Friday, January 23, 2026
Homeರಾಜ್ಯಬಿ.ಕೆ.ಹರಿಪ್ರಸಾದ್‌ ಅವರ ಅಂಗಿ ಹರಿದಿದ್ದು ಯಾರು..?

ಬಿ.ಕೆ.ಹರಿಪ್ರಸಾದ್‌ ಅವರ ಅಂಗಿ ಹರಿದಿದ್ದು ಯಾರು..?

Who tore B.K. Hariprasad's shirt?

ಬೆಂಗಳೂರು,ಜ.23- ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅವರ ಭಾಷಣ ಮತ್ತು ಆನಂತರ ನಡೆದ ಬೆಳವಣಿಗೆಗಳ ಬಗ್ಗೆ ವಿಧಾನಸಭೆಯಲ್ಲಿಂದು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ರಚನಾತಕ ಚರ್ಚೆ ನಡೆಯಿತು. ಕಲಾಪ ಆರಂಭದಲ್ಲಿ ವಿಧಾನಸಭೆಯ ಕಾರ್ಯದರ್ಶಿಯವರು ವರದಿ ಮಂಡಿಸಿದರು. ಬಳಿಕ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌, ನಿನ್ನೆ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅವರು ಭಾಷಣ ಮಾಡಿ ತೆರಳುವ ವೇಳೆ ಆಡಳಿತ ಪಕ್ಷದ ಕೆಲ ಶಾಸಕರು ಅವರನ್ನು ಅಡ್ಡಗಟ್ಟಿ ಅಗೌರವ ತೋರಿಸಿದ್ದಾರೆ. ವಿಧಾನಪರಿಷತ್‌ನ ಸದಸ್ಯ ಬಿ.ಕೆ.ಹರಿಪ್ರಸಾದ್‌ ತಮ ಬಟ್ಟೆಯನ್ನು ಬಿಜೆಪಿಯವರು ಹರಿದು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಅವರ ಹೆಸರೇ ಹರಿ.. ಪ್ರಸಾದ್‌ ಹೀಗಾಗಿ ಅವರು ಹರಿದುಹೋಗಿದ್ದಾರೆ.

ಅವರ ಹಿಂದೆ ಮುಂದೆ ಇದ್ದವರು ಯಾರು? ಎಂಬುದನ್ನು ವಿಡಿಯೋದಲ್ಲಿ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಿ. ಮಾರ್ಷಲ್‌ಗಳನ್ನು ಹೊರತುಪಡಿಸಿದರೆ ಬಿಜೆಪಿಯ ಯಾವ ಸದಸ್ಯರು ಹರಿಪ್ರಸಾದ್‌ ಅವರ ಹಿಂದೆ ಇರಲಿಲ್ಲ ಎಂದರು. ರಾಜ್ಯಪಾಲರಿಗೆ ಅಗೌರವ ತೋರಿಸಲಾಗಿದೆ. ತಳ್ಳಾಟ, ನೂಕಾಟವಾಗಿದೆ. ಒಂದು ವೇಳೆ ಹಲ್ಲೆಯಾಗಿದ್ದರೆ ಅದಕ್ಕೆ ಹೊಣೆ ಯಾರು? ಎಂದು ಪ್ರಶ್ನಿಸಿದರು.

ರಾಜ್ಯಪಾಲರು ರಾಷ್ಟ್ರಗೀತೆಗೆ ಅಪಮಾನ ಮಾಡಿದ್ದಾರೆಂದು ದೂರಲಾಗುತ್ತಿದೆ. ರಾಷ್ಟ್ರಗೀತೆಯಾಡುವ ಸ್ವಿಚ್‌ನ ಬಟನ್‌ ರಾಜ್ಯಪಾಲರ ಕೈಯಲ್ಲಿ ಇರಲಿಲ್ಲ. ಭಾಷಣ ಮುಗಿಸಿ ರಾಜ್ಯಪಾಲರು ಜೈ ಹಿಂದ್‌ ಎಂದು ಹೇಳಿದಾಗಲೇ ರಾಷ್ಟ್ರಗೀತೆ ಆಡಬೇಕಿತ್ತು. ನಿನ್ನೆಯ ಪರಿಸ್ಥಿತಿಯಲ್ಲಿ ರಾಜ್ಯಪಾಲರನ್ನು ಅಬಲೆಯಂತೆ ಮಾಡಲಾಗಿದೆ. ಅವರು ಏಕಾಂಗಿಯಾಗಿ ಹೊರಹೋದರು. ಅವರ ಜೊತೆ ಯಾರು ಇರಲಿಲ್ಲ. ನಂತರದ ಕಲಾಪದಲ್ಲಿ ಕಾನೂನು ಸಚಿವರೇ ರಾಜ್ಯಪಾಲರು ಓಡಿಹೋಗಿದ್ದಾರೆಂದು ಹೇಳಿದ್ದಾರೆ. ಇದು ಸರಿಯಲ್ಲ ಎಂದರು.

ಸರ್ಕಾರಗಳು ಇರಬಹುದು. ಹೋಗಬಹುದು. ಆದರೆ ಸಂಪ್ರದಾಯಗಳು ಮತ್ತು ನಿಯಮಗಳ ಉಲ್ಲಂಘನೆಯಾಗಬಾರದು. ಈ ಹಿಂದೆ ಬಿಜೆಪಿಯ 18 ಶಾಸಕರನ್ನು ಅಮಾನತುಗೊಳಿಸಿದಂತೆ ನಿನ್ನೆ ರಾಜ್ಯಪಾಲರಿಗೆ ಅಗೌರವ ತೋರಿದ ಆಡಳಿತ ಪಕ್ಷದ ಸದಸ್ಯರ ವಿರುದ್ದವೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಬಾರದು ಎಂದು ನಿಯಮಗಳಲ್ಲಿ ಸ್ಪಷ್ಟವಾಗಿದೆ. ನಾವು ಕೆಲವರ ಹೆಸರನ್ನು ಉಲ್ಲೇಖಿಸಿದ್ದೇವೆ. ವಿಡಿಯೋ ಪರಿಶೀಲಿಸಿ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು.

ಬಿಜೆಪಿಯ ಅಶ್ವತ್ಥನಾರಾಯಣ ಮಾತನಾಡಿ, ಸಭಾಧ್ಯಕ್ಷರು ಸದನದ ಗೌರವವನ್ನು ಎತ್ತಿಹಿಡಿಯಬೇಕು. ಕಾರ್ಯಕಲಾಪಗಳ ನಿಯಮಾವಳಿ 27ರ ಅನುಸಾರ ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿದವರ ವಿರುದ್ಧ ಮುಂದಿನ ಸದನ ಸಮಾವೇಶದಲ್ಲಿ ಕ್ರಮ ಕೈಗೊಳ್ಳಬೇಕೆಂದು ಸ್ಪಷ್ಟ ಉಲ್ಲೇಖವಿದೆ. ಹೀಗಾಗಿ ರಾಜ್ಯಪಾಲರಿಗೆ ಅಡಚಣೆ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಜೊತೆಗೆ ಗಲಾಟೆಯ ಪ್ರಕರಣವನ್ನು ಖಂಡಿಸುವ ನಿರ್ಣಯ ಕೈಗೊಳ್ಳಬೇಕು. ರಾಜ್ಯಪಾಲರ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದರು.

ಬಿಜೆಪಿಯ ಸುನೀಲ್‌ಕುಮಾರ್‌ ಮಾತನಾಡಿ, ರಾಜ್ಯಪಾಲರಿಗೆ ಸಚಿವರು, ಶಾಸಕರು ಅಗೌರವ ತೋರಿಸಿರುವುದರ ಬಗ್ಗೆ ವಿರೋಧ ಪಕ್ಷದ ನಾಯಕರು ತಕ್ಷಣವೇ ಸಭಾಧ್ಯಕ್ಷರ ಗಮನಕ್ಕೆ ತಂದಿದ್ದಾರೆ. ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದರು.

ಸಭಾಧ್ಯಕ್ಷರು ಮೊದಲ ಅವಧಿಯ ಕಲಾಪದಲ್ಲೇ 9 ಸದಸ್ಯರನ್ನು ಅಮಾನತುಗೊಳಿಸಿದರು. ಮತ್ತೊಂದು ಪ್ರಕರಣದಲ್ಲಿ ವಿರೋಧ ಪಕ್ಷದ 18 ಶಾಸಕರನ್ನು 6 ತಿಂಗಳ ಕಾಲ ಅಮಾನತ್ತುಗೊಳಿಸಿದ್ದರು. ಅನುಚಿತವಾಗಿ ವರ್ತನೆ ಮಾಡಿರುವ ಶಾಸಕರನ್ನು ಉಳಿಸಿಕೊಂಡು ಸದನ ನಡೆಸುವುದು ಸೂಕ್ತವಲ್ಲ. ರಾಜ್ಯ ಸರ್ಕಾರ ರಾಜ್ಯಪಾಲರು ಮತ್ತು ವಿಧಾನಸಭೆಯ ಅಧ್ಯಕ್ಷರು ತಾನು ಹೇಳಿದಂತೆ ಕೇಳಬೇಕು ಎಂಬ ಧೋರಣೆ ಅನುಸರಿಸುತ್ತಿದೆ. ಇದು ಸರಿಯಲ್ಲ. ಸದನದಲ್ಲೇ ರಾಜ್ಯಪಾಲರಿಗೆ ಗೌರವ ಇಲ್ಲ ಎಂದಾದರೆ ಹೇಗೆ? ಎಂದು ಪ್ರಶ್ನಿಸಿದರು.

ಆಡಳಿತ ಪಕ್ಷದ ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ರಾಜ್ಯಪಾಲರನ್ನು ಗೌರವಪೂರ್ವಕವಾಗಿ ಸ್ವಾಗತಿಸಲಾಗಿದೆ. ಭಾಷಣ ಮುಗಿಸಿ ಹೋಗುವಾಗ ರಾಷ್ಟ್ರಗೀತೆ ಗಾಯನವನ್ನು ನಿರೀಕ್ಷಿಸದೇ ಹೊರಗೆ ಹೋಗಬಾರದಿತ್ತು. ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಗೆ ಅಪಮಾನ ಮಾಡುವುದನ್ನು ಸಹಿಸಲಾಗುವುದಿಲ್ಲ. ರಾಜ್ಯಪಾಲರು ಹೊರಗೆ ಹೋಗುವಾಗ ಕೆಲವರು ಅಡ್ಡ ಹಾಕಿರಬಹುದು. ಅದೇನೂ ದೊಡ್ಡ ಅಪರಾಧವಲ್ಲ ಎಂದರು.

ಸಭಾಧ್ಯಕ್ಷ ಯು.ಟಿ.ಖಾದರ್‌ ಮಾತನಾಡಿ, ತಮ ಮುಂದೆ ಎರಡು ವಿಚಾರಗಳಿವೆ. ಆಡಳಿತ ಪಕ್ಷದ ಕಡೆಯಿಂದ ರಾಜ್ಯಪಾಲರು ರಾಷ್ಟ್ರಗೀತೆಗೆ ಅಪಮಾನ ಮಾಡಿದ್ದಾರೆಂಬ ಆಕ್ಷೇಪ ಸಲ್ಲಿಕೆಯಾಗಿದೆ. ವಿರೋಧ ಪಕ್ಷದವರು ರಾಜ್ಯಪಾಲರಿಗೆ ಅಗೌರವ ತೋರಲಾಗಿದೆ ಎಂದು ಲಿಖಿತ ದೂರು ನೀಡಿದ್ದಾರೆ. ನಾವಿಲ್ಲಿ ಉದ್ದೇಶಕ್ಕಾಗಿ ಚರ್ಚೆ ನಡೆಸಬೇಕೇ ಹೊರತು ವೈಯಕ್ತಿಕವಾಗಿ ಹಗೆತನಕ್ಕಾಗಿ ಜಗಳವಾಡಬಾರದು ಎಂದರು.

ಬಿಜೆಪಿಯ ಸುರೇಶ್‌ಕುಮಾರ್‌, ನಿನ್ನೆಯ ಘಟನೆಯಲ್ಲಿ ಎಚ್‌.ಸಿ. ಬಾಲಕೃಷ್ಣ ಮತ್ತು ಹರಿಪ್ರಸಾದ್‌ ಅವರ ತಲ್ಲಾಟದಲ್ಲಿ ರಾಜ್ಯಪಾಲರು ಕೆಳಗೆ ಬಿದ್ದಿದ್ದರೆ ಗತಿಯೇನು ಎಂದು ಪ್ರಶ್ನಿಸಿದರು. ಹಿರಿಯ ಶಾಸಕರಾದ ಸುರೇಶ್‌ಕುಮಾರ್‌ ಅಂಥವರು ಬಿದ್ದಿದ್ದರೆ, ಹಾಗಿದ್ದರೆ.. ಎಂಬ ಊಹಾತಕ ಚರ್ಚೆ ಮಾಡುವುದು ಸರಿಯಲ್ಲ ಎಂದು ಸಭಾಧ್ಯಕ್ಷರು ಹೇಳಿದರು.

RELATED ARTICLES

Latest News