Thursday, January 9, 2025
Homeರಾಷ್ಟ್ರೀಯ | Nationalಮಾನಸಿಕ ರೋಗಿಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಲು ರಾಷ್ಟ್ರಪತಿ ಮುರ್ಮು ಕರೆ

ಮಾನಸಿಕ ರೋಗಿಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಲು ರಾಷ್ಟ್ರಪತಿ ಮುರ್ಮು ಕರೆ

President Murmu calls for more care for mental patients

ಬೆಂಗಳೂರು,ಜ.3– ಮಾನಸಿಕ ಆರೋಗ್ಯ ಸಮಸ್ಯೆ ಉಳ್ಳವರನ್ನು ನಿರ್ಲಕ್ಷ್ಯ ಮಾಡದೆ ಅವರನ್ನು ಮುಖ್ಯ ವಾಹಿನಿಗೆ ತರಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕರೆ ನೀಡಿದರು.

ರಾಷ್ಟ್ರೀಯ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್ ) ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಮಾನಸಿಕ ಆರೋಗ್ಯ ಸಮಸ್ಯೆಗೆ ಒಳಗಾದವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.

ಹಿರಿಯ ನಾಗರಿಕರು ಸಾಕಷ್ಟು ಸಮಸ್ಯೆಗೆ ಒಳಗಾಗುತ್ತಾರೆ. ಒತ್ತಡ ಹಾಗೂ ಖಿನ್ನತೆ ಅವರನ್ನು ಬಾಧಿಸುತ್ತದೆ. ಅಂಥವರ ಬಗ್ಗೆಯೂ ಹೆಚ್ಚಿನ ಮುತುವರ್ಜಿ ವಹಿಸಬೇಕಾಗುತ್ತದೆ ಎಂದರು.
ಮಾನಸಿಕ ಸಮಸ್ಯೆಗಳಿಂದ ಬಳಲುವವರ ನೆರವಿಗಾಗಿ ಟೆಲಿ ಮಾನಸ್ ಎಂಬ ಸಹಾಯವಾಣಿ ಆರಂಭಿಸಲಾಗಿದೆ. ದೇಶಾದ್ಯಂತ 53 ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದೆ. ಟೆಲಿ ಕೌನ್ಸಿಲಿಂಗ್ ಮೂಲಕವೇ ನೆರವು ನೀಡಲಾಗುತ್ತದೆ. ಇದರ ಪ್ರಯೋಜನವನ್ನು ಮಾನಸಿಕ ಸಮಸ್ಯೆ ಇದ್ದವರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಆಧುನಿಕ ಜೀವನ ಶೈಲಿಯಿಂದಾಗಿ ಒತ್ತಡ ಹೆಚ್ಚಾಗುತ್ತಿದೆ. ಇದರ ನಿವಾರಣೆಗೆ ಆದ್ಯತೆ ನೀಡಬೇಕು. ಚಿಕಿತ್ಸೆಯೊಂದೇ ಪರಿಹಾರವಲ್ಲ. ಯೋಗ, ಧ್ಯಾನ ಮಾಡುವ ಮೂಲಕ ಆರೋಗ್ಯವಂತರಾಗಿರಬೇಕು ಎಂದು ಅವರು ತಿಳಿಸಿದರು.

ಆರೋಗ್ಯಕರ ಜೀವನ, ಮನಸ್ಸು ಇದ್ದಾಗ ಒಳ್ಳೆಯ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದ ಅವರು, ದೇಶದ 200 ಆಸ್ಪತ್ರೆಗಳಲ್ಲಿ ನಿಮ್ಹಾನ್ಸ್ ಕೂಡ ಒಂದಾಗಿದ್ದು, ಶಿಕ್ಷಣ, ಮಾನಸಿಕ ಆರೋಗ್ಯ ಸೇವೆಯ ಮೂಲಕ ಅಗ್ರಸ್ಥಾನದಲ್ಲಿ ಇದೆ. ಇದು ಜಾಗತಿಕ ಮಟ್ಟದಲ್ಲೂ ಗುರುತಿಸುವಂತೆ ಮುನ್ನಡೆಯಬೇಕೆಂದು ಸಲಹೆ ಮಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜಗತ್ಪ್ರಕಾಶ್ ನಡ್ಡಾ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಸಂಸದರಾದ ತೇಜಸ್ವಿ ಸೂರ್ಯ, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಪಿ.ಸಿ.ಮೋಹನ್, ಡಾ.ಸಿ.ಎನ್.ಮಂಜುನಾಥ್, ನಿಮ್ಹಾನ್ಸ್ ನಿರ್ದೇಶಕರಿ ಡಾ.ಪ್ರತಿಮಾ ಮೂರ್ತಿ ಮೊದಲಾದ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

RELATED ARTICLES

Latest News