ಬೆಂಗಳೂರು,ಡಿ.26- ಬಿಜೆಪಿ ಶಾಸಕ ಮುನಿರತ್ನ ಅವರ ಮೇಲೆ ಮೊಟ್ಟೆ ದಾಳಿ ನಡೆಸಿರುವ ಬಗ್ಗೆ ತನಿಖೆ ಕೈಗೊಂಡಿರುವ ನಂದಿನಿ ಲೇಔಟ್ ಠಾಣೆ ಪೊಲೀಸರು, ಮೊಟ್ಟೆಯ ಸ್ಯಾಂಪಲ್ನ್ನು ಸಂಗ್ರಹಿಸಿ ಎಫ್ಎಸ್ಎಲ್ಗೆ ಕಳುಹಿಸಿದ್ದಾರೆ.ಮುನಿರತ್ನ ಅವರ ತಲೆಯ ಮೇಲೆ ಬಿದ್ದಿದ್ದ ಮೊಟ್ಟೆಯ ಒಳಭಾಗದ ಬಂಡಾರವನ್ನು ಸಂಗ್ರಹಿಸಿ ಅದನ್ನು ಎಫ್ಎಸ್ಎಲ್ಗೆ ರವಾನಿಸಿದ್ದಾರೆ.
ಮೊಟ್ಟೆಯೊಳಗೆ ಆ್ಯಸಿಡ್ ಇಂಜೆಕ್ಟ್ ಮಾಡಿ ದಾಳಿ ಮಾಡಿದ್ದಾರೆಂದು ಮುನಿರತ್ನ ಅವರು ಆರೋಪಿಸಿದ್ದಾರೆ. ಹಾಗಾಗಿ ಹೆಚ್ಚಿನ ತನಿಖೆಗಾಗಿ ಮೊಟ್ಟೆಯ ಸ್ಯಾಂಪಲ್ನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ಈಸಂಜೆಗೆ ತಿಳಿಸಿದ್ದಾರೆ.
ಒಂದು ವೇಳೆ ಆರೋಪಿಗಳು ಮೊಟ್ಟೆಯೊಳಗೆ ಆ್ಯಸಿಡ್ ಇಂಜೆಕ್ಟ್ ಮಾಡಿ ಎಸೆದಿದ್ದರೆ ಎಫ್ಎಸ್ಎಲ್ ಪರೀಕ್ಷೆಯಲ್ಲಿ ಗೊತ್ತಾಗಲಿದೆ. ವರದಿ ಬಂದ ನಂತರವೇ ಮೊಟ್ಟೆಯೊಳಗೆ ಆ್ಯಸಿಡ್ ಇತ್ತೇ ಎಂಬುದು ಗೊತ್ತಾಗಲಿದೆ.
ಘಟನೆ ಸಂಬಂಧ ಈಗಾಗಲೇ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ಮೂವರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿ ಮಾಹಿತಿ ಪಡೆದುಕೊಂಡಿದ್ದಾರೆ.
ನಿನ್ನೆ ಲಗ್ಗೆರೆ ಸಮೀಪದ ಲಕ್ಷ್ಮೀದೇವಿನಗರ ವಾರ್ಡ್ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜಯಂತಿ ಕಾರ್ಯಕ್ರಮ ಮುಗಿಸಿಕೊಂಡು ಮಧ್ಯಾಹ್ನ ಕಾರ್ಯಕರ್ತರೊಂದಿಗೆ ನಡೆದುಕೊಂಡು ಕಾರಿನ ಬಳಿ ಹೋಗುತ್ತಿದ್ದರು.
ಆ ವೇಳೆ ಕಿಡಿಗೇಡಿಗಳು 15 ಮೀಟರ್ ಅಂತರದಿಂದ ಮುನಿರತ್ನ ತಲೆ ಮೇಲೆ ಮೊಟ್ಟೆ ಎಸೆದಿದ್ದಾರೆ. ತಕ್ಷಣ ಪೊಲೀಸರು ಅವರನ್ನು ಸುತ್ತುವರೆದು ರಕ್ಷಣೆ ಮಾಡಿ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದರು. ಇಂದು ಅವರು ಡಿಸ್ಚಾರ್ಜ್ ಆಗಿ ಮನೆಗೆ ಹಿಂದಿರುಗಿದ್ದಾರೆ.