ಬೆಂಗಳೂರು,ಜ.7- ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಸಕರಿಗೆ ಮತ್ತು ಸಚಿವರಿಗೆ ಔತಣಕೂಟ ಕೊಟ್ಟ ಮೇಲೆ ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಭವಿಷ್ಯ ನುಡಿದಿದ್ದಾರೆ.
ಆಡಳಿತಾರೂಢ ಕಾಂಗ್ರೆಸ್ನಲ್ಲಿ ಈಗ ಶಾಸಕರು ಮತ್ತು ಸಚಿವರಿಗೆ ಈಗ ಡಿನ್ನರ್ ಪಾರ್ಟಿಯನ್ನು ಪೈಪೋಟಿಗೆ ಬಿದ್ದವರಂತೆ ಆಯೋಜಿಸುತ್ತಿದ್ದಾರೆ. ಗೃಹಸಚಿವ ಡಾ.ಜಿ.ಪರಮೇಶ್ವರ್ ನಾಳೆ ದಲಿತ ಮತ್ತು ಪರಿಶಿಷ್ಟ ಪಂಗಡದ ಸಚಿವರಿಗೆ ಔತಣಕೂಟ ಏರ್ಪಡಿಸಿರುವ ಉದ್ದೇಶವೇ ನಿರ್ಗಮನದ ಪಾರ್ಟಿ ಎಂದು ವ್ಯಂಗ್ಯವಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ನಡೆದ ಅಧಿವೇಶನದಲ್ಲೇ ಅಧಿಕಾರವನ್ನು ಒದ್ದು ಕಿತ್ತುಕೊಳ್ಳಬೇಕೆಂದು ಶಿವಕುಮಾರ್ ಹೇಳಿದ್ದರು. ಅವರು ಯಾರಿಗೆ ಹೇಳಬೇಕೋ ಅವರಿಗೆ ಈ ಮಾತನ್ನು ಹೇಳಿದ್ದಾರೆ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಅವರು ತಮ ಆಪ್ತ ಸಚಿವರಿಗೆ ನಿರ್ಗಮನದ ಔತಣಕೂಟ ಕೊಡಿಸಿದ್ದಾರೆ. ಅದೇ ರೀತಿ ಪರಮೇಶ್ವರ್ ನಾಳೆ ಕೊಡಿಸಬಹುದು. ನಾಡಿದ್ದು ಸತೀಶ್ ಜಾರಕಿ ಹೊಳಿ, ಡಿ.ಕೆ.ಶಿವಕುಮಾರ್ ಅವರು ಔತಣಕೂಟ ಕೊಟ್ಟ ತಕ್ಷಣವೇ ರಾಜ್ಯದಲ್ಲಿ ಹೊಸ ಸರ್ಕಾರ ಬರಲಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಗುತ್ತಿಗೆದಾರರಿಂದ 65% ಕಮಿಷನ್ ಪಡೆಯಲು ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ಹಿಂದೆ ಬಿಜೆಪಿಯದ್ದು 40% ಕಮೀಷನ್ ಸರ್ಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸಿಗರು ಆರೋಪ ಮಾಡಿದ್ದರು. ಮೊನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಗುತ್ತಿಗೆದಾರರಿಂದ 65 ಕಮಿಷನ್ ಪಡೆಯಲು ಮುಂದಾಗಿದ್ದಾರೆ. ಇದನ್ನೇ ಕುಮಾರಸ್ವಾಮಿಯವರು ಹೇಳಿರುವುದು ಎಂದು ಸಮರ್ಥಿಸಿಕೊಂಡರು.
ಕಾಂಗ್ರೆಸ್ ಸರ್ಕಾರ ಆರು ತಿಂಗಳ ಹಿಂದೆಯೇ ಕಮಿಷನ್ 60% ಪಡೆದಿದ್ದಾರೆ. ನಮ ಮೇಲೆ 40% ಕಮಿಷನ್ ಪಡೆಯುತ್ತಾರೆ ಎಂದು ಆರೋಪ ಮಾಡಿದ್ದರು. ಈಗ ಏನು ಹೇಳುತ್ತಾರೆ ಎಂದು ಪ್ರಶ್ನೆ ಮಾಡಿದರು.
ಅದೇ ಗುತ್ತಿಗೆದಾರರು ಇಂದು ಈ ಸರ್ಕಾರದ ಮೇಲೆ 40%ಕ್ಕಿಂತ ಹೆಚ್ಚು ಕಮಿಷನ್ ಪಡೆಯುತ್ತಾರೆ ಎಂದು ಹೇಳುತ್ತಿದ್ದಾರೆ. ರಾಜ್ಯದಲ್ಲಿ 32 ಸಾವಿರ ಕೋಟಿ ರೂ. ಬರಬೇಕು ದುಡ್ಡು ಎಲ್ಲಿಂದ ತರುತ್ತಾರೆ ? ಹಾಲು, ನೀರು ಹೀಗೆ ಎಲ್ಲದಕ್ಕೂ ಬೆಲೆ ಹೆಚ್ಚಿಸಿದ್ದಾರೆ. ಸರ್ಕಾರದ ಬಳಿ ಹಣ ಇಲ್ಲ. ಸಂಪೂರ್ಣವಾಗಿ ದಿವಾಳಿಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಅಭಿವೃದ್ಧಿಗೆ ಹಣ ಇಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಾರೆ. 100ಕ್ಕೆ 100%ರಷ್ಟು ಅಭಿವೃದ್ಧಿ ಕುಂಠಿತವಾಗಿದೆ. ಆದರೆ ಕಾಂಗ್ರೆಸ್ ಅಭಿವೃದ್ಧಿ ಮಾತ್ರ ನಿಂತಿಲ್ಲ. 40%ರಿಂದ 60% ಕಮಿಷನ್ ಗೆ ಹೆಚ್ಚು ಮಾಡಿಕೊಂಡಿದ್ದಾರೆ. ಬೆಲೆ ಏರಿಕೆ ಇನ್ನು 5% ಹೆಚ್ಚು ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಬಾಣಂತಿಯರು, ಗುತ್ತಿಗೆದಾರರು, ರೈತರ ಸರಣಿ ಆತಹತ್ಯೆಗಳು ನಡೆಯುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 60% ಕಮಿಷನ್ಗೆ ದಾಖಲೆ ಕೇಳಿದ್ದಾರೆ. ಹಾಗಾದರೆ ನೀವು ಆರೋಪ ಮಾಡಿದ್ದ 40% ಕಮಿಷನ್ಗೆ ದಾಖಲೆ ಕೊಡುತ್ತೀರಾ ಎಂದು ಪ್ರಶ್ನಿಸಿದರು.
ಮಾತೆತ್ತಿದ್ದರೆ ಸಂವಿಧಾನ ಪುಸ್ತಕ ಹಿಡಿದುಕೊಳ್ಳುತ್ತಾರೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ಇದೇ ಕಾಂಗ್ರೆಸ್ ಎರಡು ಬಾರಿ ಸೋಲಿಸಿತ್ತು. ಬಾಬಾ ಸಾಹೇಬರ ಅಂತ್ಯಸಂಸ್ಕಾರಕ್ಕೆ ಜಾಗ ಕೂಡ ನೀಡಲಿಲ್ಲ. ಆದರೂ ಸಂವಿಧಾನ ಪುಸ್ತಕ ಹಿಡ್ಕೊಂಡು ಓಡಾಡುತ್ತಾರೆ ಎಂದು ವ್ಯಂಗ್ಯವಾಡಿದರು.
ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಸ್ವಯಂ ಉದ್ಯೋಗ ಯೋಜನೆಗೆ ನಾವು 100 ಕೋಟಿ ನೀಡಿದ್ದೆವು. ಕಾಂಗ್ರೆಸ್ 45 ಕೋಟಿ ರೂ. ನೀಡಿದೆ. ದೇವರಾಜ್ ಅರಸು ನಿಗಮಕ್ಕೆ 165 ಕೋಟಿ ಬಿಜೆಪಿ ಕೊಟ್ಟಿತ್ತು. ಆದರೆ ಕಾಂಗ್ರೆಸ್ ನೀಡಿದ್ದು 100 ಕೋಟಿ ರೂ. ಮಾತ್ರ. ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಬಿಜೆಪಿ 106 ಕೋಟಿ ರೂ. ಕೊಟ್ಟರೆ ಕಾಂಗ್ರೆಸ್ ಕೇವಲ 66 ಕೋಟಿ ರೂ. ಮಾತ್ರ ಕೊಟ್ಟಿದೆ ಎಂದು ಕಿಡಿಕಾರಿದರು.
ಬಿಜೆಪಿ ಕಾಲದಲ್ಲಿ ಗಂಗಾ ಕಲ್ಯಾಣ ಯೋಜನೆಗೆ 60 ಕೋಟಿ ಕೊಟ್ಟಿದ್ದೇವೆ. ಈ ಸರ್ಕಾರ ಗಂಗಾ ಕಲ್ಯಾಣ ಯೋಜನೆಗೆ 40 ಕೋಟಿ ಕೊಟ್ಟಿದ್ದಾರೆ. ದಲಿತರ ಬಗ್ಗೆ ಕಾಳಜಿ ಇದ್ದರೆ, ಹಣ ಹೆಚ್ಚು ಕೊಡಬೇಕಿತ್ತು, ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದರು. ಬಿಜೆಪಿ ವಿಶ್ವಕರ್ಮ ಅಭಿವೃದ್ಧಿ ನಿಗಮ 25 ಕೋಟಿ ರೂ. ಕೊಟ್ಟಿದೆ. ಈ ಸರ್ಕಾರ 13 ಕೋಟಿ ರೂ.ಕೊಟ್ಟಿದೆ. ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ ನಾವು 25 ಕೋಟಿ ರೂ ಕೊಟ್ಟಿದ್ದೇವೆ. ಇವರು ಕೇವಲ 5 ಕೋಟಿ ರೂ ಕೊಟ್ಟಿದ್ದಾರೆ.
ವೀರಶೈವ ಅವರಿಗೆ 100 ಕೋಟಿ ರುಪಾಯಿ ಕೊಟ್ಟಿದ್ವಿ, ಈ ಸರ್ಕಾರ 90ಕೋಟಿ ಕೊಟ್ಟಿದ್ದಾರೆ. ನಮ ಸರ್ಕಾರ ಹಿಂದೂ ಧಾರ್ಮಿಕ ಸಂಸ್ಥೆಗೆ 204 ಕೋಟಿ ಕೊಟ್ಟರೆ, ಈ ಸರ್ಕಾರ 17 ಕೋಟಿಯನ್ನಷ್ಟೇ ಕೊಟ್ಟಿದೆ. ವಕ್‌್ಫ ಬೋರ್ಡ್ಗೆ- ಹಿಂದೂ ರುದ್ರ ಭೂಮಿ ನಿರ್ವಹಣೆ ಅಭಿವೃದ್ಧಿಗೆ 25 ಕೋಟಿ ರೂಪಾಯಿ ಕೊಟಿದ್ದೇವೆ ಎಂದು ಸಮರ್ಥಿಸಿಕೊಂಡರು.