ಹೈದರಾಬಾದ್, ಜ.8- ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರೇಮಿಗಳು ಕಾರಿನೊಳಗೆ ಬೆಂಕಿ ಹಚ್ಚಿಕೊಂಡು ಆತಹತ್ಯೆ ಮಾಡಿಕೊಂಡಿರುವ ಭೀಕರ ಘಟನೆ ತೆಲಂಗಾಣದ ಗಡ್ಕೇಸರ್ ಜನ್ನಾಪುರ ಬಳಿ ನಡೆದಿದೆ.
ಮೃತರನ್ನು ಪರ್ವತರಂ ಶ್ರೀರಾಮ್ ಮತ್ತು ಅಪ್ರಾಪ್ತ ಬಾಲಕಿ ಎಂದು ಪೊಲೀಸರು ತಿಳಿಸಿದ್ದಾರೆ.
ನೆಲಗೊಂಡ ಜಿಲ್ಲೆಯ ಜೆಬಿ ನಗರದ ನಿವಾಸಿ ಶ್ರೀರಾಮ್ ಸರಪಲ್ಲಿಯಲ್ಲಿ ಸೈಕಲ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಅಂಗಡಿಗೆ ಹೋಗಿ ಬರುತ್ತಿದ್ದಾಗ ಅಪ್ರಾಪ್ತ ಬಾಲಕಿಯ ಪರಿಚಯವಾಗಿದ್ದು, ನಂತರದ ದಿನಗಳಲ್ಲಿ ಅವರಿಬ್ಬರ ಮಧ್ಯೆ ಸ್ನೇಹ ಬೆಳೆದು ಪ್ರೀತಿಗೆ ತಿರುಗಿತ್ತು.
ಇವರಿಬ್ಬರ ಪ್ರೀತಿಯ ವಿಷಯ ಮನೆಯವರಿಗೆ ಗೊತ್ತಾಗಿದೆ. ಅಪ್ರಾಪ್ತ ಬಾಲಕಿಯಾಗಿದ್ದರಿಂದ ಪೋಷಕರು ಮದುವೆಗೆ ವ್ಯಕ್ತಪಡಿಸಿದ್ದಾರೆ. ಇದರ ನಡುವೆ ಇವರ ಸ್ನೇಹಿತರು ಇವರಿಬ್ಬರಿಗೂ ಮದುವೆ ಮಾಡಿಸಲು ಲಕ್ಷಾಂತರ ಹಣವನ್ನು ಕೂಡ ಸಂಗ್ರಹಿಸಿದ್ದರು ಎನ್ನಲಾಗಿದೆ.
ಎರಡು ಕುಟುಂಬದವರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ತಾವು ಒಂದಾಗಲು ಸಾಧ್ಯವಿಲ್ಲವೆಂದು ನೊಂದು ಆತಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.
ಪ್ರೇಮಿಗಳು ಡೆತ್‌ನೋಟ್ ಬರೆದಿಟ್ಟು ಕಾರಿನೊಳಗೆ ಬೆಂಕಿ ಹಚ್ಚಿಕೊಂಡು ಆತಹತ್ಯೆ ಮಾಡಿಕೊಂಡಿದ್ದಾರೆ.
ನಡುರಸ್ತೆಯಲ್ಲಿ ಕಾರು ಹೊತ್ತಿಉರಿಯುತ್ತಿದ್ದದ್ದನ್ನು ನೋಡಿ ಸಮೀಪವೇ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ರೈತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರ ನಡುವೆ ಬಕೆಟ್‌ಗಳಲ್ಲಿ ನೀರು ತಂದು ಬೆಂಕಿ ಆರಿಸಲು ಕೂಡ ಪ್ರಯತ್ನಿಸಿದರಾದರೂ ಬೆಂಕಿ ಜ್ವಾಲೆ ಹೆಚ್ಚಾಗಿದ್ದರಿಂದ ಅದು ವಿಫಲವಾಗಿದೆ.
ಸ್ಥಳಕ್ಕೆ ದಾವಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಬೆಂಕಿಯನ್ನು ನಂದಿಸುವಷ್ಟರಲ್ಲಿ ಪ್ರೇಮಿಗಳು ಸಜೀವ ದಹನವಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.