Friday, January 23, 2026
Homeರಾಜ್ಯಪೂರ್ಣ ಭಾಷಣ ಓದದೇ ಸದನಕ್ಕೆ ಅಪಮಾನ : ರಾಜ್ಯಪಾಲರ ಕ್ಷಮೆಯಾಚನೆಗೆ ಎಚ್‌.ಕೆ.ಪಾಟೀಲ್‌ ಆಗ್ರಹ

ಪೂರ್ಣ ಭಾಷಣ ಓದದೇ ಸದನಕ್ಕೆ ಅಪಮಾನ : ರಾಜ್ಯಪಾಲರ ಕ್ಷಮೆಯಾಚನೆಗೆ ಎಚ್‌.ಕೆ.ಪಾಟೀಲ್‌ ಆಗ್ರಹ

Insult to the House without reading the full speech: H.K. Patil demands an apology from the Governor.

ಬೆಂಗಳೂರು,ಜ.23- ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಸಂಪುಟದಲ್ಲಿ ಒಪ್ಪಿಗೆ ನೀಡಿದ ಭಾಷಣವನ್ನು ಪೂರ್ತಿಯಾಗಿ ಓದದೆ ಸದನಕ್ಕೆ ಅಪಮಾನ ಮಾಡಿದ್ದಾರೆ. ಈ ಕಾರಣಕ್ಕೆ ಜನತೆಯ ಬಳಿ ಕ್ಷಮೆ ಕೇಳಬೇಕಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ್‌ ಆಗ್ರಹಿಸಿದ್ದಾರೆ.

ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಭಾಷಣ ಮಾಡಿದ ಬಳಿಕ ನಡೆದ ಘಟನೆಗಳ ಬಗ್ಗೆ ನಡೆದ ಚರ್ಚೆಯಲ್ಲಿ ಎಚ್‌.ಕೆ.ಪಾಟೀಲ್‌ ಸರ್ಕಾರದ ಪರವಾಗಿ ಉತ್ತರ ನೀಡಿದರು. ಈ ಹಿಂದೆ ಬಿಜೆಪಿ ಶಾಸಕರು ವಿಧಾನಸಭೆಯಲ್ಲಿ ಗದ್ದಲ ಮಾಡಿ ಕಾಗದಪತ್ರಗಳನ್ನು ಹರಿದು ಸ್ಪೀಕರ್‌ ಮುಖಕ್ಕೆ ತೂರಿ ಪೀಠದ ಬಳಿಗೆ ಹೋಗಿ ಭುಜಕ್ಕೆ ಭುಜಕೊಟ್ಟು ನಿಂತಿದ್ದರು. ಆ ಮಹಾಪರಾಧಕ್ಕಾಗಿ 18 ಜನರನ್ನು ಅಮಾನತುಗೊಳಿಸಲಾಗಿತ್ತು. ಅಂದಿನ ಘಟನೆಯನ್ನು ನಿನ್ನೆ ಜಂಟಿ ಅಧಿವೇಶನದ ಬಳಿಕ ನಡೆದ ಬೆಳವಣಿಗೆಗಳಿಗೆ ಹೋಲಿಕೆ ಮಾಡಿ ಸಮರ್ಥಿಸಿಕೊಳ್ಳುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಇದು ಸರಿಯಲ್ಲ. ಅಂದು ಅದು ಅಪರಾಧವಾಗಿದ್ದರೆ ನಿನ್ನೆಯ ಘಟನೆ ಸಂವಿಧಾನ ರಕ್ಷಣೆಗಾಗಿ ನಡೆದಿರುವುದು ಎಂದು ಸಮರ್ಥಿಸಿಕೊಂಡರು.

ಬಿಜೆಪಿಯವರು ಹಿಂದಿನ ಘಟನೆಗೆ ಹೋಲಿಕೆ ಮಾಡಿಕೊಂಡು ಜನರ ಮನಸ್ಸಿನಿಂದ ತಮ ಅಪರಾಧವನ್ನು ಅಳಿಸುವ ತೇಪೆ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಬಿಜೆಪಿಯ ಅಶ್ವತ್ಥ ನಾರಾಯಣ ಅವರು ನಿಯಮ 27 ಅನ್ನು ಉಲ್ಲೇಖಿಸಿದ್ದಾರೆ. ಈ ಎಲ್ಲಾ ನಿಯಮಗಳಿಗೂ ತಾಯಿಯಾಗಿ ಸಂವಿಧಾನವಿದೆ.

ಅದರಲ್ಲಿನ ಕಲಂ 176(1) ಪ್ರಕಾರ, ರಾಜ್ಯಪಾಲರು ವಿಧಾನಸಭೆಯ ವರ್ಷದ ಮೊದಲ ಅಧಿವೇಶನದಲ್ಲಿ ಭಾಷಣ ಮಾಡುವುದು ಕಡ್ಡಾಯ. ಆದರೆ ರಾಜ್ಯಪಾಲರು ಸಂವಿಧಾನದ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಅವರಿಗೆ ಯಾವ ಒತ್ತಡ ಇತ್ತು ಎಂಬುದು ಗೊತ್ತಿಲ್ಲ. ರಾಜಭವನಕ್ಕೆ ಕೇಂದ್ರ ಸರ್ಕಾರದಿಂದ ಯಾವ ರೀತಿಯ ಕರೆ ಬರುತ್ತವೆ ಎಂದು ನಾನು ವಿವರಣೆ ನೀಡಲು ಬಯಸುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ಬಿಜೆಪಿಯ ಸುರೇಶ್‌ಕುಮಾರ್‌ ಮಾತನಾಡಿ, ಈ ಹಿಂದೆ ರಾಜ್ಯಪಾಲರಾಗಿದ್ದ ಹಂಸರಾಜ್‌ ಭಾರದ್ವಾಜ್‌ ಅವರಿಗೆ ಆಗಿನ ಕೇಂದ್ರ ಸರ್ಕಾರ ಯಾವ ರೀತಿ ಕರೆ ಮಾಡುತ್ತಿತ್ತು ಎಂಬುದನ್ನು ಹೇಳಬೇಕಾಗುತ್ತದೆ ಎಂದರು.

ಆಗ ಪಾಟೀಲ್‌ ಅವರು, ಸತ್ಯ ಹೇಳಿದರೆ ನೋವುಂಟಾಗುವುದು ಸಹಜ. ಆದರೆ ರಾಜ್ಯಪಾಲರ ಜವಾಬ್ದಾರಿಯ ಬಗ್ಗೆ ಸಂವಿಧಾನದಲ್ಲಿ ಸ್ಪಷ್ಟ ಉಲ್ಲೇಖವಿದೆ. ಸುಪ್ರೀಂಕೋರ್ಟ್‌ ಮತ್ತು ಹೈಕೋರ್ಟ್‌ನಲ್ಲೂ ಸಾಕಷ್ಟು ನಿರ್ಣಯಗಳಿವೆ. ಲೋಕಸಭೆಯಲ್ಲಿ ಕೇಂದ್ರ ಗೃಹಸಚಿವರು ನೀಡಿರುವ ಹೇಳಿಕೆ ಹಾಗೂ ಸಂಸತ್‌ನಲ್ಲಿ ರಾಷ್ಟ್ರಪತಿಯವರ ಭಾಷಣದ ಸಂಪ್ರದಾಯ ಎಲ್ಲವನ್ನೂ ಪರಿಗಣಿಸಿ ಎಲ್ಲವನ್ನೂ ಸೇರಿಸಿ ಹೇಳುವುದಾದರೆ, ನಿನ್ನೆಯ ಘಟನೆಯಲ್ಲಿ ರಾಜ್ಯಪಾಲರು ಸಂವಿಧಾನ ಉಲ್ಲಂಘಿಸಿದ್ದಾರೆ ಎಂದು ಒತ್ತಿ ಹೇಳಿದರು.

ರಾಜ್ಯ ಸರ್ಕಾರ ತನ್ನ ನೀತಿ ನಿಲುವುಗಳನ್ನು ರಾಜ್ಯಪಾಲರ ಮೂಲಕ ಭಾಷಣ ಮಾಡಿಸಿ ಕೇಂದ್ರಕ್ಕೆ ಮನವರಿಕೆ ಮಾಡಿಕೊಡುವುದು ಪ್ರಜಾಪ್ರಭುತ್ವದ ಹಾದಿಯಾಗಿದೆ. ರಾಜ್ಯಪಾಲರು ಖುಷಿಯಾಗಲಿ ಎಂದು ನಾವು ಭಾಷಣ ಸಿದ್ದಪಡಿಸುವುದಿಲ್ಲ. ಒಟ್ಟು 122 ಪ್ಯಾರಾಗಳ ಭಾಷಣದಲ್ಲಿ ಯಾರನ್ನೂ ವೈಯಕ್ತಿಕವಾಗಿ ನಿಂದಿಸಿರಲಿಲ್ಲ ಎಂದು ಸ್ಪಷ್ಟನೆ ನೀಡಿದರು.
ರಾಜ್ಯಪಾಲರು ಅಧಿವೇಶನದಿಂದ ಓಡಿಹೋಗಿದ್ದಾರೆ ಎಂಬ ಮಾತಿಗೆ ನಾನು ಈಗಲೂ ಬದ್ಧನಾಗಿದ್ದೇನೆ. ಸಚಿವ ಎಚ್‌.ಕೆ.ಪಾಟೀಲ್‌ ಅವರು ರಾಜ್ಯಪಾಲರನ್ನು ಕರೆಯಲು ಹೋಗಿದ್ದರು ಎಂದು ವಿರೋಧ ಪಕ್ಷದವರು ಆಪಾದಿಸಿದ್ದಾರೆ. ರಾಜ್ಯಪಾಲರು ನಿರ್ಗಮಿಸುವಾಗ ಅವರನ್ನು ಹಿಂಬಾಲಿಸುವಂತೆ ಮುಖ್ಯಮಂತ್ರಿಯವರು ಸನ್ನೆ ಮಾಡಿದರು. ಅದರಂತೆ ನಾನು ಹೆಜ್ಜೆ ಹಾಕಿದ್ದೆ. ಬಹುಶಃ ಅದನ್ನು ವಿರೋಧ ಪಕ್ಷದವರು ತಪ್ಪಾಗಿ ಭಾವಿಸಿದಂತಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ನಾನು ಸೇರಿದಂತೆ ಸಂಪುಟದ ಸಚಿವರು ರಾಜ್ಯಪಾಲರಿಗೆ ಹಸ್ತಲಾಘವ ನೀಡಿ ಕಾರಿನಲ್ಲಿ ಕೂರಿಸಿ ಗೌರವಯುತವಾಗಿ ಬೀಳ್ಕೊಟ್ಟಿದ್ದೇವೆ. ಎಲ್ಲಿಯೂ ಅವರಿಗೆ ಅಪಮಾನ ಮಾಡಿಲ್ಲ ಎಂದು ಸಮರ್ಥಿಸಿಕೊಂಡರು.

ವಿಷಯ ಪ್ರಸ್ತಾಪಿಸಿರುವ ವಿರೋಧ ಪಕ್ಷದ ನಾಯಕರು ಮತ್ತು ಸದಸ್ಯರುಗಳು ರಾಜ್ಯಪಾಲರಿಗೆ ಯಾರಿಂದ ಅವಮಾನವಾಗಿದೆ ಎಂದು ಹೆಸರನ್ನು ಉಲ್ಲೇಖಿಸಿಲ್ಲ. ವಿಧಾನಪರಿಷತ್‌ನ ಸದಸ್ಯ ಬಿ.ಕೆ.ಹರಿಪ್ರಸಾದ್‌ ಹೆಸರು ಹೇಳಿದ್ದಾರೆ. ಅವರ ಈ ಮನೆಯ ಸದಸ್ಯರಲ್ಲದ ಕಾರಣ ಚರ್ಚೆ ಮಾಡಲು ಅಥವಾ ಕ್ರಮ ತೆಗೆದುಕೊಳ್ಳಲು ಅವಕಾಶ ಇಲ್ಲ ಎಂದು ಎಚ್‌.ಕೆ.ಪಾಟೀಲ್‌ ಒತ್ತಿ ಹೇಳಿದರು.

ರಾಜ್ಯಪಾಲರು ತಮ ಭಾಷಣವನ್ನು ಚುಟುಕಾಗಿ ಮುಗಿಸಿ ಜೈಹಿಂದು ಹೇಳಿ ಹೊರಟರೇ ಬಿಟ್ಟರು. ರಾಷ್ಟ್ರಗೀತೆ ಹಾಕುವವರೆಗೂ ಕಾಯಲಿಲ್ಲ. ರಾಜ್ಯಪಾಲರನ್ನು ಸ್ವಾಗತಿಸುವ ಮತ್ತು ಬೀಳ್ಕೊಡುವ ಬಗ್ಗೆ ಸಭಾಧ್ಯಕ್ಷರ ಕಚೇರಿಯಿಂದ ನೀಡಲಾಗಿರುವ ಲಘು ಟಿಪ್ಪಣಿಯಲ್ಲಿ ಸ್ಪಷ್ಟ ಉಲ್ಲೇಖವಿತ್ತು. ಅದರಂತೆ ನಾವು ನಡೆದುಕೊಂಡಿದ್ದೇವೆ. ಆದರೆ ರಾಜ್ಯಪಾಲರು ಯಾರ ಒತ್ತಡಕ್ಕೆ ಇಲ್ಲವೇ ಗೊಂದಲಕ್ಕೆ ಒಳಗಾಗಿದ್ದರೋ ಗೊತ್ತಿಲ್ಲ. ತಕ್ಷಣ ಹೊರಟುಹೋಗಿದ್ದಾರೆ. ಅವರ ನಡೆ ಸಂವಿಧಾನ ಉಲ್ಲಂಘನೆಯಾಗಿದೆ. ಹೀಗಾಗಿ ರಾಜ್ಯಪಾಲರು ಕನ್ನಡ ನಾಡಿನ ಮತ್ತು ಸದನದ ಕ್ಷಮೆ ಕೇಳಬೇಕು ಎಂದು ಪಾಟೀಲ್‌ ಪ್ರತಿಪಾದಿಸಿದರು.
ಬಿಜೆಪಿಯವರು ರಾಜಕಾರಣವನ್ನು ಮುಂದೆ ತಂದು ರಾಜ್ಯಪಾಲರನ್ನು ಪಕ್ಷದ ವ್ಯಕ್ತಿ ಎಂಬಂತೆ ಸಮರ್ಥಿಸಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಅವರು ಆಕ್ಷೇಪಿಸಿದರು.

RELATED ARTICLES

Latest News