ಬೆಂಗಳೂರು,ಡಿ.26- ವಿಧಾನಮಂಡಲದ ಚಳಿಗಾಲದ ಅಧಿವೇಶನದ ಕೊನೆಯ ದಿನ ವಿಧಾನಪರಿಷತ್ತಿನಲ್ಲಿ ನಡೆದ ವಿದ್ಯಮಾನದ ಬಿಸಿ ತಣ್ಣಗಾಗುವ ಮುನ್ನವೇ ಮತ್ತೊಂದು ರಾಜಕೀಯ ಮೇಲಾಟದ ಘಟನೆಗೆ ರಾಜ್ಯ ಸಾಕ್ಷಿಯಾಗಿದೆ. ಆ ಮೂಲಕ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಜಿದ್ದಿನ ರಾಜಕೀಯಕ್ಕೆ ಇನ್ನೊಂದು ಅಸ್ತ್ರ ಸಿಕ್ಕಂತಾಗಿದೆ.
ಬಿಬಿಎಂಪಿ ವ್ಯಾಪ್ತಿಯ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಮೇಲೆ ನಿನ್ನೆ ಮೊಟ್ಟೆ ದಾಳಿ ನಡೆದಿದೆ. ಅಟಲ್ ಬಿಹಾರಿ ವಾಜಪೇಯಿ ಅವರ ಕಾರ್ಯಕ್ರಮವೊಂದರ ನಂತರ ತೆರಳುತ್ತಿದ್ದ ವೇಳೆ, ಸರಿಯಾಗಿ ದುಷ್ಕರ್ಮಿಗಳು ಅವರ ತಲೆಗೆ ಗುರಿಯಿಟ್ಟು ಮೊಟ್ಟೆಯನ್ನು ಎಸೆದಿದ್ದಾರೆ. ಕೂಡಲೇ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಈ ರೀತಿಯ ರಾಜಕೀಯ ರಾಜ್ಯದಲ್ಲಿ ನಡೆಯುವುದು ಕಮಿ. ಪಕ್ಕದ ಆಂಧ್ರ ಪ್ರದೇಶ, ತೆಲಂಗಾಣ ಅಥವಾ ಉತ್ತರ ಪ್ರದೇಶ, ಬಿಹಾರದಲ್ಲಿ ಇದಕ್ಕಿಂತಲೂ ನೀಚ ರಾಜಕಾರಣದ ಬೇಕಾದಷ್ಟು ಘಟನೆಗಳು ನಡೆದರೂ, ಕರ್ನಾಟಕದ ಮಟ್ಟಿಗೆ ಈ ರೀತಿಯ ದ್ವೇಷ ರಾಜಕಾರಣದ ಉದಾಹರಣೆ ಅಪರೂಪ. ಮೂರು ಪಕ್ಷಗಳ ನಡುವೆ ಏನೇ ರಾಜಕೀಯವಿದ್ದರೂ, ಒಂದು ಚೌಕಟ್ಟನ್ನು ಮೀರುತ್ತಿರಲಿಲ್ಲ.
ಮೊಟ್ಟೆಯ ಪ್ರಕರಣಕ್ಕೂ ಕೆಲವು ದಿನಗಳ ಹಿಂದೆ, ನನ್ನ ಮೇಲೆ ಆಸಿಡ್ ದಾಳಿ ನಡೆಯುವ ಸಾಧ್ಯತೆಯಿದೆ ಎಂದು ಮುನಿರತ್ನ ಹೇಳಿದ್ದರು. ಈ ಘಟನೆ ನಡೆದ ಕೂಡಲೇ, ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರು ಅವರನ್ನು ಸುತ್ತುವರಿದರು. ವಿಷಯ ಹರಡುತ್ತಿದ್ದಂತೆಯೇ, ಬಿಜೆಪಿ ಮತ್ತು ಕಾಂಗ್ರೆಸ್ ಸ್ಥಳದಲ್ಲಿ ಜಮಾಯಿಸುವ ಮೂಲಕ, ಪ್ರಕರಣ ರಾಜಕೀಯ ಬಣ್ಣವನ್ನು ಪಡೆದುಕೊಂಡಿತು. ಮುನಿರತ್ನ ಮತ್ತು ಅವರ ಬೆಂಬಲಿಗರು ಸ್ಥಳದಲ್ಲೇ ಪ್ರತಿಭಟನೆ ನಡೆಸಿದರು.
ಘಟನೆ ನಡೆದ ಕೂಡಲೇ, ಶಾಸಕ ಮುನಿರತ್ನ ಇದಕ್ಕೆ ನೇರವಾಗಿ ತಮ ಎದುರಾಳಿ ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ದೂರಿದ್ದಾರೆ. ಡಿ.ಕೆ.ಶಿವಕುಮಾರ್ ಮತ್ತು ಅವರ ಸಹೋದರ ಡಿ.ಕೆ.ಸುರೇಶ್, ಕಳೆದ ಚುನಾವಣೆಯಲ್ಲಿ ತಮ ಎದುರಾಳಿಯಾಗಿದ್ದ ಎಚ್.ಕುಸುಮಾ ಮತ್ತು ಅವರ ತಂದೆ ಹನುಮಂತರಾಯಪ್ಪ ಅವರೇ ಈ ಘಟನೆಗೆ ಕಾರಣ ಎಂದಿದ್ದಾರೆ. ಇದು, ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವಿನ ಹೊಡೆದಾಟಕ್ಕೆ ಕಾರಣವಾಯಿತು.
ಕಾಂಗ್ರೆಸ್ ನಾಯಕಿ ಕುಸುಮಾ ಟ್ವೀಟ್: ಶಾಸಕ ಮುನಿರತ್ನ ಅವರ ಮೇಲಿನ ಮೊಟ್ಟೆ ಅಟ್ಯಾಕ್ ಚಿತ್ರದ ರಚನೆ ಹಾಗೂ ನಿರ್ಮಾಣ ಸ್ವತಃ ಅವರದ್ದೇ, ದಲಿತರನ್ನು ತುಚ್ಛವಾಗಿ ನಿಂದಿಸಿ, ಒಕ್ಕಲಿಗ ಗುತ್ತಿಗೆದಾರನ ಕುಟುಂಬದ ಹೆಣ್ಣು ಮಕ್ಕಳ ಬಗ್ಗೆ ಅವಹೇಳನ ಮಾಡಿದ್ದ ಧ್ವನಿ ಎಫ್‌ಎಸ್‌ಎಲ್ ರಿಪೋರ್ಟ್‌ನಲ್ಲಿ ಅವರದ್ದೇ ಎಂದು ಸಾಬೀತಾದ ಬೆನ್ನಲ್ಲೇ ತರಹೇವಾರಿ ನಾಟಕಗಳು ಶುರುವಾಗಿವೆ ಎಂದು ಕುಸುಮಾ, ಟ್ವೀಟ್ (ಎಕ್ಸ್ ) ಮಾಡಿದ್ದಾರೆ.
ಘಟನೆಯ ನಂತರ ಮುನಿರತ್ನ, ಕೆ.ಸಿ.ಜನರಲ್ ಆಸ್ಪತ್ರೆಗೆ ತೆರಳಿದರು. ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯ ಡಾ. ಮಂಜುನಾಥ್ ಅವರು ಮುನಿರತ್ನ ಅವರ ಆರೋಗ್ಯ ತಪಾಸಣೆ ನಡೆಸಿದರು. ತಲೆ ಹಿಂಭಾಗಕ್ಕೆ ಪೆಟ್ಟು ಬಿದ್ದಿದ್ದು, ಕೂದಲು ಸ್ವಲ್ಪ ಸುಟ್ಟಿದೆ, ಸಿಟಿ ಸ್ಕ್ಯಾನಿಂಗ್ ಮಾಡಲು ಸಲಹೆ ನೀಡಿದ್ದೇನೆ ಎಂದು ಸಂಸದರು ಹೇಳಿದ್ದಾರೆ.
ಆಗಸ್ಟ್ 2022ರಲ್ಲಿ ವಿಪಕ್ಷದ ನಾಯಕ ಸಿದ್ದರಾಮಯ್ಯ ಕೊಡಗು ಪ್ರವಾಸದಲ್ಲಿದ್ದರು. ಆ ವೇಳೆ ಗೋಬ್ಯಾಕ್ ಸಿದ್ದರಾಮಯ್ಯ ಘೋಷಣೆಯನ್ನು ಕೂಗುತ್ತಿದ್ದ ಪ್ರತಿಭಟನಾಕಾರರು, ಅವರ ಕಾರಿಗೆ ಗುರಿಯಾಗಿಸಿಕೊಂಡು ಮೊಟ್ಟೆಯನ್ನು ಎಸೆದಿದ್ದರು. ಅದು ಅವರ ಬೆಂಗಾವಲು ವಾಹನಕ್ಕೆ ಬಡಿದಿತ್ತು. ಇದು, ಬಿಜೆಪಿಯವರದ್ದೇ ಕೆಲಸ ಎಂದು ಸಿದ್ದರಾಮಯ್ಯ ದೂರಿದ್ದರು.
ಸಿ ಟಿ ರವಿ ಕೇಸಿಗೆ ಮೊದಲ ತಲೆದಂಡ:
ಸಿ.ಟಿ.ರವಿ ಮತ್ತು ಲಕ್ಷೀ ಹೆಬ್ಬಾಳ್ಕರ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಾಂಗ್ರೆಸ್ ಮತ್ತು ಬಿಜೆಪಿಯ ನಾಯಕರು ತಮ ಮೂಗಿಗೆ ನೇರವಾಗಿ ಮಾತನಾಡುತ್ತಿದ್ದಾರೆ. ಹಾಗಾಗಿ, ಆ ಪ್ರಕರಣ ದಿನಕ್ಕೊಂದು ತಿರುವನ್ನು ಪಡೆಯುತ್ತಿದೆ. ಬುಧವಾರ (ಡಿ 25), ಓರ್ವ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಆ ಮೂಲಕ, ಬಿಜೆಪಿಗೆ ಮತ್ತೊಂದು ಹೊಡೆತವನ್ನು ಕಾಂಗ್ರೆಸ್ ನೀಡಿದೆ.
ಈ ವಿದ್ಯಮಾನದ ಬಿಸಿ ಆರದೇ ಇರುವಾಗಲೇ, ಮುನಿರತ್ನ ಮೇಲೆ ಮೊಟ್ಟೆ ದಾಳಿ ನಡೆದಿರುವುದು, ದ್ವೇಷದ ರಾಜಕಾರಣಕ್ಕೆ ಇನ್ನೊಂದು ತಿರುವನ್ನು ನೀಡಿದೆ. ಮತ್ತೆ, ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಒಬ್ಬರು ಇನ್ನೊಬ್ಬರನ್ನು ದೂರಲು ಆರಂಭಿಸಿದ್ದಾರೆ. ಮುನಿರತ್ನ ಪ್ರತಿನಿಧಿಸುವ ಆರ್. ಆರ್.ನಗರ ಅಸೆಂಬ್ಲಿ ಕ್ಷೇತ್ರ, ಬೆಂಗಳೂರು ಗ್ರಾಮಾಂತರ ಲೋಕಸಭಾ ವ್ಯಾಪ್ತಿಗೆ ಬರುವಂಥದ್ದು.
ಆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಡಿ.ಕೆ.ಸುರೇಶ್‌ಗೆ ಭಾರೀ ಹಿನ್ನಡೆಯಾಗಿತ್ತು. ಈ ಸಿಟ್ಟಿನ ಮೇಲೆ ನನ್ನ ಮೇಲೆ ದಾಳಿ ನಡೆಯುವ ಸಾಧ್ಯತೆಯಿದೆ ಎಂದು ಮುನಿರತ್ನ ಹೇಳಿಕೊಂಡು ಬರುತ್ತಲೇ ಇದ್ದರು. ಈಗ ನಡೆದಿರುವ ದಾಳಿಯು, ಕಾಂಗ್ರೆಸ್ ಪ್ರಾಯೋಜಿತ ಎಂದು ಮುನಿರತ್ನ ಹೇಳಿದ್ದಾರೆ.
ಬಿಜೆಪಿ ನಾಯಕರು ಅವರಿಗೆ ಸಾಥ್ ನೀಡಿದ್ದಾರೆ. ಒಟ್ಟಿನಲ್ಲಿ ಲಕ್ಷೀ ಹೆಬ್ಬಾಳ್ಕರ್ – ಸಿ.ಟಿ.ರವಿ ಪ್ರಕರಣದ ನಂತರ, ಮೊಟ್ಟೆ ದಾಳಿ ವಿದ್ಯಮಾನ ಮತ್ತೊಂದು ದ್ವೇಷದ ರಾಜಕೀಯಕ್ಕೆ ವೇದಿಕೆಯಾಗುವತ್ತ ಸಾಗುತ್ತಿದೆ.

