Wednesday, January 8, 2025
Homeಇದೀಗ ಬಂದ ಸುದ್ದಿಮತ್ತೊಂದು 'ಗ್ಯಾರಂಟಿ' : ರಾಜ್ಯದ ಜನತೆಗೆ ಶೀಘ್ರದಲ್ಲೇ ಹಾಲಿನ 'ಬೆಲೆ ಏರಿಕೆ ಭಾಗ್ಯ'

ಮತ್ತೊಂದು ‘ಗ್ಯಾರಂಟಿ’ : ರಾಜ್ಯದ ಜನತೆಗೆ ಶೀಘ್ರದಲ್ಲೇ ಹಾಲಿನ ‘ಬೆಲೆ ಏರಿಕೆ ಭಾಗ್ಯ’

ಬೆಂಗಳೂರು,ಜ.4- ಬಸ್‌‍ ಟಿಕೆಟ್‌ ದರ ಪರಿಷ್ಕರಣೆ ಮಾಡಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿರುವ ರಾಜ್ಯ ಸರ್ಕಾರ, ತಿಂಗಳಾತ್ಯಕ್ಕೆ ನೀರಿನ ದರವನ್ನೂ ಹೆಚ್ಚಿಸಲು ಮುಂದಾಗಿರುವ ಬೆನ್ನಲ್ಲೇ ಇದೀಗ ಹಾಲಿನ ದರವನ್ನು ಶೀಘ್ರದಲ್ಲೇ ಹೆಚ್ಚಳ ಮಾಡುವ ಮೂಲಕ ಜನತೆಗೆ ಮತ್ತೊಂದು ಬೆಲೆ ಏರಿಕೆಯ ಭಾಗ್ಯ ನೀಡಲು ಮುಂದಾಗಿದೆ.

ರಾಜ್ಯ ಸಹಕಾರಿ ಹಾಲು ಉತ್ಪಾದಕರ ಮಂಡಳಿಯು (ಕೆಎಂಎಫ್‌) ಪ್ರತಿ ಲೀಟರ್‌ ಹಾಲಿನ ದರ ಏರಿಕೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದೆ. ಸರ್ಕಾರ ಇದಕ್ಕೆ ಅನುಮೋದನೆ ನೀಡಿದರೆ ಹೊಸವರ್ಷಕ್ಕೆ ಗ್ರಾಹಕರಿಗೆ ಬೆಲೆ ಏರಿಕೆ ಬರೆ ಬೀಳಲಿದೆ.

ಹಾಲಿನ ದರ ಪರಿಷ್ಕರಣೆಯಿಂದ ಜನರಿಗೆ ಮತ್ತೆ ಆರ್ಥಿಕ ಹೊರೆಯಾಗಲಿದೆ. ಈ ಸಂಬಂಧ ಸರ್ಕಾರ ಇನ್ನೂ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಈ ಹಿಂದೆಯು ಹಾಲಿನ ಬೆಲೆ ಪರಿಷ್ಕರಣೆ ಮಾಡಲಾಗಿತ್ತು. ಆಗ 50 ಎಂಎಲ್‌ ಹೆಚ್ಚುವರಿ ಹಾಲು ಒದಗಿಸಲಾಗುತ್ತದೆ ಎಂದು ರಾಜ್ಯ ಸರ್ಕಾರ ಸಬೂಬು ನೀಡಿತ್ತು. ಆಗಲೂ ಸಹ ಸಾರ್ವಜನಿಕರು ದರ ಏರಿಕೆ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ಈ ಮಧ್ಯೆ ಹೈನುಗಾರರಿಗೆ ರಾಜ್ಯ ಸರ್ಕಾರ ನೀಡುವ ಪ್ರೋತ್ಸಾಹ ಧನವು ಸಿಗದೇ ಅವರ ಜೀವನ ಸಂಕಷ್ಟದಲ್ಲಿ ಕಳೆಯುವಂತಾಗಿದೆ.

ಹಾಲಿನ ದರ ಏರಿಕೆ ಪ್ರಸ್ತಾಪ ಇರುವುದು ಸತ್ಯ ಎಂದು ಸಚಿವರು ಒಪ್ಪಿಕೊಂಡಿದ್ದು, ಸಿಎಂ ಸಿದ್ದರಾಮಯ್ಯ ಗ್ರೀನ್‌ ಸಿಗ್ನಲ್‌ ಕೊಟ್ಟರೆ ಶೀಘ್ರವೇ ಹಾಲಿನ ದರ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ.

ಹಾಲಿನ ದರ ಹೆಚ್ಚಳ ಮಾಡಬೇಕು ಎಂದು ರೈತರ ಒತ್ತಾಯ ಇದೆ. ಏಕೆಂದರೆ ರೈತರು ಜಾನುವಾರುಗಳಿಗೆ ನೀಡುತ್ತಿರುವ ಆಹಾರ ಪದಾರ್ಥಗಳ ಬೆಲೆ ಏರಿಕೆ ಆಗಿದೆ. ಈ ಹಿನ್ನೆಲೆಯಲ್ಲಿ ಹಾಲಿನ ದರ 10 ರೂ. ಏರಿಕೆ ಮಾಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ನಾವಿನ್ನೂ ಚರ್ಚೆ ಮಾಡುತ್ತಿದ್ದೇವೆ. ಚರ್ಚೆ ಬಳಿಕ ಅಂತಿಮ ತೀರ್ಮಾನ ಮಾಡುತ್ತೇವೆ.

ರೈತರು ಹಾಲಿನ ಮೇಲೆ ಅವಲಂಬಿತರಾಗಿದ್ದಾರೆ. ದಿನೇ ದಿನೇ ಹಾಲಿನ ಉತ್ಪಾದನೆ ವೆಚ್ಚ ಹೆಚ್ಚಳ ಆಗುತ್ತಿದೆ. ರೈತರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು. 5 ರೂ, 3 ರೂ, 10 ರೂ. ಮಾಡುತ್ತೇವೋ ಅದು ಇನ್ನೂ ತೀರ್ಮಾನ ಆಗಿಲ್ಲ ಎನ್ನುವ ಮೂಲಕ ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್‌ ದರ ಹೆಚ್ಚಳದ ಸುಳಿವು ನೀಡಿದ್ದಾರೆ.

ಹಾಲಿನ ದರ ಏರಿಕೆಗೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ನಾವಿನ್ನೂ ಚರ್ಚೆ ಮಾಡುತ್ತಿದ್ದೇವೆ. ಚರ್ಚೆ ಬಳಿಕ ಅಂತಿಮ ತೀರ್ಮಾನ ಮಾಡುತ್ತೇವೆ. ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಿದ್ದರಾಮಯ್ಯ ಅವರೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ನಿರ್ಧಾರ ಯಾವಾಗ ತೆಗೆದುಕೊಳ್ಳಲಾಗುತ್ತದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ನೀಡದಿರುವ ಅವರು, ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಏಕೆಂದರೆ ಬಜೆಟ್‌ಗೂ ಮುನ್ನ ರಾಜ್ಯ ಸರ್ಕಾರವು ತನ್ನ ಆದಾಯದ ಬಗ್ಗೆ ಸ್ಪಷ್ಟತೆ ಹೊಂದಿರಬೇಕಿದೆ ಎಂಬ ಮಾಹಿತಿಯನ್ನಷ್ಟೇ ನೀಡಿದ್ದಾರೆ.

ಇತ್ತೀಚೆಗೆ, ರಾಮನಗರ ಜಿಲ್ಲೆಯ ಮಾಗಡಿಯ ಕೆಲವು ಹೈನುಗಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಹಾಲಿನ ಬೆಲೆಯನ್ನು ಲೀಟರ್‌ಗೆ 5 ರೂ. ಹೆಚ್ಚಿಸಬೇಕೆಂದು ಒತ್ತಾಯಿಸಿದ್ದರು.

ಹಾಲಿನ ಬೆಲೆಯನ್ನು ಆಗಸ್ಟ್‌ 2023 ರಲ್ಲಿ 3 ರೂ. ಹೆಚ್ಚಿಸಲಾಗಿತ್ತು. ನಂತರ ಲೀಟರ್‌ಗೆ 39 ರೂ.ನಿಂದ 42 ರೂ.ಗೆ ಹೆಚ್ಚಿಸಲಾಯಿತು. ಜೂನ್‌ 2024ರಲ್ಲಿ, ಮತ್ತೆ 2 ರೂ. ಹೆಚ್ಚಿಸಲಾಯಿತು, ಬಳಿಕ ಹೆಚ್ಚುವರಿಯಾಗಿ 50 ಎಂಎಲ್‌ ಹಾಲು ನೀಡಲಾಯಿತು. ಈ ಹಿಂದೆ ಪ್ರತಿ ಲೀಟರ್‌ನಲ್ಲಿ ಹೆಚ್ಚುವರಿಯಾಗಿ 50 ಎಂಎಲ್‌ ನೀಡಿ 2 ರೂ. ಏರಿಕೆ ಮಾಡಿತ್ತು. ಇದರಿಂದ ಅರ್ಧ ಲೀಟರ್‌ ಹಾಲಿನ ಪ್ಯಾಕೆಟ್‌ ದರ 22ರಿಂದ 24 ರೂ.ಗೆ ಏರಿಕೆಯಾಗಿತ್ತು. ಒಂದು ಲೀಟರ್‌ ಹಾಲಿನ ದರ ಏರಿಕೆ 42ರಿಂದ 44 ರೂ.ಗೆ ಏರಿಕೆಯಾಗಿತ್ತು. ಮೊಸರು, ಇನ್ನಿತರ ಯಾವುದೇ ಹಾಲಿನ ಉತ್ಪನ್ನದ ದರ ಏರಿಕೆ ಮಾಡಿರಲಿಲ್ಲ.

ಖರೀದಿ ದರ ಇಳಿಕೆ ಮಾಡಿದ್ದ ಕಾಂಗ್ರೆಸ್‌‍ ಸರ್ಕಾರ:
ಕಾಂಗ್ರೆಸ್‌‍ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎರಡು ಬಾರಿ ಹಾಲಿನ ದರ ಏರಿಕೆ ಮಾಡಿ, ಎರಡು ಬಾರಿ ರೈತರಿಂದ ಹಾಲಿನ ಖರೀದಿ ದರವನ್ನು ಇಳಿಕೆ ಮಾಡಿತ್ತು. ಹಾಲಿನ ಖರೀದಿ ದರ ಇಳಿಕೆ ಮಾಡುವ ಮೊದಲು ರೈತರಿಗೆ ಲೀಟರ್‌ ಹಾಲಿಗೆ 34 ರೂ. ಸಿಗುತ್ತಿತ್ತು. ಆದರೆ ಹಾಲು ಖರೀದಿ ದರ ಎರಡು ಬಾರಿ ಇಳಿಕೆ ಮಾಡಿದ ನಂತರ ಈಗ ಲೀಟರ್‌ ಹಾಲಿಗೆ ರೈತರಿಗೆ ಸಿಗುತ್ತಿರುವುದು ಕೇವಲ 30 ರೂ. 15 ಪೈಸೆ ಮಾತ್ರ.

ಆದರೆ ಹಾಲು ದರ ಏರಿಕೆ ಮಾಡಿ ಸರ್ಕಾರ ಗ್ರಾಹಕರಿಗೆ ಮಾರಾಟ ಮಾಡುತ್ತಿರುವುದು ಮಾತ್ರ 60 ರೂ.ಗೆ. ಈಗ ಹಾಲಿನ ದರ 5 ರೂ. ಏರಿಕೆ ಮಾಡಿ ಏರಿಕೆ ಮಾಡಿದ ದರವನ್ನು ನೇರವಾಗಿ ರೈತರಿಗೆ ಕೊಟ್ಟರೂ ರೈತರಿಗೆ ಲೀಟರ್‌ ಹಾಲಿಗೆ ಸಿಗುವುದು ಕೇವಲ 35 ರೂ. ಆದರೆ, ಗ್ರಾಹಕರಿಗೆ ಮಾರಾಟ ಮಾಡುವುದು 65 ರೂ.ಗೆ. ಹಾಗಾಗಿ ಸರ್ಕಾರ ಒಂದು ಲೀಟರ್‌ ಹಾಲಿನ ಮೇಲೆ 30 ರೂ. ಲಾಭ ಪಡೆಯುತ್ತಿದೆ ಎಂಬುದು ಹಾಲು ಉತ್ಪಾದಕರ ಮಾತಾಗಿತ್ತು.

ಹಾಲು ಒಕ್ಕೂಟಗಳು ಹಾಗೂ ಉತ್ಪಾದಕರು ಪ್ರತಿ ಲೀಟರ್‌ ಹಾಲಿನ ದರವನ್ನು 5 ರೂ. ಹೆಚ್ಚಳ ಮಾಡುವಂತೆ ಕೆಎಂಎಫ್‌ಗೆ ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ. ಈ ಹಿಂದೆ ಕೆಎಂಎಫ್‌ ಪ್ರತಿ ಲೀಟರ್‌ ಹಾಲಿನ ಪ್ಯಾಕೆಟ್‌ಗೆ ಹೆಚ್ಚುವರಿಯಾಗಿ 50 ಮಿಲಿ ಲೀಟರ್‌ ಸೇರಿಸಿ, ಲೀಟರ್‌ ಮೇಲೆ 2 ರೂ. ಏರಿಕೆ ಮಾಡಿತ್ತು. ಆಗ ಅರ್ಧ ಲೀಟರ್‌ ಹಾಲಿನ ಪ್ಯಾಕೆಟ್‌ ದರ 24 ರೂಪಾಯಿ ಆಗಿತ್ತು. ಒಂದು ಲೀಟರ್‌ ಹಾಲಿನ ದರ 44 ರೂ.ಗೆ ಏರಿತ್ತು.

ಕಳೆದ ಜೂನ್‌ ತಿಂಗಳಲ್ಲಿ ಹಾಲಿನ ದರ ಏರಿತ್ತು. ನಂದಿನಿ ಹಾಲಿನ ಪ್ಯಾಕೇಟ್ಗಳಲ್ಲಿ ಹಾಲಿನ ಪ್ರಮಾಣವನ್ನು 50 ಎಂ.ಎಲ್‌ ಹೆಚ್ಚಳ ಮಾಡಿ, ಹೆಚ್ಚುವರಿ ಹಾಲಿಗೆ 2 ರೂ. ದರ ನಿಗದಿಪಡಿಸಲಾಗಿದೇ ವಿನಃ ಹಾಲಿನ ಬೆಲೆಯಲ್ಲಿ ಏರಿಕೆ ಮಾಡಿಲ್ಲ. ಅರ್ಧ ಲೀಟರ್‌ ಹಾಲಿನ ಪ್ಯಾಕೆಟ್‌ನಲ್ಲಿ 550 ಎಂ.ಎಲ್‌ ಹಾಗೂ ಒಂದು ಲೀಟರ್‌ ಪ್ಯಾಕೆಟ್‌ನಲ್ಲಿ 1,050 ಎಂ.ಎಲ್‌ ಹಾಲು ಸಿಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದರು.

ರಾಜ್ಯದಲ್ಲಿ ಪ್ರತಿದಿನ 92 ರಿಂದ 93 ಲಕ್ಷ ಲೀಟರ್‌ ಹಾಲು ಉತ್ಪಾದನೆಯಾಗುತ್ತಿದ್ದು, ರೈತರಿಂದ ಲೀಟರ್‌ಗೆ 32 ರೂ.ಗಳಿಗೆ ಹಾಲು ಖರೀದಿಸಲಾಗುತ್ತಿದ್ದು, ರಾಜ್ಯ ಸರ್ಕಾರ ಕ್ಷೀರಧಾರೆ ಯೋಜನೆಯಡಿ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ 5 ರೂ.ಗಳ ಪ್ರೋತ್ಸಾಹ ಧನವನ್ನು ನೀಡುತ್ತಿದೆ. ನಾನು ಮುಖ್ಯಮಂತ್ರಿಯಾದ ನಂತರ ಇದನ್ನು 5 ರೂ.ಗಳಿಗೆ ಹೆಚ್ಚಿಸಿದೆ. ಪ್ರೋತ್ಸಾಹಧನಕ್ಕಾಗಿ ಪ್ರತಿ ದಿನ 5 ಕೋಟಿ ರೂಪಾಯಿಗಳನ್ನು ಸರ್ಕಾರ ವೆಚ್ಚ ಮಾಡುತ್ತಿದೆ ಎಂದು ಹೇಳಿದ್ದರು.

ಸದ್ಯ ಹಾಲಿನ ದರ ಎಷ್ಟಿದೆ?:
ನೀಲಿ ಪ್ಯಾಕೆಟ್‌ ಹಾಲು 44 ರೂ.
ಕೇಸರಿ ಪ್ಯಾಕೆಟ್‌ ಹಾಲು 48 ರೂ.
ಶುಭಂ ಪ್ಯಾಕೆಟ್‌ ಹಾಲು 50 ರೂ.
ಸಮೃದ್ಧಿ ಹಾಲಿನ ಪ್ಯಾಕೆಟ್‌ 53 ರೂ.

RELATED ARTICLES

Latest News