ಬೆಂಗಳೂರು,ಜ.7- ಕಳಪೆ ಔಷಧಿಯಿಂದಾಗಿ ಬಾಣಂತಿಯರ ಸಾವಿನ ಪ್ರಕರಣಗಳ ಸರಣಿ ಮುಂದುವರೆದಿರುವ ನಡುವೆಯೇ, ರೋಗನಿರೋಧಕ ಲಸಿಕೆ ಪಡೆದ ಬಳಿಕ ಅಸ್ವಸ್ಥಗೊಂಡ ಎರಡು ಹಸುಗೂಸುಗಳು ಮೃತಪಟ್ಟಿರುವ ಘಟನೆ ಕುಣಿಗಲ್ ತಾಲ್ಲೂಕಿನಲ್ಲಿ ನಡೆದಿದ್ದು, ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಕುಣಿಗಲ್ ತಾಲ್ಲೂಕಿನಲ್ಲಿ ಲಸಿಕೆ ಪಡೆದ ಕೆಲ ಸಮಯದ ಬಳಿಕ ಮಕ್ಕಳು ಅಸ್ವಸ್ಥಗೊಂಡು ಮೃತಪಟ್ಟಿವೆ. ಈ ಸಾವಿಗೆ ಲಸಿಕೆಯ ಅಡ್ಡಪರಿಣಾಮ ಕಾರಣವಾಗಿರಬಹುದೇ ಎಂಬ ಬಗ್ಗೆ ಹೆಚ್ಚಿನ ಪರಿಶಿಲನೆ ನಡೆಯುತ್ತಿದೆ.
ಜ.2 ಮತ್ತು 3 ರಂದು ಕುಣಿಗಲ್ ತಾಲ್ಲೂಕಿನ ಭಕ್ತರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 4 ಮಕ್ಕಳಿಗೆ ಪೆಂಟಾ 1 ಲಸಿಕೆ ಹಾಕಲಾಗಿದೆ. ಅದರಲ್ಲಿ 1, 2 ಮತ್ತು 4ನೇ ಮಗು ಆರೋಗ್ಯವಾಗಿವೆ. 3ನೇ ಮಗು ರಾತ್ರಿ ಹಾಲು ಕುಡಿದು ಮಲಗಿದ ಬಳಿಕ ಬೆಳಗಿನ ಜಾವ ಅಸ್ವಸ್ಥಗೊಂಡಿದೆ. ಪೋಷಕರು ತಕ್ಷಣವೇ ಕುಣಿಗಲ್ನ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಆ ವೇಳೆಗಾಗಲೇ ಮಗು ಮೃತಪಟ್ಟಿತ್ತು ಎಂದು ಸ್ಥಾನಿಕ ವೈದ್ಯರು ದೃಢಪಡಿಸಿದ್ದಾರೆ.
ಕುಣಿಗಲ್ ನಗರದಲ್ಲಿ ಲಸಿಕೆ ಹಾಕಿಸಿಕೊಂಡ ಮತ್ತೊಂದು ಮಗು ಅಸ್ವಸ್ಥತೆಯಿಂದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದೆ. ಲಸಿಕೆಗೂ ಮುನ್ನ ಮಗುವಿಗೆ ವಾಂತಿಯಾಗುತ್ತಿತ್ತು.ಚಿಕಿತ್ಸೆ ನೀಡಿ ಗುಣಮುಖವಾದ 2-3 ದಿನದ ಬಳಿಕ ಲಸಿಕೆ ಹಾಕಲಾಗಿದೆ. ಆದರೆ ಲಸಿಕೆ ಬಳಿಕ ಮಗು ಅಸ್ವಸ್ಥಗೊಂಡಿದೆ, ವಾಂತಿ ಹೆಚ್ಚಾಗಿದೆ. ಸಂಜೆ 4 ಗಂಟೆ ವೇಳೆಗೆ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಅಲ್ಲಿ ವೈದ್ಯರು ಬರುವುದು ತಡವಾಗುವ ಕಾರಣಕ್ಕೆ ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ತುಮಕೂರು ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಚಂದ್ರಶೇಖರ್ರವರು ಮಕ್ಕಳ ಸಾವಿಗೆೆ ಲಸಿಕೆಯ ತಡವಾದ ಪರಿಣಾಮ (ಲೇಟ್ ರಿಯಾಕ್ಷನ್) ಕಾರಣ ಇರಬಹುದು ಎಂಬ ಶಂಕೆ ಇದೆ.
ಆದರೆ ಅದನ್ನು ದೃಢೀಕರಿಸಿಕೊಳ್ಳಲು ಎಫ್ಎಸ್ಎಲ್ ವರದಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಹೇಳಿದ್ದಾರೆ.ಇಬ್ಬರು ಮಕ್ಕಳು ಮಾತ್ರ ಸಾವನ್ನಪ್ಪಿವೆ. ಅದರಲ್ಲಿ ಭಕ್ತರಹಳ್ಳಿ ಮಗುವಿನ ಮರಣೋತ್ತರ ಪರೀಕ್ಷೆ ನಡೆಸಿದ್ದು, ಮಾದರಿಗಳನ್ನು ಎಫ್ಎಸ್ಎಲ್ಗೆ ಕಳುಹಿಸಲಾಗಿದೆ. ಕುಣಿಗಲ್ನ ಮಗುವಿನ ಪೋಷಕರು ಒಪ್ಪದ ಕಾರಣ ಮರಣೋತ್ತರ ಪರೀಕ್ಷೆ ಸಾಧ್ಯವಾಗಿಲ್ಲ ಎಂದಿದ್ದಾರೆ.
ಪೆಂಟಾ 1 ಲಸಿಕೆ : ಮಕ್ಕಳನ್ನು ಕಾಡುವ ಡಿಫ್ತೀರಿಯಾ, ಪೆರ್ಟುಸಿಸ್, ಹೆಪಟೈಟಸ್ ಬಿ ಮತ್ತು ಹಿಬ್ ಸೇರಿದಂತೆ 5 ಮಾರಣಾಂತಿಕ ರೋಗಗಳಿಂದ ಮಕ್ಕಳನ್ನು ರಕ್ಷಿಸಲು ಪೆಂಟಾವ್ಯಾಲೆಂಟ್ ಲಸಿಕೆಗಳನ್ನು ಹಾಕಲಾಗುತ್ತದೆ. ಮಗು ಜನಿಸಿದ 6 ವಾರಕ್ಕೆ ಪೆಂಟಾ 1, 10ನೇ ವಾರದಲ್ಲಿ ಪೆಂಟಾ 2 ಮತ್ತು 14ನೇ ವಾರಕ್ಕೆ ಪೆಂಟಾ 3 ಲಸಿಕೆಯನ್ನು ರಾಷ್ಟ್ರೀಯ ರೋಗನಿರೋಧಕ ಕಾರ್ಯಕ್ರಮದಲ್ಲಿ ಹಾಕಲಾಗುತ್ತದೆ.
ಈ ಲಸಿಕೆಗಳು ಮಕ್ಕಳನ್ನು ನ್ಯುಮೋನಿಯ ಹಾಗೂ ಇತರ ಆರೋಗ್ಯ ಸಮಸ್ಯೆಗಳಿಂದ ರಕ್ಷಿಸುತ್ತವೆ. ಆದರೆ ಕುಣಿಗಲ್ ಪ್ರಕರಣದಲ್ಲಿ ಲಸಿಕೆ ಪಡೆದ ಕೆಲ ಹೊತ್ತಿನಲ್ಲೇ ಮಕ್ಕಳು ಅಸ್ವಸ್ಥರಾಗಿ ಜೀವ ಕಳೆದುಕೊಂಡಿರುವುದು ಆತಂಕ ಮೂಡಿಸಿದೆ.