Monday, December 30, 2024
Homeರಾಷ್ಟ್ರೀಯ | Nationalದೆಹಲಿಯ ನಿಗಮ್ ಬೋಧ್ ಘಾಟ್‌ನಲ್ಲಿ ಸಕಲ ಗೌರವಗಳೊಂದಿಗೆ ನೆರವೇರಿದ ಮನಮೋಹನ್ ಸಿಂಗ್ ಅಂತ್ಯಕ್ರಿಯೆ

ದೆಹಲಿಯ ನಿಗಮ್ ಬೋಧ್ ಘಾಟ್‌ನಲ್ಲಿ ಸಕಲ ಗೌರವಗಳೊಂದಿಗೆ ನೆರವೇರಿದ ಮನಮೋಹನ್ ಸಿಂಗ್ ಅಂತ್ಯಕ್ರಿಯೆ

Manmohan Singh Cremated At Delhi's Nigambodh Ghat With Full Military Honours:

ನವದೆಹಲಿ,ಡಿ.28– ದೇಶದ ಅಭಿವೃದ್ದಿಗೆ ಹೊಸ ಮುನ್ನುಡಿ ಬರೆದು ವಿಶ್ವವೇ ಭಾರತದ ಕಡೆಗೆ ತಿರುಗಿ ನೋಡುವಂತೆ ಮಾಡಿದ್ದ ಜಗತ್ತಿನ ಶ್ರೇಷ್ಠ ಆರ್ಥಿಕ ತಜ್ಞ ಹೆಮ್ಮೆ ಯ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಇತಿಹಾಸ ಪುಟಗಳಲ್ಲಿ ಸೇರಿದರು.

ಉಸಿರಾಟದ ತೊಂದರೆಯಿಂದಾಗಿ ದೆಹಲಿಯ ಏಮ್ಸೌ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದ ಡಾ.ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆಯನ್ನು ಸಿಖ್ ಸಂಪ್ರದಾಯದಂತೆ ನಿಗಮ್ ಬೋಧ್ಘಾಟ್ನಲ್ಲಿ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.

ಪುತ್ರಿ ಧಮನ್ ಸಿಂಗ್ ಸೇರಿದಂತೆ ಕುಟುಂಬಸ್ಥರು ಮಧ್ಯಾಹ್ನ 12.55ಕ್ಕೆ ಅಗ್ನಿಸ್ಪರ್ಶ ಮಾಡಿದ ನಂತರ ಡಾ.ಮನಮೋಹನ್ ಸಿಂಗ್ ಪಂಚಭೂತಗಳಲ್ಲಿ ಲೀನವಾದರು. ಈ ವೇಳೆ ಸಿಂಗ್ ಅಮರ್ ರಹೇ, ಅಮರ್ ರಹೇ ಎಂಬ ಘೋಷಣೆಗಳು ಮಾರ್ಧನಿಸಿದವು. ಇದಕ್ಕೂ ಮುನ್ನ ಪಾರ್ಥಿವ ಶರೀರದ ಮುಂದೆ ಶ್ರೀಗುರು ಗ್ರಂಥ ಸಾಹಿಬ್ ಜೀ ಅವರಿಂದ ಹಾಗೂ ಹಿರಿಯರು ಶ್ಲೋಕ ಪಠಿಸಿದರು.

ಕುಸಿಯುತ್ತಿದ್ದ ಭಾರತದ ಆರ್ಥಿಕತೆಯನ್ನು ಸರಿದಾರಿಗೆ ತಂದ ನವಭಾರತದ ಆರ್ಥಿಕತೆಯ ನಿರ್ಮಾತೃ, ದೇಶ ಕಂಡ ಶ್ರೇಷ್ಠ ಪ್ರಧಾನಿಯನ್ನು ಭಾರತೀಯರು ಭಾರವಾದ ಹೃದಯದಿಂದ ಬೀಳ್ಕೊಟ್ಟರು. ರಾಷ್ಟ್ರ ನಾಯಕರುಗಳು ಮನಮೋಹನ್ ಸಿಂಗ್ ಅವರಿಗೆ ಗೌರವ ಸಲ್ಲಿಸಿದ ಬಳಿಕ ಭೂ ಸೇನೆ, ವಾಯುಸೇನೆ ಮತ್ತು ನೌಕಾ ಸೇನಾ ಪಡೆಗಳಿಂದ ಸರ್ಕಾರಿ ಗೌರವ ಸೂಚಿಸಿ 21 ಸುತ್ತು ಕುಶಾಲ ತೋಪು ಹಾರಿಸಲಾಯಿತು. ನಂತರ ಸಿಂಗ್ ಅವರ ಪಾರ್ಥಿವ ಶರೀರಕ್ಕೆ ಹೊದಿಸಲಾಗಿದ್ದ ರಾಷ್ಟ್ರ ಧ್ವಜವನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.

ನಿಗಮ್ ಬೋಧ್ ಘಾಟ್ಗೆ ಪಾರ್ಥಿವ ಶರೀರ ತಲುಪಿದ ನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಶ್ ಧನಕರ್, ಪ್ರಧಾನಿ ನರೇಂದ್ರಮೋದಿ, ಭೂತಾನ್ ದೇಶದ ರಾಜ ಜಿಗೆ ಕೇಸರ್ ನಮ್ಗೇಯ್ಲ್ ವಾಂಗ್ಚುಂಕ್, ದೆಹಲಿ ಮುಖ್ಯಮಂತ್ರಿ ಅತಿಶಿ ಸಿಂಗ್, ಕೇಂದ್ರ ಸಚಿವರಾದ ಅಮಿತ್ ಷಾ, ರಾಜನಾಥ್ ಸಿಂಗ್, ಜೆ.ಪಿ.ನಡ್ಡಾ, ಕಿರಣ್ ರಿಜಿಜು, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಮೂರು ಸೇನಾ ಪಡೆಗಳ ಮುಖ್ಯಸ್ಥರು ಸೇರಿದಂತೆ ಗಣ್ಯಾತಿ ಗಣ್ಯರು ಅಗಲಿದ ನಾಯಕನಿಗೆ ಪುಷ್ಪ ನಮನ ಸಲ್ಲಿಸಿದರು.

ಇದಕ್ಕೂ ಮುನ್ನ ಬೆಳಗ್ಗೆ ನವದೆಹಲಿಯ ಮೋತಿಲಾಲ್ ನೆಹರು ಮಾರ್ಗದಲ್ಲಿರುವ ಡಾ.ಮನಮೋಹನ್ ಸಿಂಗ್ ಅವರ ನಿವಾಸದಿಂದ ಅಕ್ಬರ್ ರಸ್ತೆಯಲ್ಲಿರುವ ಎಐಸಿಸಿ ಕಚೇರಿಗೆ ಪಾರ್ಥಿವ ಶರೀರವನ್ನು ತರಲಾಯಿತು.

ಎಐಸಿಸಿ ಕಚೇರಿಗೆ ಬಂದ ಡಾ.ಮನಮೋಹನ್ ಸಿಂಗ್ ಅವರ ಪಾರ್ಥಿವ ಶರೀರಕ್ಕೆ ಮೊದಲು ಎಐಸಿಸಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ್ ಖರ್ಗೆ, ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ, ಸಂಸದೆ ಪ್ರಿಯಾಂಕ ವಾದ್ರ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಮುಖ್ಯಮಂತ್ರಿಗಳಾದ ಸುಖ್ವೀಂದರ್ ಸಿಂಗ್, ರೇವಂತ್ ರೆಡ್ಡಿ, ಮಾಜಿ ಮುಖ್ಯಮಂತ್ರಿಗಳಾದ ಅಶೋಕ್ ಗೆಹ್ಲೋಟ್, ಭೂಪೇಶ್ ಭಘೇಲ್ ಮತ್ತಿತರ ಗಣ್ಯರು ಅಗಲಿದ ನಾಯಕನಿಗೆ ಅಂತಿಮ ವಿದಾಯ ಹೇಳಿದರು.

ಬಳಿಕ ಎಐಸಿಸಿ ನಾಯಕಿ ಸೋನಿಯಾ ಗಾಂಧಿಯವರು ಅಗಲಿದ ಮೇರು ನಾಯಕನಿಗೆ ವಿಶೇಷವಾದ ನಮನ ಸಲ್ಲಿಸಿದ್ದು ಗಮನಸೆಳೆಯಿತು. ತ್ರಿವರ್ಣ ಧ್ವಜದ ಪಕ್ಕದಲ್ಲಿ ಚರಕಸಹಿತ ಕಾಂಗ್ರೆಸ್ ಧ್ವಜವನ್ನು ಹಾಕಲಾಗಿತ್ತು. ಈ ವೇಳೆ ಸೋನಿಯಾ ಗಾಂಧಿ ಅವರ ಕಣ್ಣಾಲಿಗಳು ಒದ್ದೆಯಾದವು.

ಎಐಸಿಸಿ ಕಚೇರಿಯಿಂದ ಮನಮೋಹನ್ ಸಿಂಗ್ ಅವರ ಪಾರ್ಥಿವ ಶರೀರವನ್ನು ದೆಹಲಿಯ ಎಸ್ಪಿಎಂ ಮಾರ್ಗ, ನೇತಾಜಿ ಸುಭಾಷ್ ಮಾರ್ಗ, ಲೂತಿಯಾನ್ ರಸ್ತೆ, ರಾಜ ರಸ್ತೆ, ಸಿಗ್ನೇಚರ್ ಬ್ರಿಡ್ಜ್ , ರಾಜ್ಘಾಟ್, ಕೊಹ್ಲಿ ರಸ್ತೆ, ವಿಭಿಷ್ಟರ ಸೇತುವೆ, ಚಾಂದಿನಿ ಚೌಕ್, ಥೀಸ್ ಹಜಾರ್ ಕೋರ್ಟ್, ಹಳೇ ರೈಲ್ವೆ ನಿಲ್ದಾನ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚರಿ ಸರಿಯಾಗಿ 11.30ಕ್ಕೆ ನಿಗಮ್ ಬೋಧ್ಘಾಟ್ ತಲುಪಿತು.

ಈ ವೇಳೆ ರಸ್ತೆಯ ಇಕ್ಕೆಲಗಳಲ್ಲಿ ಸೇರಿದ್ದ ಲಕ್ಷಾಂತರ ಮಂದಿ ಹೂಗುಚ್ಚಗಳನ್ನು ಹಾಕಿ ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು. ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆ ನಡೆದ ದೆಹಲಿಯ ನಿಗಮ್ ಬೋಧ್ಘಾಟ್ನ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರೀ ಭದ್ರತೆ ನಿಯೋಜಿಸಲಾಗಿತ್ತು. ಕೇಂದ್ರ ಸರ್ಕಾರವು ಮನಮೋಹನ್ ಸಿಂಗ್ ನಿಧನದ ಹಿನ್ನೆಲೆಯಲ್ಲಿ ಜನವರಿ 1ರವರೆಗೆ ಏಳು ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದೆ.

RELATED ARTICLES

Latest News