ಬೆಂಗಳೂರು,ಜ.8– ಬಿಜೆಪಿಯ ಆಂತರಿಕ ಸಂಘರ್ಷದ ಹಿನ್ನೆಲೆಯಲ್ಲಿ ಬಿಬಿಎಂಪಿ ಮೇಲೆ ಜಾರಿನಿರ್ದೇಶನಾಲಯದ ದಾಳಿಯಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ವ್ಯಾಖ್ಯಾನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜೆಪಿಯ ಕೆಲವು ನಾಯಕರು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಿಲ್ಲ ಎಂದು ದೂರು ನೀಡಿದ್ದರು. ಬಿಜೆಪಿ ಶಾಸಕರ ಕ್ಷೇತ್ರದಲ್ಲಿ ಕೆಲವು ವಿಚಾರಗಳಿಗೆ ಸಂಬಂಧಪಟ್ಟಂತೆ ಆರೋಪಗಳಿದ್ದವು ಎಂದರು.
ಒಂದೂವರೆ ವರ್ಷಗಳಿಂದಲೂ ಇದರ ಬಗ್ಗೆ ಮಾಹಿತಿ ಇತ್ತು. ಅಧಿಕಾರಿಗಳು ತಮ ಬಳಿ ವಿಷಯ ಪ್ರಸ್ತಾಪಿಸಿದಾಗ ಜಾರಿನಿರ್ದೇಶನಾಲಯದ ಅಧಿಕಾರಿಗಳು ಕೇಳುವ ಎಲ್ಲಾ ದಾಖಲೆಗಳನ್ನು ಕೊಡಲು ಸೂಚನೆ ನೀಡಿದ್ದೇನೆ. ನಾವು ಮಾಹಿತಿ ಹಕ್ಕಿನಡಿಯೇ ದಾಖಲೆಗಳನ್ನು ನೀಡುತ್ತೇವೆ. ಅದೇ ರೀತಿ ತನಿಖಾ ಸಂಸ್ಥೆಗಳಿಗೂ ಕೊಡುತ್ತೇವೆ ಎಂದರು.
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅವರ ಕರ್ತವ್ಯವನ್ನು ಅವರು ಮಾಡುತ್ತಾರೆ. ಯಾರು ತಪ್ಪು ಮಾಡಿರುತ್ತಾರೋ, ಅವರು ಶಿಕ್ಷೆ ಅನುಭವಿಸುತ್ತಾರೆ, ಅದಕ್ಕೇಕೆ ಯೋಚನೆ ಮಾಡಬೇಕು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರ ನೇತೃತ್ವದಲ್ಲಿನ ಡಿನ್ನರ್ ಮೀಟಿಂಗ್ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನಾನು ಪ್ರವಾಸದಲ್ಲಿದ್ದೆ. ಭಾರತಕ್ಕೆ ವಾಪಸ್ ಬಂದಾಗ ದೆಹಲಿಯಲ್ಲಿ ವಿಧಾನಸಭೆ ಚುನಾವಣೆ ಕುರಿತು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದೆ. ನನಗೆ ಸಭೆಯ ಬಗ್ಗೆಯಾಗಲೀ, ಅದು ರದ್ದುಗೊಂಡಿರುವ ಕುರಿತಾಗಲೀ ಯಾವುದೇ ಮಾಹಿತಿ ಇಲ್ಲ ಎಂದರು.