Friday, January 10, 2025
Homeರಾಜ್ಯಎಂಟು ಭ್ರಷ್ಟ ಸರ್ಕಾರಿ ಅಧಿಕಾರಿಗಳ ಮೇಲೆ `ಲೋಕಾ' ದಾಳಿ

ಎಂಟು ಭ್ರಷ್ಟ ಸರ್ಕಾರಿ ಅಧಿಕಾರಿಗಳ ಮೇಲೆ `ಲೋಕಾ’ ದಾಳಿ

Lokayukta raids eight corrupt government officials

ಬೆಂಗಳೂರು, ಜ.8– ಇಂದು ಮುಂಜಾನೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭ್ರಷ್ಟ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ದೂರುಗಳು ಬಂದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿ ಇಂದು ಎಂಟು ಅಧಿಕಾರಿಗಳ ಅಕ್ರಮ ಸಂಪಾದನೆಯನ್ನು ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರು, ಚಿಕ್ಕಮಗಳೂರು, ಬೀದರ್, ಬೆಳಗಾವಿ, ತುಮಕೂರು, ಬಳ್ಳಾರಿ, ರಾಯಚೂರು, ಗದಗ ಸೇರಿದಂತೆ 25ಕ್ಕೂ ಹೆಚ್ಚು ಕಡೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.ಬೆಂಗಳೂರಿನಲ್ಲಿ ಸಾರಿಗೆ ಇಲಾಖೆ ಜಂಟಿ ನಿರ್ದೇಶಕಿ ಶೋಭಾ ಅವರ ನಿವಾಸ ಹಾಗೂ ಎಂಎಸ್ ಬಿಲ್ಡಿಂಗ್ನಲ್ಲಿರುವ ಕಚೇರಿಯಲ್ಲಿ ಬೆಂಗಳೂರು ಲೋಕಾಯುಕ್ತ ಎಸ್ಪಿ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗಿದೆ. ಶೋಭಾ ಅವರ ನಿವಾಸದಲ್ಲಿ ಲೋಕಾಯುಕ್ತ ಅಧಿಕಾರಿಗಳು ಪ್ರವೇಶಿಸುತ್ತಿ
ದ್ದಂತೆಯೇ ಬೆಚ್ಚಿಬಿದ್ದ ಕುಟುಂಬಸ್ಥರು ಗಾಬರಿಗೊಂಡಿದ್ದಾರೆ.

ನಂತರ ಪರಿಶೀಲನೆ ವೇಳೆ ಅಪಾರ ಪ್ರಮಾಣದ ಚಿನ್ನಾಭರಣ ಕೆಲ ಆಸ್ತಿ ದಾಖಲೆಗಳು ಪತ್ತೆಯಾಗಿದ್ದು, ಕೆಲವು ಐಷಾರಾಮಿ ವಸ್ತುಗಳ ಮೌಲ್ಯ ಮಾಡಲಾಗುತ್ತಿದೆ.
ಇವರು ಹಲವೆಡೆ ಕೃಷಿ ಜಮೀನಿನನ್ನು ಕೂಡ ಹೊಂದಿದ್ದು, ಅದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ವೈದ್ಯಾಧಿಕಾರಿ ಡಾ. ಉಮೇಶ್ ಅವರ ನಿವಾಸದಲ್ಲಿ ಪರಿಶೀಲನೆ ವೇಳೆ ಹಲವು ಸರ್ಕಾರಿ ಕಡತಗಳು ಪತ್ತೆಯಾಗಿದೆ. ಇದಲ್ಲದೇ ಅವರು ಕಾರ್ಯನಿರ್ವಹಿಸುತ್ತಿದ್ದ ಕಚೇರಿಯಲ್ಲೂ ಕೂಡ ಕೆಲ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಗೋಲ್ಮಾಲ್ ನೀಡಿದೆ ಎಂದು ದೂರುಗಳ ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿ ದಾಳಿ ನಡೆಸಿದ್ದಾರೆ.

ಮನೆಯಲ್ಲಿ ಸಂಗ್ರಹಿಸಿದ್ದ ಕೆಲವು ವೈದ್ಯಕೀಯ ವಸ್ತುಗಳನ್ನು ಕೂಡ ಜಪ್ತಿ ಮಾಡಲಾಗಿದೆ. ಮತ್ತು ಚರಾಕ್ಷರ ಆಸ್ತಿಗಳನ್ನು ಕೂಡ ಪತ್ತೆ ಮಾಡಲಾಗಿದೆ. ಚಿಕ್ಕಮಗಳೂರು ಎಸ್ಪಿ ಮತ್ತು ಡಿವೈಎಸ್ಪಿ ಗಳು ಭಾಗಿಯಾಗಿದ್ದಾರೆ. ಇನ್ನು ಬೀದರ್ ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ರವೀಂದ್ರ ಅವರ ನಿವಾಸ ಹಾಗೂ ಕಚೇರಿಯಲ್ಲಿ ಪರಿಶೀಲನೆ ವೇಳೆ ಅಪಾರ ಪ್ರಮಾಣದ ಹಣದ ಕಂತೆಗಳು ಪತ್ತೆಯಾಗಿವೆ.

ಹಣ, ಆಭರಣಗಳು ಹಾಗೂ ವಿದೇಶಿ ಹಣ ಕೂಡ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಇವರು ತೋಟದ ಮನೆ ಹಾಗೂ ಕೆಲ ರಿಯಲ್ ಎಸ್ಟೇಟ್ ವ್ಯವಹಾರಗಳನ್ನು ಕೂಡ ನಡೆಸಲಾಗುತ್ತಿದೆ ಎಂದು ಪತ್ತೆಹಚ್ಚಲಾಗುತ್ತಿದೆ.

ವಿಶೇಷವಾಗಿ ಬೆಳಗಾವಿಯ ಖಾನಾಪುರದ ತಹಸೀಲ್ದಾರ್ ಪ್ರಕಾಶ್ ಶ್ರೀಧರ್ ಗಾಯ್ಕವಾಡ್ ಅವರಿಗೂ ಲೋಕಾಯುಕ್ತ ಬಿಸಿ ತಟ್ಟಿದೆ. ಅವರ ಸ್ವಂತ ಊರು ನಿಪ್ಪಾಣಿಯಲ್ಲಿರುವ ಮನೆ ಹಾಗೂ ಬೆಳಗಾವಿಯ ನಿವಾಸ ಹಾಗೂ ಅವರ ಕಚೇರಿಗಳಲ್ಲಿ ತಪಾಸಣೆ ನಡೆಸಿದ ಸಂದರ್ಭದಲ್ಲಿ ಕೆಲವು ದಾಖಲೆಗಳು ಪತ್ತೆಯಾಗಿವೆ.

ಇವರ ಸಂಬಂಧಿ ಹಾಗೂ ಏಜೆಂಟ್ ಮನೆಯ ಮೇಲೂ ಕೂಡ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿದ್ದು, ಇಲ್ಲಿ ಸಿಕ್ಕಿರುವ ಹಣ, ಚಿನ್ನಾಭರಣದ ಬಗ್ಗೆ ಮಾಹಿತಿ ನಿರೀಕ್ಷಿಸಲಾಗಿದೆ. ಲೋಕಾಯುಕ್ತ ಎಸ್ಪಿ ಹಣಮಂತರಾಯಪ್ಪ ಅವರ ನೇತೃತ್ವದಲ್ಲಿ ಡಿವೈಎಸ್ಪಿ ಪುಷ್ಪಲತಾ, ಇನ್ಸ್ಪೆಕ್ಟರ್ ನಿರಂಜನ್ ಪಾಟೀಲ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

ಇನ್ನು ನಿವೃತ್ತ ಆರ್ಟಿಓ ನಿವೃತ್ತ ಅಧಿಕಾರಿ ಎಸ್. ರಾಜು ಅವರ ತುಮಕೂರು ಹಾಗೂ ಬೆಂಗಳೂರು ನಿವಾಸದಲ್ಲಿ ಲೋಕಾಯುಕ್ತ ಕಾರ್ಯಾಚರಣೆ ಕೈಗೊಂಡಿದೆ.ತುಮಕೂರು ಆರ್ಟಿಓ ಕಚೇರಿಯ ಏಜೆಂಟ್ ಎಂದು ಹೇಳಲಾದ ಸತೀಶ್ ಮನೆ ಮತ್ತು ನಿವೃತ್ತ ಆರ್ಟಿಓ ರಾಜು ಅವರ ಬೆಂಗಳೂರು ಹಾಗೂ ಹೊಸಪೇಟೆಯ ಮನೆ ಸೇರಿದಂತೆ ಐದು ಕಡೆ ದಾಳಿ ನಡೆಸಿದ್ದಾರೆ.

ತುಮಕೂರು ಆರ್ಟಿಒ ಕಚೇರಿಯಲ್ಲಿ ಸೇವೆ ಸಲ್ಲಿಸಿದ್ದ ರಾಜು ನಿವೃತ್ತರಾಗಿದ್ದರು. ಬೆಂಗಳೂರಿನ ಮನೆ ಮತ್ತು ಬೇನಾಮಿ ಹೆಸರಿನಲ್ಲಿ ಆದಾಯಕ್ಕಿಂತ ಹೆಚ್ಚು ಆಸ್ತಿ-ಪಾಸ್ತಿ ಹೊಂದಿದ್ದಾರೆಂಬ ಆರೋಪದ ಮೇಲೆ ದಾಳಿ ನಡೆಸಿದ್ದಾರೆ.

ಅವರ ಆಪ್ತನೆಂದು ಹೇಳಲಾದ ದಿಬ್ಬೂರು ಸತೀಶ್ ಅವರ ಮನೆಯ ಮೇಲೂ ಕೂಡ ಲೋಕಾಯುಕ್ತ ಇನ್ಸ್ಪೆಕ್ಟರ್ ಶಿವರುದ್ರಪ್ಪ ಮೇಟಿ ನೇತೃತ್ವದಲ್ಲಿ ದಾಳಿ ನಡೆದಿದೆ.
ಲೋಕಾಯುಕ್ತ ಎಸ್ಪಿ ಲಕ್ಷ್ಮೀನಾರಾಯಣ್, ಡಿವೈಎಸ್ಪಿ ರಾಮಕೃಷ್ಣ, ಇನ್ಸ್ಪೆಕ್ಟರ್ಗಳಾದ ಸಲೀಂ, ಸುರೇಶ್ ಗೌಡ ಮತ್ತು ಸಿಬ್ಬಂದಿ ಬೆಂಗಳೂರಿನ ವಿಡಿಯಾ ಲೇಔಟ್ ನಾಗರಬಾವಿ ಮನೆಯಲ್ಲಿ ದಾಖಲಾತಿಗಳನ್ನು ಪರಿಶೀಲನೆ ನಡೆಸಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕಿದ್ದಾರೆ.

ಹಲವೆಡೆ ನಿವೇಶನಗಳು ಮತ್ತು ತೋಟ ಸೇರಿದಂತೆ ಹಲವೆಡೆ ಹೂಡಿಕೆ ಮಾಡಿರುವುದು ತಿಳಿದು ಬಂದಿದೆ. ಬಳ್ಳಾರಿಯಲ್ಲಿ ಹಿಂದುಳಿದ ವರ್ಗಗಳ ಇಲಾಖೆ ಕಲ್ಯಾಣಾಧಿಕಾರಿ ಲೋಕೇಶ್ ಅವರ ನಿವಾಸ ಹಾಗೂ ಕಚೇರಿಗಳಲ್ಲಿ ಲೋಕಾಯುಕ್ತ ತಪಾಸಣೆ ವೇಳೆ ಅಪಾರ ಪ್ರಮಾಣದ ಅಕ್ರಮ ಸಂಪತ್ತು ಬೆಳಕಿಗೆ ಬಂದಿದೆ.

ಚಿನ್ನಾಭರಣಗಳು ಮತ್ತು ಹಲವೆಡೆ ವಾಣಿಜ್ಯ ಕಟ್ಟಡಗಳು ಹೊಂದಿರುವುದು ಪತ್ತೆಯಾಗಿದೆ. ರಾಯಚೂರಿನಲ್ಲಿ ಬೆಸ್ಕಾಂ ಜೂನಿಯರ್ ಎಂಜಿನಿಯರ್ ಹುಲಿರಾಜ್ ಅವರ ನಗರ ನಿವಾಸ ಹಾಗೂ ಕಚೇರಿ ಸೇರಿದಂತೆ ಹಲವೆಡೆ ಲೋಕಾಯುಕ್ತ ಎಸ್ಪಿ ನೇತೃತ್ವದಲ್ಲಿ ದಾಳಿ ನಡೆದಿದೆ.
ಹಲವಾರು ಕಡೆ ಕೃಷಿ ಜಮೀನು ಹಾಗೂ ಪ್ಲಾಟ್ಗಳು ಸೇರಿದಂತೆ ಆಸ್ತಿ ದಾಖಲೆಗಳನ್ನು ಪತ್ತೆ ಹಚ್ಚಲಾಗಿದೆ.

ಗದಗ ಬೆಟ್ಟಗೇರಿ ನಗರಸಭೆಯ ಎಂಜಿನಿಯರ್ ಹುಚ್ಚೇಸ್ ಬಂಡಿವಡ್ಡರ್ ಅವರ ನಗರ ಸಭೆ ಕಚೇರಿಯಲ್ಲಿ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡು ಮನೆಯಲ್ಲಿ ಇದ್ದಂತಹ ಕೆಲ ಕಾಗದ ಪತ್ರಗಳನ್ನು ಪರಿಶೀಲಿಸಲಾಗಿದೆ.ಇವರಿಗೆ ಗದಗ ಸೇರಿದಂತೆ ಹಲವೆಡೆ ವಾಣಿಜ್ಯ ಕಟ್ಟಡಗಳು, ನಿವೇಶನಗಳು ಸೇರಿದಂತೆ ಹಲವು ಆಸ್ತಿಗಳನ್ನು ಪತ್ತೆಹಚ್ಚಲಾಗಿದೆ.

RELATED ARTICLES

Latest News