ಬೆಂಗಳೂರು,ಡಿ.30– ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರರ ಮಾತಿಗೆ ಅವರದೇ ಪಕ್ಷದಲ್ಲಿ ಕವಡೆ ಕಾಸಿನ ಕಿಮತ್ತಿಲ್ಲ. ಹೀಗಾಗಿ ಕಾಂಗ್ರೆಸ್ನ ನಾಯಕರನ್ನು ಟೀಕೆ ಮಾಡಿ ವಿಜಯೇಂದ್ರ ತಮ ಹುದ್ದೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೀದರ್ನ ಸಚಿನ್ ಅವರ ಆತಹತ್ಯೆ ಪ್ರಕರಣದಲ್ಲಿ ಆರೋಪಿ ಎಂದು ಹೇಳಲಾಗುತ್ತಿರುವ ವ್ಯಕ್ತಿ ನಮ ಪಕ್ಷದವರು ಎಂದು ನಾನು ಮೊದಲಿನಿಂದಲೇ ಹೇಳುತ್ತಿದ್ದೇನೆ. ನಾನು ಯಾವುದನ್ನೂ ಅಲ್ಲಗಳೆಯುತ್ತಿಲ್ಲ. ಯಾವುದೋ ಟೆಂಡರ್ ಕಾರಣಕ್ಕಾಗಿ ಹಣದ ವರ್ಗಾವಣೆಯಾಗಿದೆ ಎಂದು ಆರೋಪಿ ಸ್ಥಾನದಲ್ಲಿರುವವರು ಹೇಳುತ್ತಿದ್ದಾರೆ. ಇಲ್ಲಿ ಆರೋಪ-ಪ್ರತ್ಯಾರೋಪಗಳಿವೆ. ಸತ್ಯಾಂಶ ಹೊರಬರಬೇಕಾದರೆ ತನಿಖೆಯಾಗಬೇಕು ಎಂದು ನಾನೇ ಹೇಳುತ್ತಿದ್ದೇನೆ. ಇದರಲ್ಲಿ ಮುಚ್ಚಿಡುವಂತದ್ದು ಏನಿದೆ ಎಂದರು.
ಆರೋಪಿ ರಾಜು ಕಪನೂರು ಕಾಂಗ್ರೆಸ್ಗೆ ಬರುವ ಮುನ್ನ ಬಿಜೆಪಿಯಲ್ಲಿ ಪರಿಶಿಷ್ಟ ಜಾತಿಯ ಮೋರ್ಚದ ಅಧ್ಯಕ್ಷರಾಗಿದ್ದರು. ಕಲಬುರಗಿ ಉತ್ತರಕ್ಷೇತ್ರದಲ್ಲಿ ಎರಡು ಬಾರಿ ಬಿಜೆಪಿ ಅಭ್ಯರ್ಥಿಯಾಗಿದ್ದ ಚಂದು ಪಾಟೀಲ್ ಅವರ ಜೊತೆ ಇರುವ ಫೋಟೊಗಳು ವೈರಲ್ ಆಗುತ್ತಿವೆ. ಹಾಗೆಂದ ಮಾತ್ರಕ್ಕೆ ಈ ಪ್ರಕರಣದಲ್ಲಿ ಬಿಜೆಪಿಯ ಛಲವಾದಿ ನಾರಾಯಣಸ್ವಾಮಿ, ಆರ್.ಅಶೋಕ್, ವಿಜಯೇಂದ್ರ ಅವರ ಕೈವಾಡವಿದೆ ಎಂದು ನಾವು ಹೇಳಬಹುದೇ? ಎಂದು ಪ್ರಶ್ನಿಸಿದರು.
ಪ್ರತಿನಿತ್ಯ ಸಾಕ್ಷಿ ,ಆಧಾರ, ಪುರಾವೆಗಳಿಲ್ಲದೆ ಒಂದೊಂದು ರೀತಿಯ ಹೇಳಿಕೆಗಳನ್ನು ನೀಡುತ್ತಾ ಹೋದರೆ ಅದಕ್ಕೆಲ್ಲಾ ಉತ್ತರ ಕೊಡುತ್ತಾ ಕುಳಿತುಕೊಳ್ಳಲಾಗುವುದಿಲ್ಲ. ಆತಹತ್ಯೆ ಪ್ರಕರಣದಲ್ಲಿ ವಾಸ್ತವಾಂಶಗಳು ಮುನ್ನೆಲೆಗೆ ಬರಬೇಕು ಮತ್ತು ಕುಟುಂಬದ ಸದಸ್ಯರಿಗೆ ನ್ಯಾಯ ಸಿಗಬೇಕು. ಅದನ್ನು ಬಿಟ್ಟು ಬರೀ ರಾಜಕೀಯವೇ ಹೆಚ್ಚಾಗುತ್ತಿದೆ. ಕಾನೂನು ರೀತಿ ತನಿಖೆ ನಡೆದರೆ ಕುಟುಂಬಕ್ಕೆ ನ್ಯಾಯ ಸಿಗುತ್ತದೆ ಎಂದರು.
ಕುಟುಂಬದ ಸದಸ್ಯರು ಈಗ ದುಃಖದಲ್ಲಿ ಮತ್ತು ಸಿಟ್ಟಿನಲ್ಲಿದ್ದಾರೆ. ಪೊಲೀಸರು ಸಮಯಕ್ಕೆ ಸರಿಯಾಗಿ ಸ್ಪಂದಿಸಿಲ್ಲ ಎಂಬ ಆರೋಪ ಮಾಡಿದ್ದಾರೆ. ಅದಕ್ಕಾಗಿ ಹೆಡ್ ಕಾನ್ಸ್ಟೇಬಲ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ. ಅವರು ಸಮಾಧಾನಗೊಂಡ ಬಳಿಕ ಕುಟುಂಬದ ಸದಸ್ಯರ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸಲಾಗುವುದು. ನಿನ್ನೆ ಬಿಜೆಪಿ ಆಯೋಗ ಸಚಿನ್ ಅವರ ಮನೆಗೆ ಭೇಟಿ ನೀಡಿ 5 ಲಕ್ಷ ರೂ. ನೀಡಲು ಹೋದಾಗ ಸ್ವಾಭಿಮಾನ ಪ್ರದರ್ಶಿಸಿದ್ದಾರೆ. ನ್ಯಾಯ ಕೊಡಿಸಿ ಎಂದಿದ್ದಾರೆ.
ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ಕೊಡಿಸಿ ಎಂದು ಬಿಜೆಪಿಯವರು ಒತ್ತಾಯ ಮಾಡುವುದು ಬೇಕಿಲ್ಲ. ಒಂದು ವೇಳೆ ಆ ರೀತಿ ಹೇಳುವುದಾದರೆ ಕೇಂದ್ರ ಸರ್ಕಾರದಿಂದಲೇ ಬಿಜೆಪಿಯವರು ನೌಕರಿ ಕೊಡಿಸಲಿ ಎಂದು ಸವಾಲು ಹಾಕಿದರು. ರಾಜ್ಯಸರ್ಕಾರ ಕುಟುಂಬದ ಸದಸ್ಯರ ಬೇಡಿಕೆಗಳನ್ನು ಪರಿಶೀಲಿಸಲು ಸಿದ್ಧವಿದೆ. ರಾಜಕೀಯಕ್ಕಾಗಿ ಬಿಜೆಪಿಯವರು ಹೇಳಿದ್ದನ್ನೆಲ್ಲಾ ಕೇಳಲಾಗುವುದಿಲ್ಲ ಎಂದರು.
ಬಿಜೆಪಿಯಲ್ಲಿ ಬಣ ರಾಜಕೀಯ ತೀವ್ರವಾಗಿದೆ. ಒಬ್ಬರು ಧರಣಿ ಎಂದರೆ, ಮತ್ತೊಬ್ಬರು ಸಭಾತ್ಯಾಗ ಎನ್ನುತ್ತಾರೆ. ವಕ್ಫ್ ಹಾಗೂ ಬಾಣಂತಿಯರ ವಿಚಾರದಲ್ಲಿ ಭಿನ್ನಭಿನ್ನ ನಿಲುವುಗಳು ಬಿಜೆಪಿ ನಾಯಕರಲ್ಲಿದೆ. ಬಸನಗೌಡ ಪಾಟೀಲ್ ಯತ್ನಾಳ್, ರೇಣುಕಾಚಾರ್ಯ, ಕುಮಾರ್ಬಂಗಾರಪ್ಪ ನಿರಂತರವಾಗಿ ಪಕ್ಷ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ವಿರೋಧಪಕ್ಷದ ನಾಯಕರಿಗೆ ಹನಿಟ್ರ್ಯಾಪ್ ಮಾಡಿ ಎಚ್ಐವಿ ಚುಚ್ಚುಮದ್ದು ನೀಡಲು ಯತ್ನಿಸಿದ್ದ ಶಾಸಕ ಮುನಿರತ್ನ ಅವರಿಗೆ ಒಂದು ನೋಟಿಸ್ ನೀಡಲು ರಾಜ್ಯಾಧ್ಯಕ್ಷರಿಗೆ ಸಾಧ್ಯವಾಗುತ್ತಿಲ್ಲ. ವಿಜಯೇಂದ್ರರ ಮಾತುಗಳಿಗೆ ಪಕ್ಷದಲ್ಲಿ ಕಿಮತ್ತಿಲ್ಲ. ಹೀಗಾಗಿ ಕಾಂಗ್ರೆಸ್ ನಾಯಕರನ್ನು ಟೀಕಿಸಿ ಅಸ್ತಿತ್ವ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.
ಹೊಸ ವರ್ಷಕ್ಕೆ ಬಿಜೆಪಿ ನಾಯಕತ್ವ ಬದಲಾಗುತ್ತದೆ ಎಂದು ಅವರದೇ ಪಕ್ಷದ ಕುಮಾರ್ ಬಂಗಾರಪ್ಪ ಹೇಳಿದ್ದಾರೆ. ಹೀಗಾಗಿ ತಾನು ಸಕ್ರಿಯನಾಗಿದ್ದೇನೆ ಎಂದು ತೋರಿಸಿಕೊಂಡು ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ.
ಯಡಿಯೂರಪ್ಪ ಪ್ರಕರಣದಲ್ಲಿ ಎಫ್ಎಸ್ಎಲ್ ವರದಿ ಆಧರಿಸಿ ನಾನು ಮಾತನಾಡುತ್ತಿದ್ದೇನೆ. ಬಿಜೆಪಿಯವರು ನನ್ನ ವಿರುದ್ಧ ಯಾವ ಆಧಾರದ ಮೇಲೆ ಆರೋಪ ಮಾಡುತ್ತಿದ್ದಾರೆ. ಅವರುಗಳೇನು ನ್ಯಾಯಾಧೀಶರೇ ಎಂದು ತಿರುಗೇಟು ನೀಡಿದರು.ತಮ ಮನೆಗೆ ಮುತ್ತಿಗೆ ಹಾಕುವುದಾದರೆ ಎಷ್ಟು ಜನ ಬರುತ್ತಾರೆ ಎಂಬುದನ್ನು ಹೇಳಲಿ, ಅವರಿಗೆಲ್ಲಾ ಟೀ-ಕಾಫಿ ವ್ಯವಸ್ಥೆ ಮಾಡುತ್ತೇವೆ ಎಂದು ಲೇವಡಿ ಮಾಡಿದರು.