Friday, January 10, 2025
Homeರಾಷ್ಟ್ರೀಯ | National20 ವರ್ಷಗಳಿಂದ ಫ್ರಿಡ್ಜ್ ನಲ್ಲಿತ್ತು ಮನುಷ್ಯರ ತಲೆಬುರುಡೆ, ಅಸ್ಥಿಪಂಜರಗಳು

20 ವರ್ಷಗಳಿಂದ ಫ್ರಿಡ್ಜ್ ನಲ್ಲಿತ್ತು ಮನುಷ್ಯರ ತಲೆಬುರುಡೆ, ಅಸ್ಥಿಪಂಜರಗಳು

ತಿರುವನಂತಪುರಂ, ಜ.9- ಕಳೆದ 20 ವರ್ಷಗಳಿಂದ ಕೇರಳದಲ್ಲಿ ಪಾಳು ಬಿದ್ದ ಮನೆಯ ಫ್ರಿಡ್ಜ್ ನಲ್ಲಿ ಮನುಷ್ಯರ ತಲೆಬುರುಡೆ ಮತ್ತು ಆಸ್ಥಿಪಂಜರ ಪತ್ತೆಯಾಗಿದೆ. ಇದು ಕೊಲೆ ಇರಬಹುದು ಎಂದು ಅಭಿಪ್ರಾಯಪಟ್ಟಿರುವ ಚೊಟ್ಟಣಿಕ್ಕರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಅಸ್ಥಿಯನ್ನು ಮಾನವನ ಮೂಳೆಗಳು ಎಂದು ಗುರುತಿಸಲಾಗಿದೆ. ಫೋರೆನ್ಸಿಕ್‌ ವಿಶ್ಲೇಷಣೆಯ ಮೂಲಕ ನಿಖರವಾದ ವಯಸ್ಸನ್ನು ಪರಿಶೀಲಿಸಬೇಕಾಗಿದೆ ಎಂದಿರುವ ಪೊಲೀಸರು ಇದನ್ನು ಶೈಕ್ಷಣಿಕ ಉದ್ದೇಶಗಳಿಗಾಗಿಯೂ ಬಳಸಿರಬಹುದು ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.

ವಿಧಿವಿಜ್ಞಾನ ತಂಡವು ತಲೆಬುರುಡೆ ಮತ್ತು ಅಸ್ಥಿಪಂಜರದ ಭಾಗಗಳನ್ನು ಪರೀಕ್ಷಿಸಿ, ಮರಣೋತ್ತರ ಪರೀಕ್ಷೆಗೆ ಒಳಪಡಿಸಿದೆ. ಅವುಗಳನ್ನು ಶೈಕ್ಷಣಿಕ ಉದ್ದೇಶಗಳಿಗಾಗಿ ಬಳಸಿರುವ ಸಾಧ್ಯತೆ ಇದೆ. ಅಸ್ಥಿಪಂಜರ, ತಲೆಬುರುಡೆ ಮಹಿಳೆಯರದ್ದು, ಆದರೆ ಅವುಗಳು ಒಬ್ಬರದ್ದಲ್ಲ. ಅವುಗಳ ವಯಸ್ಸು ಮತ್ತು ಮೂಲವನ್ನು ಪತ್ತೆ ಹಚ್ಚುವುದು ಕಠಿಣವಾದರೂ ಈ ಬಗ್ಗೆ ಕೂಡ ಪರಿಶೀಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಎರುವೇಲಿ ಪೂರ್ವದ ಚೊಟ್ಟಣಿಕ್ಕರ ಅರಮನೆ ಚೌಕದಲ್ಲಿರುವ 12 ಎಕರೆ ಜಾಗದಲ್ಲಿ ಪಾಳು ಬಿದ್ದ ಮನೆಯಿದೆ. ಈ ಆಸ್ತಿ ವೈದ್ಯ ಮಂಗಳಶ್ಶೇರಿ ಫಿಲಿಪ್‌ ಜಾನ್‌ ಅವರಿಗೆ ಸೇರಿದ್ದಾಗಿದೆ. ಕಳೆದ 20 ವರ್ಷಗಳಿಂದ ಮನೆಯಲ್ಲಿ ಯಾರೂ ವಾಸವಿರಲಿಲ್ಲ. ಆದರೂ ಮನೆಗೆ ಮೂಳೆಗಳು ಹೇಗೆ ಬಂದಿವೆ? ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಮನೆಯ ಮಾಲೀಕರು, ವೈದ್ಯರು ಮತ್ತು ನೆರೆಹೊರೆಯವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಾಳು ಬಿದ್ದ ಮನೆಯಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿ ಸ್ಥಳೀಯ ಪಾಲಿಕೆ ಸದಸ್ಯೆ ಇಂದಿರಾ ಧರ್ಮರಾಜನ್‌ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಮನೆಯನ್ನು ಪರಿಶೀಲನೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

RELATED ARTICLES

Latest News