Friday, January 10, 2025
Homeಬೆಂಗಳೂರುಟ್ಯೂಷನ್‌ಗೆ ಬರುತ್ತಿದ್ದ ವಿದ್ಯಾರ್ಥಿನಿಯೊಂದಿಗೆ ಪರಾರಿಯಾಗಿದ್ದ ಶಿಕ್ಷಕ ಅರೆಸ್ಟ್

ಟ್ಯೂಷನ್‌ಗೆ ಬರುತ್ತಿದ್ದ ವಿದ್ಯಾರ್ಥಿನಿಯೊಂದಿಗೆ ಪರಾರಿಯಾಗಿದ್ದ ಶಿಕ್ಷಕ ಅರೆಸ್ಟ್

Teacher arrested who absconded with student

ಬೆಂಗಳೂರು,ಡಿ.8- ಟ್ಯೂಷನ್ಗೆ ಬರುತ್ತಿದ್ದ 10ನೇ ತರಗತಿ ವಿದ್ಯಾರ್ಥಿನಿಗೆ ಪುಸಲಾಯಿಸಿ ಕರೆದೊಯ್ದಿದ್ದ ಶಿಕ್ಷಕನನ್ನು ಜೆಪಿನಗರ ಠಾಣೆ ಪೊಲೀಸರು ಬಂಧಿಸಿ ವಿದ್ಯಾರ್ಥಿನಿಯನ್ನು ಬಾಲಮಂದಿರಕ್ಕೆ ಕಳುಹಿಸಿದ್ದಾರೆ.

ಜೆಪಿನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು 1ರಿಂದ10ನೇ ತರಗತಿವರೆಗೆ ಟ್ಯೂಷನ್ ಮಾಡುತ್ತಿದ್ದ ಅಭಿಷೇಕ್ಗೌಡ(35) ಮೂಲತಃ ಕನಕಪುರ ತಾಲ್ಲೂಕಿನ ದೊಡ್ಡಸಾತೇನಹಳ್ಳಿ ನಿವಾಸಿ.
ಅಭಿಷೇಕ ಗೌಡ ಪದವಿ ಪೂರ್ಣಗೊಳಿಸಿಲ್ಲ. 6 ತಿಂಗಳು ನ್ಯೂಟ್ರಿಷಿಯನ್ ಕೋರ್ಸ್ ಮಾಡಿಕೊಂಡಿದ್ದಾನೆ. ಈತನಿಗೆ ಈಗಾಗಲೇ ಮದುವೆಯಾಗಿದ್ದು, ಒಂದು ಮಗುವಿದೆ. ದಂಪತಿ ನಡುವೆ ಮನಸ್ತಾಪದಿಂದಾಗಿ ಈತನನ್ನು ತೊರೆದು ಪತ್ನಿ ತವರುಮನೆ ಸೇರಿದ್ದಾರೆ.

ಟ್ಯೂಷನ್ಗೆ ಬರುತ್ತಿದ್ದ 10ನೇ ತರಗತಿ ವಿದ್ಯಾರ್ಥಿನಿಯ ಮನವೊಲಿಸಿ ನ.23ರಂದು ಸಂಜೆ ಈಕೆಯನ್ನು ಕರೆದುಕೊಂಡು ನಾಪತ್ತೆಯಾಗಿದ್ದ. ಹೋಗುವಾಗ ಮನೆಯಲ್ಲಿ ಫೋನ್ ಬಿಟ್ಟು 70 ಸಾವಿರ ಹಣದೊಂದಿಗೆ ಇವರಿಬ್ಬರೂ ಕಣರೆಯಾಗಿದ್ದರು. ಇವರು ಎಟಿಎಂ ಬಳಸುತ್ತಿರಲಿಲ್ಲ. ಹಾಗಾಗಿ ಪತ್ತೆಹಚ್ಚಲು ಪೊಲೀಸರಿಗೆ ಕಷ್ಟವಾಗಿತ್ತು.

ಜೆಪಿನಗರ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿನಿ ನಾಪತ್ತೆ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಇವರಿಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದರು. ಅಲ್ಲದೆ ಇವರ ಪತ್ತೆಗೆ ಲುಕೌಟ್ ನೋಟಿಸ್ ಹೊರಡಿಸಿದ್ದರು.

ಅಭಿಷೇಕ ಗೌಡ ವಿದ್ಯಾರ್ಥಿನಿ ಜೊತೆ ಮಳವಳ್ಳಿಗೆ ಹೋಗಿ ಬಾಡಿಗೆ ಮನೆ ಮಾಡಿಕೊಂಡು ನೆಲೆಸಿದ್ದರು. ಮನೆ ಮಾಲೀಕರು ಲುಕೌಟ್ ನೋಟಿಸ್ನಲ್ಲಿರುವವರು ನಮ ಮನೆಯಲ್ಲಿ ಬಾಡಿಗೆಗೆ ಇರುವವರೆಂದು ಗುರುತಿಸಿ ತಕ್ಷಣ ಮಳವಳ್ಳಿ ಪೊಲೀಸರಿಗೆ ತಿಳಿಸಿದ್ದಾರೆ.

ಮಳವಳ್ಳಿ ಪೊಲೀಸರು ಜೆಪಿನಗರ ಠಾಣೆಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಪೊಲೀಸರು ಮಳವಳ್ಳಿಗೆ ತೆರಳಿ ಇಬ್ಬರನ್ನು ವಶಕ್ಕೆ ಪಡೆದು ವಿದ್ಯಾರ್ಥಿನಿ ಪೋಷಕರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನಗರಕ್ಕೆ ಕರೆತಂದು ವಿದ್ಯಾರ್ಥಿನಿಯನ್ನು ಬಾಲಮಂದಿರಕ್ಕೆ ಕಳುಹಿಸಿ ಅಭಿಷೇಕಗೌಡನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

RELATED ARTICLES

Latest News