ನವದೆಹಲಿ,ಜ.8- ಚುನಾವಣೆಯಲ್ಲಿ ಉಚಿತ ಯೋಜನೆಗಳಿಗೆ ಹಣವನ್ನು ಹಂಚಿಕೆ ಮಾಡುವ ರಾಜ್ಯಸರ್ಕಾರದ ವಿರುದ್ಧ ಚಾಟಿ ಬೀಸಿರುವ ಸುಪ್ರೀಂಕೋರ್ಟ್ ನ್ಯಾಯಾಧೀಶರಿಗೆ ಸಂಬಳ ಮತ್ತು ಪಿಂಚಣಿ ನೀಡಲು ಹಿಂದೆಮುಂದೆ ನೋಡುತ್ತಿರುವುದೇಕೆ ಎಂದು ಪ್ರಶ್ನಿಸಿದೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಗವಾಯಿ ಮತ್ತು ಎಜಿ ಮಸಿಹಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಅಖಿಲ ಭಾರತ ನ್ಯಾಯಾಧೀಶರ ಸಂಘ ಸಲ್ಲಿಸಿದ್ದ ಮೇಲನವಿ ಅರ್ಜಿಯನ್ನು ವಿಚಾರಣೆ ನಡೆಸುವ ವೇಳೆ ಕೆಲವು ರಾಜ್ಯಸರ್ಕಾರಗಳು ಚುನಾವಣೆಯಲ್ಲಿ ಮತ ಪಡೆಯಲು ಉಚಿತವಾದ ಯೋಜನೆಗಳನ್ನು ಜಾರಿ ಮಾಡುತ್ತಿವೆ ಎಂದು ತರಾಟೆಗೆ ತೆಗೆದುಕೊಂಡಿದ್ದರು.
ದೇಶದಲ್ಲಿ ಅನೇಕ ನ್ಯಾಯಮೂರ್ತಿಗಳಿಗೆ ಅಸಮರ್ಪಕ ವೇತನ ಮತ್ತು ನಿವೃತ್ತಿ ಯೋಜನೆಗಳ ಸರಿಯಾದ ಹಣವನ್ನು ನೀಡುತ್ತಿಲ್ಲ. ಆದರೆ ಚುನಾವಣೆ ಬಂದ ತಕ್ಷಣ ಮತದಾರರಿಗೆ ನಾನಾ ರೀತಿಯ ಯೋಜನೆಗಳನ್ನು ಕೊಡುತ್ತೀರಿ. ನ್ಯಾಯಾಧೀಶರಿಗೆ ಸೌಲಭ್ಯಗಳನ್ನು ಕೊಡಲು ಸರ್ಕಾರದ ಬಳಿ ಹಣ ಇಲ್ಲವೇ ಎಂದು ಪ್ರಶ್ನಿಸಿದರು.
ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಅಲ್ಲಿನ ಆಡಳಿತಾರೂಢ ಮಹಾಯುತಿ ಸರ್ಕಾರವು ಲಡ್ಕಿ ಬೆಹಿನ್ ಯೋಜನೆಯನ್ನು ಜಾರಿ ಮಾಡಿತು. ಅದೇ ರೀತಿ ದೆಹಲಿಯಲ್ಲಿ ಎಎಪಿ ಮತ್ತು ಕಾಂಗ್ರೆಸ್ ಕೂಡ ಅನೇಕ ಯೋಜನೆಗಳನ್ನು ಜಾರಿಗೆ ತರುವುದಾಗಿ ಘೋಷಿಸಿದೆ. ನಿಮಗೆ ಇದಕ್ಕೆ ಮಾತ್ರ ಹಣ ಇರುತ್ತದೆ. ನ್ಯಾಯಾಧೀಶರಿಗೆ ಕೊಡಲು ಹಣ ಇಲ್ಲವೇ ಎಂದು ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡರು.
ದೆಹಲಿಯಲ್ಲಿ ಎಎಪಿ ಮುಖ್ಯಮಂತ್ರಿ ಮಹಿಳಾ ಸಮಾನ್ ಯೋಜನೆ ಜಾರಿ ಮಾಡುವುದಾಗಿ ಘೋಷಿಸಿದೆ. ಇದರಡಿ ಮಹಿಳೆಯರಿಗೆ ಮಾಸಿಕ 2,100 ರೂ. ಆರ್ಥಿಕ ನೆರವು ನೀಡುತ್ತೀರಿ. ಅದೇ ರೀತಿ ಕಾಂಗ್ರೆಸ್ ಕೂಡ ಪ್ರತಿ ತಿಂಗಳು 2,500 ಸಾವಿರ ನೀಡುವ ಯೋಜನೆಯನ್ನು ಘೋಷಣೆ ಮಾಡಿದೆ. ನಿಮ ಯೋಜನೆಗಳಿಗೆ ನಾವು ಅಡ್ಡಿಪಡಿಸುವುದಿಲ್ಲ. ಆದರೆ ನ್ಯಾಯಾಂಗದ ಹಿತ ಕಾಪಾಡುವ ನ್ಯಾಯಾಧೀಶರಿಗೆ ಸೌಲಭ್ಯಗಳನ್ನು ಕೊಡಬೇಕಲ್ಲವೇ ಎಂದು ನ್ಯಾಯಾಧೀಶರು ಪ್ರಶ್ನೆ ಮಾಡಿದ್ದಾರೆ.