Tuesday, January 7, 2025
Homeರಾಜ್ಯಬಿಜೆಪಿ ಬಣ ಬಡಿದಾಟ ಶಮನಕ್ಕೆ ರಾಷ್ಟ್ರೀಯ ಅಧ್ಯಕ್ಷರಿಗೆ ಬಿವೈವಿ ಮನವಿ

ಬಿಜೆಪಿ ಬಣ ಬಡಿದಾಟ ಶಮನಕ್ಕೆ ರಾಷ್ಟ್ರೀಯ ಅಧ್ಯಕ್ಷರಿಗೆ ಬಿವೈವಿ ಮನವಿ

BYV appeals to national president to calm BJP factional clashes

ಬೆಂಗಳೂರು,ಜ.3– ರಾಜ್ಯದಲ್ಲಿ ಪಕ್ಷದ ಸಂಘಟನೆಗೆ ಪ್ರತ್ಯೇಕ ಬಣ ಸೃಷ್ಟಿಸಿಕೊಂಡು ಪ್ರವಾಸ ಮಾಡುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಅವರ ತಂಡದ ಅಟಾಟೋಪಗಳಿಗೆ ತಕ್ಷಣವೇ ಕಡಿವಾಣ ಹಾಕುವಂತೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ರಾಷ್ಟ್ರೀಯ ಅಧ್ಯಕ್ಷರಿಗೆ ಮನವಿ ಮಾಡಿದ್ದಾರೆ.

ಸರ್ಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿರುವ ಕೇಂದ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ಜೆ.ಪಿ.ನಡ್ಡಾ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿರುವ ವಿಜಯೇಂದ್ರ, ಬಸನಗೌಡ ಪಾಟೀಲ್ ಯತ್ನಾಳ್ ಅವರ ನಡೆ ಬಗ್ಗೆ ವಿವರವಾದ ದೂರು ನೀಡಿದ್ದಾರೆ.

ವಿಶೇಷವೆಂದರೆ ಮೂರು ದಿನಗಳ ಹಿಂದಷ್ಟೇ ಕೇಂದ್ರ ಗೃಹಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿದ ಬೆನ್ನಲ್ಲೆ ವಿಜಯೇಂದ್ರ ನಡ್ಡಾ ಅವರ ಜೊತೆ ಕರ್ನಾಟಕದ ಪ್ರಸಕ್ತ ಬೆಳವಣಿಗೆಗಳ ಕುರಿತಂತೆ ಮಾತುಕತೆ ನಡೆಸಿದರು. ಮಾತುಕತೆ ಸಂದರ್ಭದಲ್ಲಿ ಕರ್ನಾಟಕದ ಪಕ್ಷ ಸಂಘಟನೆ ಕುರಿತು ಮಾಹಿತಿ ಪಡೆದ ನಡ್ಡಾ ಅವರು ನಿರೀಕ್ಷೆಗೆ ತಕ್ಕಂತೆ ಸಂಘಟನೆ ಮತ್ತು ಸದಸ್ಯತ್ವ ಅಭಿಯಾನವನ್ನು ಪರಿಣಾಮಕಾರಿಯಾಗಿ ನಡೆಸಿ ಸರ್ಕಾರದ ವಿರುದ್ಧ ಹೋರಾಟ ನಡೆಸಬೇಕೆಂದು ಸೂಚನೆ ಕೊಟ್ಟಿದ್ದಾರೆ.

ಈ ವೇಳೆ ಬಸನಗೌಡ ಪಾಟೀಲ್ ಯತ್ನಾಳ್, ಶಾಸಕರಾದ ರಮೇಶ್ ಜಾರಕಿಹೊಳಿ, ಬಿ.ಪಿ.ಹರೀಶ್, ಮಾಜಿ ಸಚಿವರಾದ ಕುಮಾರ್ ಬಂಗಾರಪ್ಪ, ಅರವಿಂದ ಲಿಂಬಾವಳಿ, ಮಾಜಿ ಸಂಸದರಾದ ಜಿ.ಎಂ.ಸಿದ್ದೇಶ್ವರ, ಅಣ್ಣಾ ಸಾಹೇಬ್ ಜೊಲ್ಲೆ ಮತ್ತಿತರರ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ದೂರು ಸಲ್ಲಿಸಿದ್ದಾರೆ.

ವಕ್‌್ಫ ವಿರುದ್ಧ ನಾವೆಲ್ಲರೂ ಹೋರಾಟ ನಡೆಸಬೇಕೆಂದು ಕರೆ ಕೊಟ್ಟಾಗ ಯತ್ನಾಳ್ ಹಾಗೂ ಅವರ ತಂಡ ಪ್ರತ್ಯೇಕವಾಗಿ ಹೋರಾಟ ನಡೆಸಿ ಪಕ್ಷಕ್ಕೆ ಮುಜುಗರ ಸೃಷ್ಟಿ ಮಾಡಿದರು. ಅವರ ನಡವಳಿಕೆಗಳು ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದಲ್ಲದೆ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಪಕ್ಷದ ಚಿಹ್ನೆ ಇಲ್ಲದೆ ಸರ್ಕಾರದ ವಿರುದ್ದ ಹೋರಾಟ ಮಾಡುವುದು ಸರಿಯಾದ ಕ್ರಮವಲ್ಲ ಎಂದು ಮುಖಂಡರು ಹೇಳಿದರೂ ಯತ್ನಾಳ್, ಯಾರ ಮಾತನ್ನೂ ಕೇಳದೆ ಒಂದಿಷ್ಟು ಮಂದಿಯನ್ನು ಕಟ್ಟಿಕೊಂಡು ಹೋರಾಟ ಮಾಡಿದರು.

ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸುವ ಬದಲು ವಿರೋಧ ಪಕ್ಷಗಳಿಗೆ ನಾವೇ ಆಹಾರವಾದೆವು. ಸಾಧ್ಯವಾದರೆ ಅವರೆಲ್ಲರನ್ನೂ ದೆಹಲಿಗೆ ಕರೆಸಿ ಮಾತನಾಡಿ, ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಳ್ಳಬೇಕು. ಕೆಲವರ ಅತಿಯಾದ ವರ್ತನೆಯಿಂದ ನಾವು ಸಾಕಷ್ಟು ಮುಜುಗರವನ್ನು ಅನುಭವಿಸುತ್ತಿದ್ದೇವೆ.

ಪ್ರತಿ ಸಂದರ್ಭದಲ್ಲೂ ಕೇವಲ ನಮ ತಂದೆ ಬಿ.ಎಸ್.ಯಡಿಯೂರಪ್ಪ ಮತ್ತು ನಮ ಕುಟುಂಬವನ್ನು ಗುರಿಯಾಗಿಟ್ಟುಕೊಂಡು ವಾಗ್ದಾಳಿ ನಡೆಸುತ್ತಿದ್ದಾರೆ. ಇವರ ಹಿಂದೆ ಯಾವ ಶಕ್ತಿ ಇದೆಯೋ ಗೊತ್ತಿಲ್ಲ. ಪಕ್ಷದ ಹಿತದೃಷ್ಟಿಯಿಂದ ಅವರನ್ನು ಸರಿ ದಾರಿಗೆ ತರುವ ಕೆಲಸವಾಗಬೇಕಿದೆ ಎಂದು ವಿಜಯೇಂದ್ರ ನಡ್ಡಾ ಅವರಿಗೆ ಮನವರಿಕೆ ಮಾಡಿದ್ದಾರೆ.

ಇದಕ್ಕೂ ಮುನ್ನ ಬೆಂಗಳೂರಿಗೆ ಆಗಮಿಸಿದ ಜೆ.ಪಿ.ನಡ್ಡಾ ಅವರನ್ನು ಆತೀಯವಾಗಿ ಬರಮಾಡಿಕೊಂಡ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್, ವಿಧಾನಪರಿಷತ್ನ ಪ್ರತಿಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ, ವಿಜಯೇಂದ್ರ ಮತ್ತಿತರರು ಪ್ರಸ್ತುತ ಕರ್ನಾಟಕ ಪಕ್ಷದ ಸ್ಥಿತಿಗತಿ, ಗುತ್ತಿಗೆದಾರ ಸಚಿನ್ ಪಾಂಚಾಳ್ ಆತಹತ್ಯೆ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಸಚಿವ ಪ್ರಿಯಾಂಕ್ ಖರ್ಗೆ ಪ್ರಕರಣದ ಬಗ್ಗೆಯೂ ಮಾಹಿತಿ ನೀಡಿದ್ದಾರೆ.

ಈ ಪ್ರಕರಣವನ್ನು ತಾರ್ಕಿಕ ಅಂತ್ಯದವರೆಗೆ ಕೊಂಡೊಯ್ಯುವವರೆಗೂ ಹೋರಾಟ ನಿಲ್ಲಿಸಬಾರದು. ಸರ್ಕಾರದ ಭ್ರಷ್ಟಾಚಾರ ಮತ್ತು ಜನವಿರೋಧಿ ನೀತಿಯ ವಿರುದ್ಧ ಆಕ್ರಮಣಕಾರಿಯಾಗಿ ಹೋರಾಟ ನಡೆಸಬೇಕೆಂದು ನಡ್ಡಾ ರಾಜ್ಯ ನಾಯಕರಿಗೆ ಸೂಚಿಸಿದ್ದಾರೆಂದು ಮೂಲಗಳು ತಿಳಿಸಿವೆ.

ಯಾವ ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಅಲ್ಲದೆ ಭಿನ್ನಮತೀಯ ಚಟುವಟಿಕೆಗಳಿಗೂ ಬ್ರೇಕ್ ಹಾಕುವಂತೆ ಮನವಿ ಮಾಡಿದ್ದಾರೆ.

ಈ ವೇಳೆ ಕೆಲವೊಂದು ಸಲಹೆಗಳನ್ನು ಅವರು ನೀಡಿದ್ದು, ರಾಜ್ಯದಲ್ಲಿ ಪಕ್ಷವನ್ನು ಯಾವ ರೀತಿಯಲ್ಲಿ ಮುನ್ನೆಡಿಸಿಕೊಂಡು ಹೋಗಬೇಕು ಹಾಗೂ ಭಿನ್ನಮತೀಯ ಚಟುವಟಿಕೆಗಳನ್ನು ಮೀರಿ ಹೇಗೆ ನಡೆದುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಸೂಚನೆಗಳನ್ನು ನೀಡುವ ಕೊಟ್ಟಿದ್ದಾರೆ.

RELATED ARTICLES

Latest News