ಬೆಂಗಳೂರು,ಜ.24-ಅಕ್ರಮ ಬಾಂಗ್ಲಾ ನಿವಾಸಿಗಳ ಬಗ್ಗೆ ಮಾಹಿತಿ ನೀಡಿದರೆ ಪೊಲೀಸರು ನನಗೆ ಹಾಗೂ ನನ್ನ ಕುಟುಂಬಕ್ಕೆ ತೊಂದರೆ ನೀಡುತ್ತಿದ್ದಾರೆಂದು ಆರೋಪಿಸಿ ವೈದ್ಯರೊಬ್ಬರು ವಿಧಾನ ಸೌಧದ ಎದುರೇ ವಿಷ ಕುಡಿದು ಆತಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಆತಹತ್ಯೆಗೆ ಯತ್ನಿಸಿದ ವೈದ್ಯರನ್ನು ಸಂಜಯನಗರದ ನಿವಾಸಿ ಡಾ.ನಾಗೇಂದ್ರಪ್ಪ ಎಂದು ಗುರುತಿಸಲಾಗಿದೆ.
ಏಕಾಏಕಿ ವಿಧಾನ ಸೌಧದ ಮುಂದೆ ವಿಷ ಕುಡಿಯಲು ಯತ್ನಿಸಿದ್ದ ನಾಗೇಂದ್ರಪ್ಪ ಅವರ ಕೈಯಲ್ಲಿದ್ದ ವಿಷದ ಬಾಟಲಿಯನ್ನು ಸ್ಥಳದಲ್ಲಿದ್ದ ಪೊಲೀಸರು ಕಸಿದುಕೊಂಡು ತಕ್ಷಣ ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ವಿಷ ಕುಡಿಯುವ ಮುನ್ನ ನಾಗೇಂದ್ರಪ್ಪ ನಾನು ನಗರದಲ್ಲಿ ನೆಲೆಸಿರುವ ಅಕ್ರಮ ಬಾಂಗ್ಲಾ ನಿವಾಸಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಪೊಲೀಸರಿಗೆ ನೀಡುತ್ತಿದ್ದೆ.ಈ ಕಾರಣಕ್ಕಾಗಿ ಪೊಲೀಸರೇ ನನಗೆ ಕಿರುಕುಳ ನೀಡಲು ಆರಂಭಿಸಿದರು. ಪ್ರತಿನಿತ್ಯ 15 ರಿಂದ 20 ಕ್ಕೂ ಹೆಚ್ಚು ಪೊಲೀಸರು ಮನೆಯ ಬಾಗಿಲಿಗೆ ಬಂದು ಕಿರುಕುಳ ನೀಡುತ್ತಿದ್ದರು.
ಇದೇ ವಿಷಯಕ್ಕೆ ನನ್ನ ಮೇಲೆ ಹಲ್ಲೆ ಸಹ ನಡೆಸಲಾಗಿದೆ. ಜೊತೆಗೆ ನನ್ನ ಕುಟುಂಬದವರಿಗೂ ಹಿಂಸೆ ನೀಡಿದ್ದಾರೆಂದು ಆರೋಪಿಸಿ ನಾಗೇಂದ್ರಪ್ಪ ವಿಷ ಸೇವಿಸಲು ಮುಂದಾಗಿದ್ದರು. ಅಕ್ರಮ ನಿವಾಸಿಗಳನ್ನು ಹೊರ ಕಳುಹಿಸುವ ಹೋರಾಟ ಮಾಡಲು ಮುಂದಾಗಿದ್ದೇ ನನ್ನ ತಪ್ಪಾ..! ಎಂದು ಕಣ್ಣೀರು ಸುರಿಸುತ್ತಾ ನಾಗೇಂದ್ರಪ್ಪ ವಿಷ ಕುಡಿಯಲು ಮುಂದಾದರು ಎಂದು ಸ್ಥಳದಲ್ಲಿದ್ದವರು ತಿಳಿಸಿದ್ದಾರೆ.
