ಬೆಂಗಳೂರು,ಡಿ.27- ಟೀ ಕುಡಿದು ಹೋಗಿರೆಂದು ಮಹಿಳೆಯೊಬ್ಬರು ಸಿವಿಲ್ ಕಂಟ್ರಾಕ್ಟರ್ರೊಬ್ಬರನ್ನು ಮನೆಗೆ ಕರೆದುಕೊಂಡು ಹೋಗಿ ಹನಿ ಟ್ರ್ಯಾಪ್ಗೆ ಬೀಳಿಸಿ ಹಣ, ಆಭರಣ ದೋಚಿದ್ದ ಗ್ಯಾಂಗ್ನ ಮೂವರನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿರುವ ಮಹಿಳೆ ಹಾಗೂ ಇತರರಿಗಾಗಿ ಪೊಲೀಸರು ಶೋಧ ಮುಂದುವರೆಸಿದ್ದಾರೆ.
ಘಟನೆ ವಿವರ:
ಸಿವಿಲ್ ಕಂಟ್ರಾಕ್ಟರ್ಗೆ ಐದಾರು ತಿಂಗಳ ಹಿಂದೆ ಸ್ನೇಹಿತ ಶಿವು ಎಂಬುವರ ಮೂಲಕ ನಯನಾ ಎಂಬ ಮಹಿಳೆ ಪರಿಚಯವಾಗಿದೆ. ನಂತರ ದಿನಗಳಲ್ಲಿ ತನ್ನ ಮಗುವಿಗೆ ಆರೋಗ್ಯ ಸರಿಯಿಲ್ಲ ಆಸ್ಪತ್ರೆಗೆ ತೋರಿಸಬೇಕೆಂದು ಹೇಳಿ ಹಣದ ಸಹಾಯ ಕೇಳಿದ್ದಾಳೆ.ಆಕೆಯ ಮಾತನ್ನು ನಂಬಿ ಸಿವಿಲ್ ಕಂಟ್ರಾಕ್ಟರ್ ಒಟ್ಟು 14 ಸಾವಿರ ಹಣವನ್ನು ಹಂತ ಹಂತವಾಗಿ ಫೋನ್ ಪೇ ಮೂಲಕ ನೀಡಿದ್ದಾರೆ.
ಅವರ ಒಳ್ಳೆಯತನವನ್ನು ದುರುಪಯೋಗ ಪಡಿಸಿಕೊಳ್ಳಲೆಂದೇ ಆಗಾಗ್ಗೆ ಮೊಬೈಲ್ ಕರೆ ಮಾಡಿ ಮನೆಗೆ ಕರೆಯುತ್ತಿದ್ದಳು. ಆದರೆ ಸಿವಿಲ್ ಕಂಟ್ರಾಕ್ಟರ್ ಹೋಗಿರಲಿಲ್ಲ.ನೆಲಗದರನ ಹಳ್ಳಿಯಲ್ಲಿರುವ ಅಳಿಯನ ಮನೆಯ ನವೀಕರಣ ಕೆಲಸದ ನಿಮಿತ್ತ ಡಿ.9 ರಂದು ಬೆಳಗ್ಗೆ 10 ಗಂಟೆ ಸುಮಾರಿನಲ್ಲಿ ಬೈಕ್ನಲ್ಲಿ ಸಿವಿಲ್ ಕಂಟ್ರಾಕ್ಟರ್ ಹೋಗುತ್ತಿದ್ದಾಗ ಮಾಗಡಿ ರಸ್ತೆ, ತುಂಗಾ ನಗರ ಕ್ರಾಸ್ ಬಳಿ ಇವರನ್ನು ಸ್ಕೂಟರ್ನಲ್ಲಿ ನಯನಾ ಹಿಂಬಾಲಿಸಿಕೊಂಡು ಬಂದು ಸಾರ್ ಎಂದು ಕೂಗಿದ್ದಾಳೆ.
ಮಾತನಾಡಿಸಲು ಬೈಕ್ ನಿಲ್ಲಿಸಿದಾಗ, ಆಕೆ ನಮ ಮನೆ ಸಮೀಪದಲ್ಲೇ ಇದೆ. ಟೀ ಕುಡಿದು ಹೋಗಿ ಎಂದು ಹೇಳಿದ್ದಾಳೆ. ಈಗ ಬೇಡ ಮತ್ತೊಮೆ ಬರುತ್ತೇನೆಂದು ಹೇಳಿದರೂ, ಬಿಡದೆ ಒತ್ತಾಯ ಮಾಡಿದ್ದಾಳೆ. ನಂತರ ಆಕೆಯ ಸ್ಕೂಟರ್ ಹಿಂಬಾಸಿಕೊಂಡು ಹೋಗಿ ತುಂಗಾನಗರ ರಸ್ತೆಯಲ್ಲಿ ಅವರು ಬೈಕ್ ನಿಲ್ಲಿಸಿದ್ದು, ಕಟ್ಟಡದ ಮಹಡಿಯಲ್ಲಿದ್ದ ಮನೆಗೆ ಕರೆದುಕೊಂಡು ಹೋಗಿದ್ದಾಳೆ.
ಇವರಿಬ್ಬರೂ ಆ ಮನೆಯಲ್ಲಿ ಮಾತನಾಡುತ್ತಿದ್ದಾಗ ಮೊದಲು ಒಬ್ಬ ಬಂದಿದ್ದಾನೆ, ಕೆಲ ನಿಮಿಷದ ಬಳಿಕ ಮತ್ತಿಬ್ಬರು ಬಂದು ನಾವು ಕ್ರೈಂನವರು ಎಂದು ಪರಿಚಯಿಸಿಕೊಂಡು ನೀವು ವ್ಯಭಿಚಾರ ಮಾಡುತ್ತಿದ್ದೀರಾ, ಕೆಳಗಡೆ ಜೀಪಿನಲ್ಲಿ ನಮ ಮೇಡಂ ಇದ್ದಾರೆಂದು ಹೇಳಿ ಸಿವಿಲ್ ಕಂಟ್ರಾಕ್ಟರ್ಗೆ ಕೈಗಳಿಂದ ಹೊಡೆದು ಬಟ್ಟೆ ಬಿಚ್ಚಿಸಿ, ಅವರ ಮೊಬೈಲ್ನಲ್ಲಿ ಪೋಟೋ ತೆಗೆದುಕೊಂಡು 2 ಲಕ್ಷ ಹಣ ಕೊಡು, ಇಲ್ಲದಿದ್ದರೆ ಈ ಮಹಿಳೆಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದೀಯಾ ಎಂದು ನಿನ್ನ ಪತ್ನಿ-ಮಕ್ಕಳಿಗೆ ತಿಳಿಸುತ್ತೇವೆ ಎಂದು ಹೆದರಿಸಿದ್ದಾರೆ.
ಅಲ್ಲದೆ ಅವರ ಕೊರಳಲ್ಲಿದ್ದ ಚಿನ್ನದ ಸರ ಹಾಗೂ ಜೇಬಿನಲ್ಲಿದ್ದ 29 ಸಾವಿರ ಹಣ ಮತ್ತು ಮೊಬೈಲ್ ಕಿತ್ತುಕೊಂಡು ಕೆಳಗೆ ಹೋಗಿದ್ದಾರೆ.ನಂತರ ಮತ್ತೆ ಒಬ್ಬಾತ ವಾಪಾಸ್ ಬಂದು ಕೈಯಲ್ಲಿದ್ದ ಉಂಗುರವನ್ನು ಬಿಚ್ಚಿಸಿಕೊಂಡಿದ್ದಲ್ಲದೆ ಮತ್ತೆ ಮತ್ತೊಬ್ಬನೊಂದಿಗೆ ಬಂದು ಮೊಬೈಲ್ ಪೋನ್ನಲ್ಲಿ 26 ಸಾವಿರ ಹಣವನ್ನು ಫೋನ್ ಪೇ ಮಾಡಿಸಿಕೊಂಡು ಕೆಳಗೆ ಹೋಗಿ ಆಟೋದಲ್ಲಿ ಪರಾರಿಯಾಗಿದ್ದಾರೆ. ಕೆಲ ಸಮಯದ ಬಳಿಕ ವಂಚಕಿ ಮಹಿಳೆ ನಯನಾ ಸಹ ಸ್ಕೂಟರ್ನಲ್ಲಿ ಆಟೋ ಹಿಂಬಾಲಿಕೊಂಡು ಹೋಗಿದ್ದಾಳೆ.
ಸಿವಿಲ್ ಕಂಟ್ರಾಕ್ಟರ್ ಮುಂದೇನು ಮಾಡೋದು ಎಂದು ತೋಚದೆ ನಯನಾ ಮೊಬೈಲ್ಗೆ ಕರೆ ಮಾಡಿ ಪೊಲೀಸರಿಗೆ ದೂರು ಕೊಡೋಣವೆಂದು ಹೇಳಿದ್ದಾರೆ.ನೀವೇನಾದರೂ ಪೊಲೀಸ್ಗೆ ದೂರು ಕೊಟ್ಟರೆ ನನ್ನ ಮಗುವನ್ನು ನಿಮ ಮನೆಗೆ ಕರೆದುಕೊಂಡು ಬಂದು ನನ್ನ ಜೊತೆ ಅಕ್ರಮ ಸಂಬಂಧವಿದೆ ಎಂದು ಹೇಳುವುದಾಗಿ ಹೆದರಿಸಿದ್ದಾಳೆ. ಸಿವಿಲ್ ಕಂಟ್ರಾಕ್ಟರ್ ಮರ್ಯಾದೆಗೆ ಅಂಜಿ ದೂರು ಕೊಡದೆ ಸುಮನಾಗಿದ್ದಾರೆ.
ತದನಂತರದಲ್ಲಿ ತಾನು ಮಹಿಳೆಯ ಮಾತನ್ನು ನಂಬಿ ಮೋಸ ಹೋಗಿರುವುದನ್ನು ಅರಿತು ನಯನ ಹಾಗೂ ಇತರರ ವಿರುದ್ದ ಬ್ಯಾಡರಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಮೂವರನ್ನು ಬಂಧಿಸಿದ್ದು, ಉಳಿದವರಿಗಾಗಿ ಶೋಧ ಮುಂದುವರೆಸಿದ್ದಾರೆ.