ ಹೆಚ್ಚು ಆಕ್ಷೇಪಣೆಗಳು ಸಲ್ಲಿಕೆಯಾಗಿವೆ.ಜಿಬಿಎ ವ್ಯಾಪ್ತಿಯ ಐದು ಪಾಲಿಕೆಗಳ ಚುನಾವಣೆಗೆ ನಿಗದಿಪಡಿಸಲಾಗಿದ್ದ ಮೀಸಲಾತಿಗೆ ಆಕ್ಷೇಪಣೆ ಸಲ್ಲಿಸಲು ಇಂದು ಕೊನೆ ದಿನವಾಗಿದ್ದು, ಇಲ್ಲಿಯವರೆಗೆ 700 ಆಕ್ಷೇಪಣೆಗಳು ಸಲ್ಲಿಕೆಯಾಗಿವೆ.
ಜಿಬಿಎ ವ್ಯಾಪ್ತಿಯ 5 ನಗರಪಾಲಿಕೆಗಳಿಗೆ ಚುನಾವಣೆ ನಡೆಸಲು ಸರ್ಕಾರ ಬಿಡುಗಡೆ ಮಾಡಿದ್ದ ವಾರ್ಡ್‌ವಾರು ಮೀಸಲಾತಿ ಪಟ್ಟಿಗೆ 12 ದಿನಗಳ ಕಾಲ ಸಾರ್ವಜನಿಕ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು.
ಹೀಗಾಗಿ ಅನ್‌ಲೈನ್‌ನಲ್ಲಿ ಹಾಗೂ ನಗರಾಭಿವೃದ್ಧಿ ಇಲಾಖೆಗೆ ಅರ್ಜಿ ಮುಖಾಂತರ ಸುಮಾರು 700 ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಮುಖವಾಗಿ ವಾರ್ಡ್ ಮೀಸಲಾತಿಯಲ್ಲಿ ಸ್ಥಳೀಯ ಜಾತಿ ಅಧಾರದ ಮೇಲೆ ಹೆಚ್ಚು ಒತ್ತು ನೀಡಿಲ್ಲ, ಸರ್ಕಾರ ನಿಗದಿಪಡಿಸಿದ ಹಾಗೆ ಮಹಿಳೆಯರಿಗೆ ಶೇ. 50 ರಷ್ಟು ಮೀಸಲಾತಿ ನೀಡಿಲ್ಲ ಎನ್ನುವುದು ಪ್ರಮುಖ ಆಕ್ಷೇಪಣೆಗಳಾಗಿವೆ.
ಶೇ.50 ರ ಅನುಪಾತದಲ್ಲಿ ಮಹಿಳೆಯರಿಗೆ 185 ವಾರ್ಡಗಳಲ್ಲಿ ಮಹಿಳಾ ಮೀಸಲಾತಿ ಮಾಡಬೇಕಿತ್ತು ಅದರೆ 176 ವಾರ್ಡ್‌ಗಳಿಗೆ ಮಾತ್ರ ಮೀಸಲಾತಿ ನೀಡಿರುವುದಕ್ಕೆ ಹೆಚ್ಚು ಆಕ್ಷೇಪ ವ್ಯಕ್ತವಾಗಿದೆ.
ಮಹಿಳಾ ಮೀಸಲಾತಿ ಪ್ರಕಾರ ಇನ್ನೂ 9 ವಾರ್ಡ್‌ಗಳಲ್ಲಿ ಮಹಿಳೆಯರಿಗೆ ಅವಕಾಶ ನೀಡಬೇಕು. ಇನ್ನೂ ಕೆಲ ಕಡೆ ಮೀಸಲಾತಿ ಹಂಚಿಕೆಯಲ್ಲಿ ತಾರತಮ್ಯ ಅಗಿದೆ ಇವುಗಳನ್ನು ಸರಿ ಪಡಿಸಬೇಕು ಅನ್ನೋ ಆಕ್ಷೇಪಣೆ ಕೂಡ ಬಂದಿವೆ. ಸದ್ಯ ಬಂದಂತಹ ಅರ್ಜಿಗಳನ್ನು ಪರಿಶೀಲನೆ ನಡೆಸಿ ಅಂತಿಮ ಮೀಸಲಾತಿ ಪಟ್ಟಿ ಬಿಡುಗಡೆ ಮಾಡಲು ನಗರಾಭಿವೃದ್ಧಿ ಇಲಾಖೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
