ಚಿಕ್ಕಮಗಳೂರು ಜ.24- ಚೀನಾ ದೇಶದ ವಧು ಹಾಗೂ ಕಾಫಿಸೀಮೆಯ ವರನನ್ನು ವರಿಸಿದ್ದಾರೆ. ಪರಸ್ಪರ ಇಷ್ಟಪಟ್ಟು ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಚೀನಾದ ವಧು ಜೇಡ್ ಮತ್ತು ಕಾಫಿಸೀಮೆಯ ವರ ರೂಪಕ್‌ರನ್ನು ವಿವಾಹವಾಗಿದ್ದಾರೆ.
ದೇಶ, ಮತ, ವರ್ಣ, ಭಾಷೆ ಬೇಧಗಳನ್ನು ಮರೆತು ಪ್ರೀತಿಗೆ ಮನಸೋತು ಜೀವನಪೂರ್ತಿ ಒಟ್ಟಾಗಿ ಬದುಕುವ ಸಂಕಲ್ಪ ಮಾಡಿದ ದಂಪತಿಗಳಿಗೆ ಶಾಸಕ ಎಚ್.ಡಿ.ತಮಯ್ಯ, ಎಐಟಿ ವಿವಿ ರಿಜಿಸ್ಟಾರ್ ಡಾ.ಸಿ.ಕೆ.ಸುಬ್ರಾಯ್, ಕೃಷಿ ಪಂಡಿತ ಚಂದ್ರೇಗೌಡ, ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಪ್ರಭುಲಿಂಗಶಾಸ್ತ್ರಿ ಸೇರಿದಂತೆ ನೂರಾರು ಮಂದಿ ಶುಭಹಾರೈಸಿದರು.
ಹಿರೇಗೌಜದ ಬಳಿ ಕಾಫಿ, ಅಡಿಕೆ, ತರಕಾರಿ ಕೃಷಿ ಮಾಡಿಕೊಂಡಿರುವ ಶ್ರೀನಿವಾಸ ಮತ್ತು ಕಸ್ತೂರಿ ದಂಪತಿಯ ಏಕಮಾತ್ರ ಪುತ್ರ ಕೆ.ಎಸ್.ರೂಪಕ್ ಸುಮಾರು ಏಳೆಂಟು ವರ್ಷದ ಹಿಂದೆ ಅಧ್ಯಯನಕ್ಕಾಗಿ ಆಸ್ಟ್ರೇಲಿಯಾಕ್ಕೆ ತೆರಳಿದ್ದು ಯುನಿರ್ವಸಿಟಿ ಆಫ್ ಕ್ವೀನ್ಸ ಲ್ಯಾಡ್‌ನಲ್ಲಿ ಎಂಬಿಎ ವ್ಯಾಸಂಗ ಮಾಡಿದವರು. ಚೀನಾ ದೇಶದ ಗಾಂಗ್‌ಜಾವ್ ಪಟ್ಟಣದ ಡಾ ಜಿನ್‌ಚಾಂಗ್ ಲಯಾವ್ ಮತ್ತು ಡಾ ಶಾಂಗ್‌ಕಿಯಾನ್ ವು ವೈದ್ಯದಂಪಯ ಪುತ್ರಿ ಜೇಡ್ ಸಹ ಆಸ್ಟ್ರೇಲಿಯಾದಲ್ಲಿ ಅಧ್ಯಯನಕ್ಕೆ ಬಂದಿದ್ದಳು. ಇಬ್ಬರಿಗೂ ಪರಿಚಯ-ಸ್ನೇಹ ಪ್ರೇಮವಾಗಿ ಪರಿವರ್ತನೆಗೊಂಡಿತು.
ಶಿಕ್ಷಣದ ನಂತರ ರೂಪಕ್ ಆಸ್ಟ್ರೇಲಿಯಾದ ಮೂರನೇ ಅತಿದೊಡ್ಡ ನಗರವಾದ ಬ್ರೆಸ್‌ಬೈನ್‌ನಲ್ಲಿ ನೆಲೆಸಿ ಬ್ರೆಡ್‌್ಸ ಗ್ರೂಫ್ ಫೈನಾನ್ಶಿಯಲ್ ಕಂಟ್ರೋಲರ್ ಉದ್ಯೋಗ ನಿರ್ವಹಿಸುತ್ತಿದ್ದು ಜೀಡ್ ಕೂಡ ಲಿನೊವೋ ಕಂಪನಿಯ ಪಾಲುದಾರರಾಗಿ ಉದ್ಯೋಗ ನಿರತರಾಗಿದ್ದಾರೆ. ಇಬ್ಬರೂ ಕುಟುಂಬದ ಹಿರಿಯರು, ಬಂಧು-ಮಿತ್ರರ ಆಶೀರ್ವಾದ ಪಡೆದು ಹಿಂದೂ ಸಂಸ್ಕೃತಿಗನುಗುಣವಾಗಿ ವಿವಾಹವಾಗಲು ತೀರ್ಮಾನಿಸಿದರು. ಚೀನಾದಿಂದ ಬಂದಿದ್ದ ಐವರು ಭಾರತೀಯ ವಸ್ತ್ರ ಧರಿಸಿ ಮದುವೆ ಸಂಭ್ರಮದಲ್ಲಿ ಪಾಲ್ಗೊಂಡು ಶಾಸ್ತ್ರಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿ ಕೊಂಡಾಡಿದರು.
