Saturday, January 11, 2025
Homeರಾಜಕೀಯ | Politicsಸಚಿವರು, ಶಾಸಕರ, ಪ್ರಮುಖರ ಸಭೆ ರದ್ದುಗೊಂಡಿಲ್ಲ : ಗೃಹ ಸಚಿವ ಪರಮೇಶ್ವರ್

ಸಚಿವರು, ಶಾಸಕರ, ಪ್ರಮುಖರ ಸಭೆ ರದ್ದುಗೊಂಡಿಲ್ಲ : ಗೃಹ ಸಚಿವ ಪರಮೇಶ್ವರ್

ministers, MLAs And, leaders Meeting not cancelled: Home Minister Parameshwara

ಬೆಂಗಳೂರು,ಜ.8- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಸಚಿವರು, ಶಾಸಕರು ಮತ್ತು ಪ್ರಮುಖರ ಸಭೆಯನ್ನು ರದ್ದುಗೊಳಿಸಿಲ್ಲ. ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಸಭೆಯನ್ನು ಯಾರಾದರೂ ವಿರೋಧಿಸಿದರೆ ಅವರಿಗೆ ತಕ್ಕ ಉತ್ತರ ನೀಡುವ ಸಾಮರ್ಥ್ಯ ನಮಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ನಿಷ್ಠುರವಾಗಿ ಪ್ರತಿಕ್ರಿಯಿ ಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿತ್ರದುರ್ಗ ಸಮಾವೇಶದ ಹಿನ್ನೆಲೆಯಲ್ಲಿ ಸಮುದಾಯದ ಬಹಳಷ್ಟು ಬೇಡಿಕೆಗಳು ಈಡೇರಿವೆ. ಅವುಗಳ ಬಗ್ಗೆ ಚರ್ಚೆ ನಡೆಸಲು ಸಭೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ತಡರಾತ್ರಿ ಸಭೆ ನಿಗದಿಯಾಗಿದ್ದರಿಂದಾಗಿ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಅದನ್ನು ಬೇರೆ ರೀತಿ ವ್ಯಾಖ್ಯಾನಿಸುವ ಅಗತ್ಯವಿಲ್ಲ. ಇದು ರಾಜಕೀಯ ಪ್ರೇರಿತ ಅಲ್ಲ ಎಂದರು.

ಇದು ಆಂತರಿಕವಾದ ಸಭೆಯಾದ್ದರಿಂದ ಹೈಕಮಾಂಡ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ನಿನ್ನೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ತಮಗೆ ಕರೆ ಮಾಡಿ ತಾವು ಸಭೆಯಲ್ಲಿ ಭಾಗವಹಿಸಲು ಆಸಕ್ತಿ ಹೊಂದಿದ್ದೇನೆ ಎಂದು ಹೇಳಿದ್ದರು. ಸಭೆಗೆ ಬರುವಂತೆ ಅವರಿಗೆ ಕರೆ ನೀಡಲಾಯಿತು. ಆದರೆ ಸದ್ಯಕ್ಕೆ ಕಾಲಾವಕಾಶ ಇಲ್ಲ. ಹಾಗಾಗಿ ಸಭೆಯನ್ನು ಮುಂದೂಡಿ ಎಂದು ಕರೆ ನೀಡಿದರು.

ನಮ್ಮ ಸಭೆಗೆ ಹೈಕಮಾಂಡ್ ನಾಯಕರು ಭಾಗವಹಿಸುವುದಾದರೆ ಅದು ಇನ್ನೂ ಒಳ್ಳೆಯದು. ಹೀಗಾಗಿ ಸಭೆಯನ್ನು ಮುಂದೂಡಲಾಗಿದೆ. ಮುಂದಿನ ದಿನಗಳಲ್ಲಿ ಸಮಯ ನೋಡಿಕೊಂಡು ಸಭೆ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದರು.ಸಭೆಯನ್ನು ನಿಲ್ಲಿಸಲು ಬೇರೆಯವರು ಪ್ರಭಾವ ಬೀರಿದ್ದಾರೆ ಎಂಬ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದ ಅವರು, ಒಂದು ವೇಳೆ ಗೊತ್ತಿದ್ದರೂ ಎಲ್ಲವನ್ನೂ ಹೇಳಲಾಗುವುದಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು.

ಸಭೆ ನಡೆಸುವುದು ರಹಸ್ಯವೇನಲ್ಲ. ನಾವು ರಾಜಕಾರಣ ಮಾಡಬೇಕು ಎಂದಾದರೆ ಬಹಿರಂಗವಾಗಿಯೇ ಮಾಡುತ್ತೇವೆ. ನಾಲ್ಕು ಗೋಡೆ ಮಧ್ಯೆ ರಹಸ್ಯ ಸಭೆ ನಡೆಸುವ ಅಗತ್ಯ ನಮಗಿಲ್ಲ. ದಲಿತ ಸಮುದಾಯದಲ್ಲಿ ಅನೇಕ ಸಮಸ್ಯೆಗಳಿವೆ. ಇದರ ಬಗ್ಗೆ ಚರ್ಚೆ ಮಾಡುವುದು ತಪ್ಪೇನೂ ಅಲ್ಲ ಎಂದು ಹೇಳಿದರು.

ಸಭೆ ಮಾಡುವುದನ್ನು ಸಹಿಸುವುದಿಲ್ಲ ಎಂದು ಯಾರಾದರೂ ಹೇಳಿದರೆ ಅದಕ್ಕೆ ಉತ್ತರ ನೀಡುವ ಸಾಮರ್ಥ್ಯ ನಮಗಿದೆ. ಈವರೆಗೂ ಆ ರೀತಿ ಯಾರೂ ಹೇಳಿಲ್ಲ. ಸಭೆ ನಡೆಸಲು ಬಿಡಬಾರದು ಎಂಬ ಉದ್ದೇಶ ಯಾರಿಗಾದರೂ ಇದ್ದರೆ ಮುಂದಿನ ದಿನಗಳಲ್ಲಿ ಕಾದುನೋಡುತ್ತೇವೆ.

ಸದ್ಯಕ್ಕೆ ಸಭೆ ಮುಂದೂಡುವುದಾಗಿ ತಿಳಿಸಿದ್ದು, ಮುಂದಿನ ದಿನಗಳಲ್ಲಿ ಸಭೆಗೆ ಅಡ್ಡಿಪಡಿಸುವುದೇ ನಿಜವಾದ ಉದ್ದೇಶವಾಗಿದ್ದರೆ ಅದಕ್ಕೆ ತಕ್ಕ ಉತ್ತರ ನೀಡುವ ಸಾಮರ್ಥ್ಯ ನಮಗಿದೆ ಎಂದರು.
ನಾವು ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಭೆ ಕರೆದಿದ್ದೆವು. ಅದನ್ನು ಡಿನ್ನರ್ ಮೀಟಿಂಗ್ ಎಂದು ಮಾಧ್ಯಮಗಳು ಬೇರೆ ರೀತಿ ವ್ಯಾಖ್ಯಾನಿಸಿದರು. ನಮ ಬಳಿ ಆ ರೀತಿಯ ರಹಸ್ಯ ಕಾರ್ಯಸೂಚಿಗಳಿರಲಿಲ್ಲ ಎಂದು ತಿಳಿಸಿದರು.

ಚಿಕ್ಕಮಗಳೂರಿನಲ್ಲಿ ನಕ್ಸಲರು ಶರಣಾಗುತ್ತಿದ್ದಾರೆ. ಸದ್ಯಕ್ಕೆ ಅಷ್ಟು ಮಾತ್ರ ಹೇಳಲು ಸಾಧ್ಯ. ನಕ್ಸಲರಿಗೆ ನಾವು ಯಾವ ರೀತಿ ಭರವಸೆಗಳನ್ನು ನೀಡಿದ್ದೇವೆ ಎಂಬುದರ ಬಗ್ಗೆ ಹೇಳಲು ಸಾಧ್ಯವಿಲ್ಲ.

ಶರಣಾಗಲು ನಕ್ಸಲರಿಗೆ ಕರೆ ನೀಡಲಾಗಿತ್ತು. ಕಾಡಲ್ಲಿದ್ದು ಜೀವನ ನಡೆಸುವುದು ಬೇಡ. ಸಮಾಜದ ಮುಖ್ಯವಾಹಿನಿಗೆ ಬನ್ನಿ ಎಂದು ತಿಳಿಹೇಳಿದ್ದೆವು. ಪೊಲೀಸ್ ಇಲಾಖೆಯ ನಕ್ಸಲ್ನಿಗ್ರಹ ಪಡೆ ಕೂಡ ಈ ನಿಟ್ಟಿನಲ್ಲಿ ಕೆಲಸ ಮಾಡಿತ್ತು. ಹೀಗಾಗಿ ನಕ್ಸಲರು ಶರಣಾಗುತ್ತಿದ್ದಾರೆ. ಅದರ ಬಳಿಕ ಮುಂದಿನ ಪ್ರಕ್ರಿಯೆಗಳನ್ನು ನಡೆಸಲಾಗುವುದು ಎಂದರು.

ಗುತ್ತಿಗೆ ಕಾಮಗಾರಿಗೆ ಮಾರ್ಗಸೂಚಿ ದರವನ್ನು ಹೆಚ್ಚು ಮಾಡಿ ಟೆಂಡರ್ ನೀಡುತ್ತಿರುವುದರ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಹೇಳಿದರು.ಬಿಬಿಎಂಪಿ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. ಕೇಂದ್ರ ಸರ್ಕಾರ ನೀಡಿರುವ ಹಣ ಉಪಯೋಗ ಅಥವಾ ದುರುಪಯೋಗದ ಬಗ್ಗೆ ಪರಿಶೀಲನೆ ನಡೆಸಲು ಜಾರಿನಿರ್ದೇಶನಾಲಯದ ಅಧಿಕಾರಿಗಳು ಆಗಮಿಸಿದ್ದಾರೆ ಎಂಬ ಮಾಹಿತಿ ಮೇಲ್ನೋಟಕ್ಕೆ ಸಿಕ್ಕಿದೆ. ಅದರ ಹೊರತಾಗಿ ಜಾರಿ ನಿರ್ದೇಶನಾಲಯ ತಮನ್ನು ಕೇಳಿ ಯಾವುದೇ ದಾಳಿ ನಡೆಸುವುದಿಲ್ಲ ಎಂದರು.

RELATED ARTICLES

Latest News