ಹಾಸನ,ಜ.10- ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದ್ದು, ಸಮಯಪ್ರಜ್ಞೆಯಿಂದ ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಂದು ಮುಂಜಾನೆ ಚಿಕ್ಕಮಗಳೂರಿನಿಂದ ಸುಬ್ರಮಣ್ಯಕ್ಕೆ ಡಾ.ಶೇಷಾದ್ರಿ ಅವರು ಪತ್ನಿಯೊಂದಿಗೆ ಕಿಯಾ ಕಾರಿನಲ್ಲಿ ಹೋಗುತ್ತಿದ್ದರು. ಮಾರ್ಗಮಧ್ಯೆ ಬೇಲೂರು ತಾಲ್ಲೂಕಿನ ಕಡೆಗರ್ಜೆ ಗ್ರಾಮದ ಬಳಿ ಏಕಾಏಕಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ತಕ್ಷಣ ರಸ್ತೆಬದಿ ಕಾರು ನಿಲ್ಲಿಸಿ ದಂಪತಿ ಕೆಳಗಿಳಿದು ಪ್ರಾಣ ರಕ್ಷಿಸಿಕೊಂಡಿದ್ದಾರೆ. ನೋಡನೋಡುತ್ತಿದ್ದಂತೆ ಕೆಲವೇ ಕ್ಷಣಗಳಲ್ಲಿ ಇಡೀ ಕಾರಿಗೆ ವ್ಯಾಪಿಸಿದ ಬೆಂಕಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಮುಂಜಾನೆಯಾದ್ದರಿಂದ ಅಷ್ಟಾಗಿ ದಾರಿಯಲ್ಲಿ ಯಾರೂ ಸಾಗುತ್ತಿರಲಿಲ್ಲ. ಹಾಗಾಗಿ ಸಹಾಯಕ್ಕೆ ಸ್ಥಳೀಯರು ಧಾವಿಸಿಲ್ಲ. ಕೆಲಕಾಲ ಅಸಹಾಯಕರಾಗಿ ಸ್ಥಳದಲ್ಲೇ ನಿಂತು ನಂತರ ಪೊಲೀಸ್ ಠಾಣೆಗೆ ತೆರಳಿ ದಂಪತಿ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಅರೆಹಳ್ಳಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದು, ಕಾರಿನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಈ ಅವಘಡ ಸಂಭವಿಸಿರಬಹುದು ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.