ಬೆಂಗಳೂರು,ಡಿ.31- ಹೊಸ ವರ್ಷವನ್ನು ಬರಮಾಡಿಕೊಳ್ಳಲು ಮುಂದಾಗಿರುವ ರಾಜ್ಯದ ಜನತೆಗೆ ಏಕಕಾಲಕ್ಕೆ ಡಬ್ಬಲ್ ಶಾಕ್ ಕೊಡಲು ರಾಜ್ಯ ಸರ್ಕಾರ ಸದ್ದಿಲ್ಲದೆ ಸಿದ್ದತೆ ಮಾಡಿಕೊಂಡಿದ್ದು, ಬೆಲೆ ಏರಿಕೆಯ ಬಿಸಿ ಇನ್ನಷ್ಟು ತಟ್ಟಲಿದೆ.
ಒಂದು ಕಡೆ ತರಕಾರಿ ಬೆಲೆ ದಿನದಿಂದ ದಿನಕ್ಕೆ ಗಗನಮುಖಿಯಾಗುತ್ತಿದ್ದರೆ, ಇನ್ನೊಂದು ಕಡೆ ಹಾಲು, ತುಪ್ಪ ಕೂಡ ಯಾವುದೇ ಸಂದರ್ಭದಲ್ಲಿ ಮತ್ತೆ ಹೆಚ್ಚಳವಾಗಬಹುದು. ಇದಲ್ಲದೆ, ಬಸ್ ಹಾಗೂ ಅಟೋ ದರ ಹೆಚ್ಚಳವಾದರೆ, ಜನಸಾಮಾನ್ಯರ ಬದುಕು ಮತ್ತಷ್ಟು ದುಬಾರಿಯಾಗಲಿದೆ.
ನಷ್ಟದಲ್ಲಿರುವ ಸಾರಿಗೆ ನಿಗಮಗಳನ್ನು ಸರಿ ದಾರಿಗೆ ತರಲು ಪ್ರಯಾಣದರ ಪರಿಷ್ಕರಣೆ ಮಾಡುವಂತೆ ನಾಲ್ಕು ನಿಗಮಗಳು ಸರ್ಕಾರ ಮೇಲೆ ಒತ್ತಡ ಹಾಕಿವೆ. ಇದರ ಬೆನ್ನಲ್ಲೇ ಅಟೋರಿಕ್ಷಾ ದರವನ್ನು ಹೆಚ್ಚಳ ಮಾಡುವಂತೆ ಸಂಘಗಳು ಪಟ್ಟು ಹಿಡಿದಿವೆ.
ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ಶೇ.15ರಷ್ಟು ಪ್ರಯಾಣ ದರ ಹೆಚ್ಚಳ ಮಾಡಬೇಕೆಂದು ಮನವಿ ಮಾಡಿವೆ.ಇದರ ಜೊತೆಗೆ ಇಂಧನ, ಬಿಡಿಭಾಗಗಳು ಮತ್ತು ಜೀವನ ನಿರ್ವಹಣಾ ವೆಚ್ಚ ನಿರಂತರವಾಗಿ ಏರಿಕೆಯಾಗಿರುವುದರಿಂದ ಆಟೋಗಳ ಕಾರ್ಯಾಚರಣೆ ವೆಚ್ಚವು ಗಗನಕ್ಕೇರಿದೆ. ಆದರೆ ಕಳೆದ ಮೂರು ವರ್ಷಗಳಿಂದ ದರಗಳು ಒಂದೇ ಆಗಿವೆ ಎಂದು ಆಟೋ ರಿಕ್ಷಾ ಚಾಲಕರ ಒಕ್ಕೂಟಗಳು ಬೆಲೆ ಏರಿಕೆಗೆ ಮನವಿ ಮಾಡಿವೆ. ಒಂದು ವೇಳೆ ರಾಜ್ಯ ಸರ್ಕಾರ ಇದ್ಕಕೆ ಅಸ್ತು ಎಂದರೆ ಏಕಕಾಲಕ್ಕೆ ಜನತೆಗೆ ಬೆಲೆ ಏರಿಕೆಯ ಹೊಡೆತ ಬೀಳಲಿದೆ.
ಬೆಲೆ ಪರಿಷ್ಕರಣಗೆ ಮನವಿ :
ಸಾರಿಗೆ ನಿಗಮಗಳು ಪ್ರಯಾಣದರ ಪರಿಷ್ಕರಣೆ ಮಾಡಲು ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಪ್ರಸ್ತಾವನೆ ಕುರಿತು ಸರ್ಕಾರ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಈ ನಡುವೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್ಟಿಸಿ), ಮತ್ತು ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಎನ್ಡಬ್ಲ್ಯುಕೆಆರ್ಟಿಸಿ) ಅಧಿಕಾರಿಗಳು ದರ ಪರಿಷ್ಕರಣೆ ಅಗತ್ಯವನ್ನು ಒತ್ತಿ ಹೇಳಿದರು. ಇದರಿಂದ ನಿಗಮಗಳಿಂದ ಉಂಟಾದ ನಷ್ಟವನ್ನು ಸಮತೋಲನಗೊಳಿಸಲು ಮೊದಲನೇಯ ಆದ್ಯತೆಯಾಗಿದೆ ಎಂದಿದ್ದಾರೆ.
ಬಾಕಿ ಇರುವ ವೇತನವನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಇಂದಿನಿಂದದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಕೆಎಸ್ಆರ್ಟಿಸಿ ಯೂನಿಯನ್ಗಳ ಸದಸ್ಯರು ಬೆದರಿಕೆ ಹಾಕಿದ್ದರು. 2014 ರಲ್ಲಿ ಬಿಎಂಟಿಸಿ ದರ ಪರಿಷ್ಕರಿಸಲಾಯಿತು. 2020ರಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್ಟಿಸಿ), ಮತ್ತು ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಎನ್ಡಬ್ಲ್ಯುಕೆಆರ್ಟಿಸಿ)ಯ ದರಗಳನ್ನು ಪರಿಷ್ಕರಿಸಲಾಗಿತ್ತು. ಅಂದಿನಿಂದ ಸರ್ಕಾರವು ದರಗಳನ್ನು ಹೆಚ್ಚಿಸಿಲ್ಲ ಎಂದು ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇಂಧನ, ಬಿಡಿ ಭಾಗಗಳು ಮತ್ತು ಟೈರ್ಗಳ ಬೆಲೆಗಳು ಹೆಚ್ಚಾಗಿದ್ದು, ಹೆಚ್ಚಿನ ಆದಾಯವು ಉದ್ಯೋಗಿಗಳ ಸಂಬಳಕ್ಕೆ ಬಳಕೆಯಾಗುತ್ತದೆ. ಉತ್ಪಾದಿತ ಆದಾಯದ ಶೇ.45ಕ್ಕಿಂತ ಹೆಚ್ಚು ಡೀಸೆಲ್ಗೆ ಖರ್ಚು ಮಾಡಲಾಗಿದೆ. ಕೆಎಸ್ಆರ್ಟಿಸಿಯಲ್ಲಿ ಕಳೆದ ಬಾರಿ ಬಸ್ ದರ ಪರಿಷ್ಕರಣೆಯಾದಾಗ ಡೀಸೆಲ್ ದರ ಲೀಟರ್ಗೆ 61 ರೂ. ಇತ್ತು. ಆದರೆ ಡೀಸೆಲ್ ಬೆಲೆ ಈಗ ಲೀಟರ್ಗೆ 90 ರೂ. ಆಗಿದೆ.
ಆದರೆ ಪ್ರಯಾಣ ದರಗಳು ಹಾಗೆಯೇ ಉಳಿದಿವೆ. 2020ರಲ್ಲಿ ಬಸ್ ದರವನ್ನು ಪರಿಷ್ಕರಿಸಿದಾಗ, ಕೆಎಸ್ಆರ್ಟಿಸಿ ಇಂಧನಕ್ಕಾಗಿ ದಿನಕ್ಕೆ ಸುಮಾರು 3 ಕೋಟಿ ರೂ. ಖರ್ಚು ಮಾಡುತ್ತಿತ್ತು. ಆದರೆ, ಇಂಧನ ಬೆಲೆ ಏರಿಕೆಯಿಂದಾಗಿ ಈಗ ದಿನಕ್ಕೆ 5 ಕೋಟಿ ರೂ.ವ್ಯಯಿಸಲಾಗುತ್ತಿದೆ.. ನಾಲ್ಕು ಬಸ್ ನಿಗಮಗಳ ಉದ್ದೇಶ ಜನರ ಸೇವೆಯೇ ಆದರೂ ಹೆಚ್ಚುತ್ತಿರುವ ಕಾರ್ಯಾಚರಣೆಯ ವೆಚ್ಚದಿಂದಾಗಿ ಪ್ರಯಾಣ ದರ ಏರಿಕೆಗೆ ಒತ್ತಾಯಿಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಸರ್ಕಾರವು ಪ್ರಯಾಣ ದರ ಏರಿಕೆಗೆ ಸಕಾರಾತಕವಾಗಿ ಸ್ಪಂದಿಸಿದ್ದು, ನಿಗಮಗಳನ್ನು ಉಳಿಸಿಕೊಳ್ಳಲು ಈ ಬಾರಿ ಪರಿಷ್ಕರಣೆ ಮಾಡಲಾಗುವುದು. ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಬೆದರಿಕೆ ಹಾಕಿರುವ ಕೆಎಸ್ಆರ್ಟಿಸಿ ಯೂನಿಯನ್ಗಳು ಕೂಡ ಪ್ರಯಾಣ ದರವನ್ನು ಪರಿಷ್ಕರಿಸುವಂತೆ ಒತ್ತಾಯಿಸಿವೆ.
ಅಟೋ ದರ ಹೆಚ್ಚಿಸಲು ಮನವಿ :
ಕಳೆದ 2013 ರಲ್ಲಿ ಎರಡು ಬಾರಿ ಮತ್ತು 2021 ರಲ್ಲಿ ಕೊನೆಯದಾಗಿ ಮಾತ್ರ ಆಟೋ ದರಗಳನ್ನು ಹೆಚ್ಚಿಸಲಾಗಿದೆ. ಅಂದಿನಿಂದ ದರ ಹೆಚ್ಚಿಸಲು ಸರ್ಕಾರಕ್ಕೆ ಹಲವು ಮನವಿ ಸಲ್ಲಿದ್ದೇವೆ. ಆದರೆ ನಮ ಬೇಡಿಕೆ ಈಡೇರಿಸಿಲ್ಲ. ಇಂಧನ, ಬಿಡಿಭಾಗಗಳು ಮತ್ತು ಜೀವನ ನಿರ್ವಹಣಾ ವೆಚ್ಚ ನಿರಂತರವಾಗಿ ಏರಿಕೆಯಾಗಿರುವುದರಿಂದ ಆಟೋಗಳ ಕಾರ್ಯಾಚರಣೆ ವೆಚ್ಚವು ಗಗನಕ್ಕೇರಿದೆ. ಆದರೆ ಕಳೆದ ಮೂರು ವರ್ಷಗಳಿಂದ ದರಗಳು ಒಂದೇ ಆಗಿವೆ ಎಂಬುದು ಆಟೋ ರಿಕ್ಷಾ ಚಾಲಕರ ಒಕ್ಕೂಟದ ಅಳಲಾಗಿದೆ.
ಕೆಲವು ವರ್ಷಗಳ ಹಿಂದಷ್ಟೇ ಆ್ಯಪ್ ಪರಿಚಯಿಸಲಾಯಿತು. ಅದಕ್ಕೂ ಹಿಂದೆ ಜನರು ಮೀಟರ್ನಷ್ಟು ಹಣ ಪಾವತಿಸಿ ಆಟೋದಲ್ಲಿ ಪ್ರಯಾಣಿಸುತ್ತಿದ್ದರು. ಈಗ ಚಾಲಕರು ಮೀಟರ್ ಪಾಲಿಸಲ್ಲ ಎಂದು ಜನರು ಆಪ್ ಚಾಲಿತ ಆಟೋಗಳಿಗೆ ಮೊರೆ ಹೋಗುತ್ತಾರೆ. ಚಾಲಕರು ಆಪ್ ಮೇಲೆ ಆಧಾರಿತವಾಗಿರುವಾಗ ಜನರು ಆಟೋ ಬಳಸದೆ ಬುಕ್ಕಿಂಗ್ ರದ್ದು ಮಾಡಿದಾಗ ಸಹಜವಾಗಿ ಚಾಲಕರು ಆಕೋಶಗೊಳ್ಳುತ್ತಾರೆ ಎಂಬುದು ಬಹುತೇಕರ ಅಭಿಪ್ರಾಯವಾಗಿದೆ.