Friday, January 10, 2025
Homeರಾಜ್ಯಕಾಂಗ್ರೆಸ್‌ನಲ್ಲಿ ಹೆಚ್ಚಾಯ್ತು ಸಿಎಂ ಕುರ್ಚಿ ಕಚ್ಚಾಟ

ಕಾಂಗ್ರೆಸ್‌ನಲ್ಲಿ ಹೆಚ್ಚಾಯ್ತು ಸಿಎಂ ಕುರ್ಚಿ ಕಚ್ಚಾಟ

CM chair fight has intensified in the Congress,

ಬೆಂಗಳೂರು,ಜ.7- ಹಿಂದುಳಿದ ವರ್ಗಗಳು ಹಾಗೂ ಒಕ್ಕಲಿಗ ಸಮುದಾಯದ ಶಾಸಕರು ಮತ್ತು ಸಚಿವರ ಸಭೆಯ ಬಳಿಕ ಪರಿಶಿಷ್ಟ ಜಾತಿಯ ಶಾಸಕರೊಂದಿಗೆ ಗೃಹಸಚಿವ ಡಾ.ಜಿ.ಪರ ಮೇಶ್ವರ್ ಸಭೆ ನಡೆಸಲು ಮುಂದಾಗಿದ್ದು ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ಇತ್ತೀಚೆಗೆ ಸಚಿವ ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒತ್ತಾಸೆಯ ಮೇರೆಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಔತಣಕೂಟ ಏರ್ಪಡಿಸಿದ್ದರು. ಅದರಲ್ಲಿ ಪರಮೇಶ್ವರ್, ಕೆ.ಎನ್.ರಾಜಣ್ಣ, ಎಚ್.ಸಿ.ಮಹದೇವಪ್ಪ ಸೇರಿದಂತೆ ಹಲವು ಸಚಿವರು ಭಾಗವಹಿಸಿದ್ದರು.ಅದರ ಬೆನ್ನಲ್ಲೇ ಸಚಿವ ಚಲುವರಾಯಸ್ವಾಮಿ, ಒಕ್ಕಲಿಗ ಸಮುದಾಯದ ಶಾಸಕರು, ಸಚಿವರು ಸಭೆ ನಡೆಸಿದರು.

ಸಚಿವ ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ಲಿಂಗಾಯತ ಸಮುದಾಯದ ಸಚಿವರು, ಶಾಸಕರು ಸಭೆ ನಡೆಸಲು ಮುಂದಾಗಿದ್ದಾರೆ.ಈ ನಡುವೆ ನಾಳೆ ಖಾಸಗಿ ಹೋಟೆಲ್ನಲ್ಲಿ ಗೃಹಸಚಿವ ಡಾ.ಜಿ.ಪರಮೇಶ್ವರ್, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಸಚಿವರು, ಶಾಸಕರು ಮತ್ತು ಕಾಂಗ್ರೆಸ್ನ ಪದಾಧಿಕಾರಿಗಳ ಸಭೆ ಆಯೋಜಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಸಚಿವ ಪರಮೇಶ್ವರ್ ಸಂಜೆ 7 ಗಂಟೆಗೆ ಸಭೆ ನಡೆಸಲು ನಿರ್ಧರಿಸಲಾಗಿದೆ. ಸುಮಾರು 2 ಗಂಟೆಗಳ ಕಾಲ ಚರ್ಚೆ ನಡೆಯುವ ನಿರೀಕ್ಷೆಯಿದ್ದು, ಆ ಬಳಿಕ ಅಲ್ಲಿಯೇ ಊಟ ಮಾಡುತ್ತೇವೆ. ಉಳಿದಂತೆ ಯಾವುದೇ ರೀತಿಯ ಪಾರ್ಟಿಗಳು ನಡೆಯುವುದಿಲ್ಲ ಎಂದು ಹೇಳಿದರು.

ವಿಧಾನಸಭೆ ಚುನಾವಣೆಗೂ ಮೊದಲು ಚಿತ್ರದುರ್ಗದಲ್ಲಿ ಪರಿಶಿಷ್ಟ ಜಾತಿ/ಪಂಗಡದ ಸಮಾವೇಶ ನಡೆಸಿ ಕೆಲವು ಘೋಷಣೆಗಳನ್ನು ಮಾಡಲಾಗಿತ್ತು. ಅದರ ಪರಿಣಾಮ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೇರಿದೆ.ಸರ್ಕಾರ ರಚನೆಯಾದ ಬಳಿಕ ಸಮುದಾಯಕ್ಕೆ ಧನ್ಯವಾದ ಹೇಳುವ ಕೆಲಸ ಆಗಿಲ್ಲ. ಈ ಕಾರಣಕ್ಕಾಗಿ ಸಮಾವೇಶ ನಡೆಸಲು ಚಿಂತನೆ ನಡೆದಿದೆ ಎಂದರು.

ಸಚಿವರಾದ ಸತೀಶ್ ಜಾರಕಿಹೊಳಿ, ಕೆ.ಎಚ್.ಮುನಿಯಪ್ಪ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸರ್ಕಾರ ರಚನೆ ಬಳಿಕ ಸಮುದಾಯವನ್ನು ಮರೆತುಬಿಡಲಾಗಿದೆ ಎಂಬ ಆಕ್ಷೇಪಗಳು ಪದೇಪದೇ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಒಂದು ಕಾರ್ಯಕ್ರಮ ಮಾಡಿ ಧನ್ಯವಾದ ಹೇಳಬೇಕಿದೆ. ಸಮಾವೇಶ ನಡೆಸುವ ಕುರಿತು ಚರ್ಚೆ ನಡೆಸಲು ನಾಳೆ ಆಯೋಜಿಸಲಾಗಿರುವ ಸಭೆಯಲ್ಲಿ ಎಸ್ಸಿ/ಎಸ್ಟಿ ಸಮುದಾಯದ ಶಾಸಕರು, ಮಾಜಿ ಶಾಸಕರು, ಪ್ರದೇಶ ಕಾಂಗ್ರೆಸ್ನ ಪದಾಧಿಕಾರಿಗಳು ಮತ್ತು ಪ್ರಮುಖರು ಹಾಗೂ ಇತರ ಸಂಘಟನೆಗಳ ಮುಖಂಡರು ಭಾಗವಹಿಸಲಿದ್ದಾರೆ. ಇದು ಪಕ್ಷದ ಕಾರ್ಯಕ್ರಮ. ಬೇರೆ ಪಕ್ಷಗಳ ಮುಖಂಡರೂ ಬರುವ ಸಾಧ್ಯತೆಯಿದೆ ಎಂದರು.

ಎಸ್ಸಿ/ಎಸ್ಟಿ ಸಮುದಾಯದ ಸಚಿವರನ್ನು ಹೊರತುಪಡಿಸಿ ಬೇರೆಯವರು ಸಭೆಯಲ್ಲಿ ಭಾಗವಹಿಸುತ್ತಿಲ್ಲ. ನಮಲ್ಲೇ ಒಂದಷ್ಟು ಚರ್ಚೆಗಳಾಗಿ ನಿರ್ಣಯಗಳಾಗಿದ್ದವು. ಈ ಕಾರಣಕ್ಕೆ ಎಲ್ಲರೂ ಭಾಗವಹಿಸಲು ಅವಕಾಶವಿಲ್ಲ. ಕೆಲವರು ಬಂದರೂ ನಾವು ಬೇಡ ಎನ್ನಲಾಗುವುದಿಲ್ಲ ಎಂದರು.

ಚಿತ್ರದುರ್ಗದಲ್ಲಿ ಕೈಗೊಂಡ 10-15 ನಿರ್ಣಯಗಳ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಯಿದ್ದು, ಈ ಕಾರಣಕ್ಕೆ ಬೇರೆಯವರನ್ನು ಆಹ್ವಾನಿಸುತ್ತಿಲ್ಲ. ರಾಜಕೀಯ ವಲಯದಲ್ಲಿ ಯಾರು, ಏನು ಬೇಕಾದರೂ ವ್ಯಾಖ್ಯಾನ ಮಾಡಲಿ. ಹಾಗೆಂದು ನಾವು ಒಗ್ಗಟ್ಟಾಗಿರಬಾರದೇ?, ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ಬರುತ್ತದೆ. ಕಾಂಗ್ರೆಸ್ ಪಕ್ಷದ ಜೊತೆ ಸಮುದಾಯ ನಿಲ್ಲಬೇಕಲ್ಲವೇ?, ಅಧಿಕಾರದಲ್ಲಿದ್ದಾಗಲೂ ಸಮುದಾಯದ ಸಮಸ್ಯೆಗಳನ್ನು ಆಲಿಸದೇ ಇದ್ದರೆ ಅದು ಸರಿಯೇ? ಎಂದು ಪ್ರಶ್ನಿಸಿದರು.

ತೆರೆಮರೆಯ ಕಸರತ್ತುಗಳು :
ಸಮುದಾಯವಾರು ಔತಣಕೂಟಗಳ ಹಿಂದೆ ಹಲವಾರು ಲೆಕ್ಕಾಚಾರಗಳು ನಡೆಯುತ್ತಿವೆ. ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಸಲಾಗಿರುವ ಜಾತಿ ಜನಗಣತಿ ಎಂದೇ ಬಿಂಬಿತವಾದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿಯನ್ನು ಜಾರಿಗೊಳಿಸಲು ಚರ್ಚೆಗಳಾಗುತ್ತಿವೆ.

ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಾಜರಾತಿಯಲ್ಲಿ ನಡೆದ ಸಭೆಯಲ್ಲೂ ಇದೇ ವಿಚಾರ ಪ್ರಮುಖವಾಗಿ ಪ್ರಸ್ತಾಪವಾಗಿದೆ.ಸಿದ್ದರಾಮಯ್ಯ ಅವರು ಸಮುದಾಯವಾರು ಸಭೆಗಳನ್ನು ನಡೆಸಿ ಅಭಿಪ್ರಾಯ ಕ್ರೋಡೀಕರಿಸುವಂತೆ ಸಚಿವರುಗಳಿಗೆ ಸೂಚನೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಆಯಾ ಸಮುದಾಯಗಳ ಸಚಿವರು ಔತಣಕೂಟಗಳ ನೆಪದಲ್ಲಿ ಅಖಾಡಕ್ಕಿಳಿದಿದ್ದಾರೆ ಎಂದು ಹೇಳಲಾಗುತ್ತಿದೆ.ಮತ್ತೊಂದೆಡೆ ಗೃಹಸಚಿವ ಡಾ.ಜಿ.ಪರಮೇಶ್ವರ್, ದಲಿತ ಮುಖ್ಯಮಂತ್ರಿ ಚರ್ಚೆಯನ್ನು ಮುನ್ನೆಲೆಗೆ ತರಲು ಪ್ರಯತ್ನಿಸುತ್ತಿದ್ದು, ಅದಕ್ಕಾಗಿ ನಾನಾ ರೀತಿಯ ಕಸರತ್ತುಗಳು ನಡೆದಿವೆ ಎಂದು ಹೇಳಲಾಗಿದೆ.

RELATED ARTICLES

Latest News