ಬೆಂಗಳೂರು,ಜ.23- ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿ ನಿರ್ಗಮಿಸಿದ ವೇಳೆ ರಾಜ್ಯಪಾಲರನ್ನು ಅಡ್ಡಗಟ್ಟಿ ರೌಡಿಯಂತೆ ವರ್ತಿಸಿದ ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರನ್ನು ಸದನದಿಂದ ಅಮಾನತು ಮಾಡಬೇಕೆಂದು ಪ್ರತಿಪಕ್ಷ ಬಿಜೆಪಿ ಪಟ್ಟು ಹಿಡಿದಿದ್ದರಿಂದ ವಿಧಾನಪರಿಷತ್‌ನಲ್ಲಿ ಭಾರೀ ಗದ್ದಲ, ಕೋಲಾಹಲ ಉಂಟಾಗಿ ಕಲಾಪವನ್ನು ಮುಂದೂಡಲಾಯಿತು.
ದಿನದ ಕಲಾಪ ಪ್ರಾರಂಭವಾಗುತ್ತಿದ್ದಂತೆ ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಪ್ರಶ್ನೋತ್ತರ ಕಲಾಪವನ್ನು ಪ್ರಾರಂಭಿಸಲು ಮುಂದಾದರು. ಈ ವೇಳೆ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಸ್ವಾಮಿ ಅವರು ವಿಷಯ ಪ್ರಸ್ತಾಪಿಸಲು ಮುಂದಾದರು. ನಾನು ನೀಡಿರುವ ಪತ್ರದ ಮೇಲೆ ವಿಷಯ ಪ್ರಸ್ತಾಪಿಸಲು ಅವಕಾಶ ಕೊಡಿ ಎಂದು ಸಭಾಪತಿಯವರಿಗೆ ಮನವಿ ಮಾಡಿದರು.
ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಗದ್ದಲ, ಮಾತಿನ ಚಕಮಕಿ ನಡೆಯಿತು. ವಿಷಯ ಪ್ರಸ್ತಾಪಿಸಲು ವಿರೋಧ ಪಕ್ಷದ ನಾಯಕರಿಗೆ ಅವಕಾಶ ಕೊಡಿ ಎಂದು ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಒತ್ತಾಯ ಮಾಡಿದರು. ಆಗ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು ಕ್ರಿಯಾಲೋಪ ಎತ್ತಲು ಮುಂದಾದರು. ಈ ಹಂತದಲ್ಲಿ ಮತ್ತೆ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ಗದ್ದಲ ಉಂಟಾಯಿತು.
ಆಗ ಸಭಾನಾಯಕ ಹಾಗೂ ಸಚಿವ ಭೋಸ್‌ರಾಜ್ ಅವರು ಪ್ರತಿಪಕ್ಷದ ಸದಸ್ಯರು ಸದನವನ್ನು ಹಾಳು ಮಾಡಲು ಬಂದಿದ್ದಾರೆ. ಅವರಿಗೆ ಕಲಾಪ ನಡೆಯಬಾರದೆಂಬ ದುರುದ್ದೇಶವಿದೆ. ಹೀಗಾಗಿಯೇ ಬೇಡದ ವಿಷಯಗಳನ್ನು ಪ್ರಸ್ತಾಪಿಸಲು ಮುಂದಾಗುತ್ತಿದ್ದಾರೆ. ಸಂವಿಧಾನ ವಿರೋಧಿ ಯಾರು? ರಾಷ್ಟ್ರಗೀತೆಗೆ ಅಪಮಾನ ಮಾಡಿದ್ದು ಯಾರು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ತಿರುಗೇಟು ನೀಡಿದರು.
ಆಗ ಪ್ರತಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು, ಪ್ರತಿಪಕ್ಷದ ನಾಯಕರು ಇನ್ನೂ ವಿಷಯವನ್ನೇ ಪ್ರಸ್ತಾಪಿಸಿಲ್ಲ. ಅವರು ಏನು ಹೇಳುತ್ತಾರೆ ಎಂಬುದು ಗೊತ್ತಿಲ್ಲ. ಅದಕ್ಕೂ ಮುನ್ನವೇ ಕ್ರಿಯಾಲೋಪ ಎತ್ತಲು ಅವಕಾಶ ನೀಡಿದರೆ ಹೇಗೆ ಎಂದು ಸಭಾಪತಿಯವರನ್ನು ಪ್ರಶ್ನಿಸಿದರು.
ಇದಕ್ಕೆ ದನಿಗೂಡಿಸಿದ ಜೆಡಿಎಸ್‌ನ ಭೋಜೇಗೌಡ, ಸಭಾ ನಾಯಕರಿಗೆ ಎಷ್ಟು ಸ್ಥಾನಮಾನ ಇರುತ್ತದೆಯೋ ಅದೇ ರೀತಿ ಪ್ರತಿಪಕ್ಷದ ನಾಯಕರಿಗೂ ಸರಿಸಮಾನವಾದ ಸ್ಥಾನಮಾನ ಇರುತ್ತದೆ. ನೀವು ವಿಷಯ ಪ್ರಸ್ತಾಪಿಸಲು ಅವಕಾಶ ಕೊಡದಿದ್ದರೆ ಸದಸ್ಯರ ಹಕ್ಕನ್ನು ಮೊಟಕುಗೊಳಿಸಿದಂತಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಪಕ್ಷದ ನಾಯಕರು ಪತ್ರವನ್ನು ಕೊಟ್ಟಾಗ ಅದನ್ನು ಪರಿಶೀಲಿಸಿ ಚರ್ಚೆಗೆ ಅವಕಾಶ ಕೊಡಬೇಕು. ಅದಕ್ಕೂ ಮೊದಲೇ ಕ್ರಿಯಾಲೋಪ ಪ್ರಸ್ತಾಪಿಸಲು ಅವಕಾಶ ನೀಡಿದರೆ ಸದನಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಹೇಳಿದರು. ಇದಕ್ಕೆ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ದನಿಗೂಡಿಸಿದರು.
ಆಗ ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಂ ಅವರು, ಸದನದಲ್ಲಿ ಯಾರು ಹೇಗೆ ವರ್ತನೆ ಮಾಡಿದ್ದಾರೆ ಎಂಬುದು ಗೊತ್ತಿದೆ. ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡವರು ಯಾರು? ರಾಷ್ಟ್ರಗೀತೆಗೆ ಅಪಮಾನ ಮಾಡಿದವರು ಯಾರು ಎಂದು ಪ್ರಶ್ನಿಸಿದರು. ಈ ಹಂತದಲ್ಲಿ ಮತ್ತೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಭಾರೀ ಗದ್ದಲ, ಮಾತಿನ ಚಕಮಕಿ, ಆರೋಪ, ಪ್ರತ್ಯಾರೋಪಗಳು ನಡೆದವು.
ಆಗಲೇ ಬೇಕು.. ಆಗಲೇಬೇಕು.. ಗೂಂಡಾ ಶಾಸಕ ಹರಿಪ್ರಸಾದ್ ಅಮಾನತು ಆಗಲೇಬೇಕು. ರೌಡಿಯಂತೆ ವರ್ತಿಸಿರುವ ಸದಸ್ಯನನ್ನು ಸದನದಿಂದ ಹೊರಗೆ ಹಾಕಿ. ಈ ತಕ್ಷಣವೇ ಅವರನ್ನು ಮಾರ್ಷಲ್‌ಗಳ ಮೂಲಕ ಹೊರಗೆ ಹಾಕಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯಪಾಲರನ್ನು ಕರೆಸಿ ದುರುದ್ದೇಶಪೂರ್ವಕವಾಗಿ ಅಪಮಾನ ಮಾಡಲಾಗಿದೆ. ತಾವೊಬ್ಬ ಶಾಸಕರು ಎಂಬುದನ್ನು ಮರೆತು ಗೂಂಡಾ ವರ್ತನೆ ತೋರಿರುವ ಹರಿಪ್ರಸಾದ್ ಅವರಿಗೆ ಸದನದಲ್ಲಿ ಕೂರಲು ಅರ್ಹತೆ ಇಲ್ಲ ಎಂದು ಕಾಂಗ್ರೆಸ್ ವಿರುದ್ಧ ಪ್ರತಿಪಕ್ಷದ ಸದಸ್ಯರು ವಾಗ್ದಾಳಿ ನಡೆಸಿದರು.
ಇದಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್ ಸದಸ್ಯರು, ಮೊದಲು ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಬೇಕು. ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸಿದ್ದಾರೆ. ಇದಕ್ಕೆ ಬಿಜೆಪಿಯೇ ಕಾರಣ ಎಂದು ದೂರಿದರು. ಈ ವೇಳೆ ಗದ್ದಲ ಎದ್ದಾಗ ತಾಳೆ ಕಳೆದುಕೊಂಡು ಸಭಾಪತಿಗಳು ಪೀಠದಿಂದ ಎದ್ದು ನಿಂತು ನಿಮಗೆ ಮಾನ-ಮರ್ಯಾದೆ ಇಲ್ಲವೇ? ಸಹನೆಗೂ ಒಂದು ಇತಿಮಿತಿ ಇದೆ. ಇದೇ ರೀತಿ ನಡೆದುಕೊಂಡರೆ ಸದನದಿಂದ ಹೊರ ಹಾಕುತ್ತೇನೆ ಎಂದು ಎಚ್ಚರಿಸಿದರು.
ಆಗ ವಿಷಯ ಪ್ರಸ್ತಾಪಿಸಿದ ಛಲವಾದಿ ನಾರಾಯಣಸ್ವಾಮಿ, ರಾಜ್ಯಪಾಲರು ಶಿಷ್ಟಾಚಾರದಂತೆ ಸದನಕ್ಕೆ ಬಂದು ಭಾಷಣ ಮಾಡಿದ್ದಾರೆ. ಅವರಿಂದ ಯಾವುದೇ ರೀತಿಯ ಕರ್ತವ್ಯಲೋಪ ಆಗಿಲ್ಲ. ಸದನದಿಂದ ನಿರ್ಗಮಿಸುವ ವೇಳೆ ಈ ಸದನದ ಸದಸ್ಯರಾದ ಹರಿಪ್ರಸಾದ್ ಅವರು ಅವರನ್ನು ಅಡ್ಡಗಟ್ಟಿ ಗೂಂಡಾಗಿರಿ ಪ್ರವೃತ್ತಿಯನ್ನು ತೋರಿಸಿದ್ದಾರೆ. ಅವರನ್ನು ತಕ್ಷಣ ಸದನದಿಂದ ಅಮಾನತುಪಡಿಸಿ ಎಂದು ಒತ್ತಾಯಿಸಿದರು.
ಗೂಂಡಾಗಿರಿ ಪದ ಬಳಸಿದಕ್ಕೆ ಕಾಂಗ್ರೆಸ್ ಸದಸ್ಯರು ಆಕ್ಷೇಪಿಸಿ, ಈ ಪದವನ್ನು ಕಡತದಿಂದ ತೆಗೆದು ಹಾಕಿ ಎಂದು ಮನವಿ ಮಾಡಿಕೊಂಡರು. ಮಾತು ಮುಂದುವರೆಸಿ, ಹಿಂದೆ ಹಂಸರಾಜ್ ಭಾರದ್ವಾಜ್ ಅವರು ಸರ್ಕಾರ ಕೊಟ್ಟಿದ್ದ ಭಾಷಣವನ್ನೇ ಓದಿರಲಿಲ್ಲ. ತಾನು ಸರ್ಕಾರದ ಗುಲಾಮ ಎಂದು ಹೇಳಿರಲಿಲ್ಲ. ಆಗ ಕಾಂಗ್ರೆಸ್ ಸದಸ್ಯರು ಬಾಯಿ ಮುಚ್ಚಿಕೊಂಡು ಏಕೆ ಕುಳಿತಿದ್ದರು ಎಂದು ಪ್ರಶ್ನಿಸಿದರು.
ಕ್ರಿಯಾಲೋಪ ಪ್ರಸ್ತಾಪಿಸಿದ ಹರಿಪ್ರಸಾದ್, ರಾಜ್ಯಪಾಲರು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಅವರಿಂದ ರಾಷ್ಟ್ರಗೀತೆಗೆ ಅವಮಾನವಾಗಿದೆ ಎಂದು ಹೇಳುತ್ತಿದ್ದಂತೆ ಸದನದಲ್ಲಿ ಭಾರೀ ಕೋಲಾಹಲ ಉಂಟಾಗಿತ್ತು. ಆರ್‌ಎಸ್‌ಎಸ್‌ನವರು ಎಂದಿಗೂ ರಾಷ್ಟ್ರಗೀತೆಗೆ ಗೌರವ ಕೊಟ್ಟಿಲ್ಲ. ಬಿಜೆಪಿ ಅತ್ಯಾಚಾರಿಗಳ ಪಕ್ಷ, ಬಲಾತ್ಕಾರಿಗಳ ಪಕ್ಷ, ಸುಪ್ರೀಂಕೋರ್ಟ್‌ನಲ್ಲಿ ತಡೆಯಾಜ್ಞೆ ತಂದವರು ನಮ ಬಗ್ಗೆ ಮಾತನಾಡುವ ನೈತಿಕತೆ ಉಳಿಸಿಕೊಂಡಿಲ್ಲ ಎಂದು ವಾಗ್ದಾಳಿ ನಡೆಸಿದರು. ಹೀಗೆ ಎರಡೂ ಕಡೆ ಗಲಾಟೆ ಉಂಟಾಗಿದ್ದರಿಂದ ಸಭಾಪತಿ ಸದನವನ್ನು ಮುಂದೂಡಿದರು.
