ಹುಣಸೂರು, ಜ.7– ಇಪ್ಪತೈದು ವರ್ಷಗಳ ಹಿಂದೆ ನಡೆದಿದೆ ಎನ್ನಲಾದ ಕೊಲೆ ಹಾಗೂ ಮಾನವ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಉಚ್ಛ ನ್ಯಾಯಾಲಯ ಮರು ತನಿಖೆಗೆ ನಡೆಸುವಂತೆ ಆದೇಶಿಸಿ ಮಹತ್ವದ ತೀರ್ಪು ನೀಡಿದೆ.
ನಗರದ ದಾವಣಿ ಬೀದಿಯ ನಿವಾಸಿ ರಾಜೇಗೌಡರ ಪತ್ನಿ ಪುಪ್ಪಲತಾರನ್ನು ಕಮಲಬಾಯಿ, ವಿಜಯ್, ಮಂಜು, ಜಯಣ್ಣ, ಸೋಮೇಶ್, ಮಹದೇವಮ್ಮ ಹಾಗೂ ಬಡ್ಡಿ ಯಶೋಧಮ್ಮ ಎಂಬುವವರು ಅಪಹರಣ ಮಾಡಿ ಮಾನವ ಕಳ್ಳಸಾಗಣೆ ಮಾಡಿದ್ದಾರೆ ಎಂದು ಆರೋಪಿಸಿ, ಸದರಿ ಕೃತ್ಯಕ್ಕೆ ಸಹಾಯ ಮಾಡಿರುವ ಹೆಚ್.ಕೆ.ಕೃಷ್ಣ, ಹೆಚ್.ಕೆ.ಕುಮಾರ, ಆನಂತ, ಸುನೀತ, ಈಶ್ವರ, ಅವರುಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ಮತ್ತು ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿ ಪ್ರಕರಣ ದಾಖಲಿಸಲು ಪತಿ ರಾಜೇಗೌಡ ನಗರ ಪೊಲೀಸ್ ಠಾಣೆಯಲ್ಲಿ ಸೆ.11, 2000ರಂದು ದೂರು ನೀಡಿರುತ್ತಾರೆ.
ಆದರೆ ದೂರು ಸ್ವೀಕರಿಸಿದ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುತ್ತಾರೆ. ಈ ವೇಳೆ ಡಿ.1ರಂದು ರಾಜೇಗೌಡರ ಜಮೀನು ಪಕ್ಕದಲ್ಲಿರುವ ಸರ್ವೆ ನಂ 116ರ ಕಬ್ಬಿನ ಗದ್ದೆಯಲ್ಲಿ ಮೃತ ಮಹಿಳೆಯ ಕಳೇಬರಹ ಪತ್ತೆಯಾಗುತ್ತದೆ.
ಸಿಕ್ಕಿರುವ ಕಳೆಬರಹವು ರಾಜೇಗೌಡರ ಪತ್ನಿ ಪುಪ್ಪಲತಾಳದೇ ಎಂದು ಪರಿಗಣಿಸಿದ ಪೊಲೀಸರು ಪತಿ ರಾಜೇಗೌಡ, ಮೈದುನ ಭೈರೇಗೌಡ ಹಾಗೂ ನಿತ್ಯಾನಂದ ಎಂಬುವವರೇ ಪುಪ್ಪಲತಾಳನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸುತ್ತಾರೆ.
ಪ್ರಕರಣದ ವಿಚಾರಣೆ ನಡೆಸಿದ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ವಾದ ಪ್ರತಿವಾದಗಳನ್ನು ಆಲಿಸಿ ಸಾಕ್ಷಿಗಳ ಕೊರತೆಯಿಂದಾಗಿ ಪತಿ ರಾಜೇಗೌಡ, ಮೈದುನ ಭೈರೇಗೌಡ ಹಾಗೂ ನಿತ್ಯಾನಂದರನ್ನು 2004ರಲ್ಲಿ ಆರೋಪದಿಂದ ಮುಕ್ತಗೊಳಿಸಿ ಬಿಡುಗಡೆಗೊಳಿಸುತ್ತದೆ.
ಏತನಧ್ಯೆ ಪುಪ್ಪಲತಾರನ್ನು ಆಪಹರಿಸಿ ಮಾನವ ಕಳ್ಳಸಾಗಣೆ ಮಾಡಿದ್ದಾರೆ. ಈ ಕೃತ್ಯದಲ್ಲಿ ಪೊಲೀಸ್ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಶಾಮೀಲಾಗಿರುವುದಾಗಿ ಆರೋಪಿಸಿ ಪತಿ ರಾಜೇಗೌಡ ನ್ಯಾಯದೊಕಿಸಿಕೊಡಬೇಕಂದು ಕೋರಿ ಉಚ್ಚ ನ್ಯಾಯಾಲದಲ್ಲಿ 2013ರಲ್ಲಿ ರಿಟ್ ದಾವೆಯೊಂದನ್ನು ದಾಖಲಿಸುತ್ತಾರೆ.
ಸುಮಾರು 11 ವರ್ಷಗಳ ಸುಧೀಘ ವಿಚಾರಣೆ ನಂತರ ವಾದ ಪ್ರತಿವಾದಗಳನ್ನು ಆಲಿಸಿದ ಉಚ್ಚ ನ್ಯಾಯಾಲಯವು ಪ್ರಕರಣದ ಗಂಭೀರತೆಯನ್ನು ಅರಿತು ಪ್ರಕರಣವನ್ನು ಸಿಐಡಿಗೆ ವಹಿಸಿ ಮರು ತನಿಖೆ ನಡೆಸುವಂತೆ ಕಳೆದ ನವೆಂಬರ್‌ನಲ್ಲಿ ಆದೇಶಿಸಿದೆ.
ಎಫ್‌ಎಸ್‌ಎಲ್ ವರದಿ ನೀಡಿದ ತಿರುವು: ಪೊಲೀಸರಿಗೆ ರಾಜೇಗೌಡರ ಜಮೀನು ಪಕ್ಕದ ಕಬ್ಬಿನ ಗದ್ದೆಯಲ್ಲಿ ದೊರತ ಮೃತ ಮಹಿಳೆಯ ಕಳೆಬರವು ಪುಪ್ಪಲತಾಳದೇ ಎಂದು ನಿರೂಪಿಸುವಲ್ಲಿ ವಿಫಲವಾದ ಕಾರಣ, ಎಫ್‌ಎಸ್‌ಎಲ್ ವರದಿಯಲ್ಲಿ ಪೊಲೀಸರಿಗೆ ಸಿಕ್ಕಿರುವ ಕಳೇಬರದ ಡಿಎನ್‌ಎ ಹಾಗೂ ಪುಷ್ಪಲತಾಳ ಡಿಎನ್‌ಎಗಳು ಒಂದಕ್ಕೊಂದು ಸಾಮ್ಯತೆ ಕಂಡು ಬಂದಿಲ್ಲ.
ಮರುತನಿಖೆಗೆ ಸಿಐಡಿ ಎಸ್.ಪಿ ಮಟ್ಟದ ಅಧಿಕಾರಿಯಿಂದ ತನಿಖೆ ನಡೆಸುವಂತೆ ಸಿಐಡಿ ಐಜಿಗೆ ಸೂಚನೆ ನೀಡದೆ.
ಪುಷ್ಪಲತಾ ಎಲ್ಲಿ?:
ಪುಷ್ಪಲತಾ ಕಣ್ಮರೆಯಾಗಿ ಇಪ್ಪತೈದು ವರ್ಷ ಕಳೆದರೂ ಕುಟುಂಬಸ್ಥರ ಸಂಪರ್ಕಕ್ಕೆ ಸಿಕ್ಕಿಲ್ಲ. ಪುಷ್ಪಲತಾ ಬದುಕಿದ್ದಾರೋ ಸತ್ತಿದ್ದಾರೋ ಎಂಬುವುದು ಯಾರಿಗೂ ತಿಳಿದಿಲ್ಲ. ಹಾಗಾದರೆ ಪುಷ್ಪಲತಾ ಎಲ್ಲಿದ್ದಾರೆ, ಪುಷ್ಪಲತಾ ಬದುಕಿದ್ದರೇ ಕಬ್ಬಿನ ಗದ್ದೆಯಲ್ಲಿ ಪೊಲೀಸರಿಗೆ ಸಿಕ್ಕ ಅಸ್ತಿಪಂಜರ ಯಾರದು ಸಿಐಡಿ ಅಧಿಕಾರಿಗಳು ಪ್ರಕರಣವನ್ನು ಭೇದಿಸುವರೇ ಎಂಬುವುದು ನಿಗೂಢ ರಹಸ್ಯವಾಗಿ ಕಾಡುತ್ತಿದೆ.