Friday, January 10, 2025
Homeರಾಜ್ಯಡಿಜಿಟಲ್‌ ಅರೆಸ್ಟ್‌ ವಂಚನೆಯಿಂದ ಪಾರಾದ ವೃದ್ಧೆ : 1.35 ಕೋಟಿ ರಕ್ಷಣೆ

ಡಿಜಿಟಲ್‌ ಅರೆಸ್ಟ್‌ ವಂಚನೆಯಿಂದ ಪಾರಾದ ವೃದ್ಧೆ : 1.35 ಕೋಟಿ ರಕ್ಷಣೆ

ಮಂಗಳೂರು, ಜ.10- ಮಂಗಳೂರಿನ ಎಚ್‌.ಡಿ.ಎಫ್‌.ಸಿ. ಬ್ಯಾಂಕ್‌ ಕಂಕನಾಡಿ ಶಾಖೆಯ ಮ್ಯಾನೇಜರ್‌ ಅವರ ಸಮಯ ಪ್ರಜ್ಞೆಯಿಂದ ವೃದ್ಧೆಯೊಬ್ಬರು ಡಿಜಿಟಲ್‌ ಅರೆಸ್ಟ್‌ ವಂಚನೆಯಿಂದ ಕಳೆದುಕೊಳ್ಳುತ್ತಿದ್ದ 1.35 ಕೋಟಿ ರೂ. ರಕ್ಷಣೆಯಾಗಿದೆ. ಬ್ಯಾಂಕಿನ ಹಿರಿಯ ಗ್ರಾಹಕಿಯೊಬ್ಬರು ಎಚ್‌.ಡಿ.ಎಫ್‌.ಸಿ. ಬ್ಯಾಂಕ್‌ ಕಂಕನಾಡಿ ಶಾಖೆಯಲ್ಲಿ 1.35 ಕೋಟಿ ರೂ. ಫಿಕ್ಸೆಡ್‌ ಡಿಪಾಸಿಟ್‌ ಇರಿಸಿದ್ದರು ಮತ್ತು ಬ್ರಾಂಚ್‌ ಮ್ಯಾನೇಜರ್‌ ಅವರಲ್ಲಿ ಬಂದು ತಕ್ಷಣವೇ ಹಣವನ್ನು ನೀಡುವಂತೆ ಕೋರಿದರು. ಗ್ರಾಹಕರು ಬಹಳ ಆತಂಕದಿಂದ ಇರುವುದನ್ನು ಕಂಡ ಶಾಖೆಯ ಮ್ಯಾನೇಜರ್‌ ಏನೋ ತಪ್ಪಾಗಿದೆ ಎಂದು ಗ್ರಹಿಸಿದರು.

ಮತ್ತೊಬ್ಬರೊಂದಿಗೆ ಗ್ರಾಹಕರು ಕರೆಯಲ್ಲಿ ನಿರತರಾಗಿದ್ದನ್ನು ಗಮನಿಸಿದ್ದು ಹಾಗೂ ಆಗಾಗ್ಗೆ ಪಾವತಿಯ ಪ್ರಗತಿಯ ಬಗ್ಗೆ ಅಪ್ಡೇಟ್‌ ಮಾಡುತ್ತಿದ್ದುದನ್ನು ಗಮನಿಸಿದ ಮ್ಯಾನೇಜರ್‌ ಅವರಿಗೆ ಅದು ಸೈಬರ್‌ ವಂಚನೆ (ಡಿಜಿಟಲ್‌ ಅರೆಸ್ಟ್‌) ಎಂಬ ಅನುಮಾನ ಬಂದಿತು. ಬ್ರಾಂಚ್‌ ಮ್ಯಾನೇಜರ್‌ ಗ್ರಾಹಕಿಯೊಂದಿಗೆ ಮಾತನಾಡಿದಾಗ ಸೈಬರ್‌ ವಂಚಕರು ಕಾರ್ಯಾಚರಣೆ ನಡೆಸುತ್ತಿದ್ದ ಅನುಮಾನ ಬಂದಿತು. ತಕ್ಷಣವೇ ಅವರು ಮಂಗಳೂರಿನ ನಗರ ಕ್ರೈಮ್‌ ಬ್ರಾಂಚ್‌ ಸಂಪರ್ಕಿಸಿದರು. ಪೊಲೀಸರು ನಂಬರ್‌ ಬ್ಲಾಕ್‌ ಮಾಡಲು ಮತ್ತು ಪ್ರಕರಣ ವರದಿ ಮಾಡಲು ಗ್ರಾಹಕರಿಗೆ ನೆರವಾದರು.

ವಂಚಕರು ವೃದ್ಧೆ ಗ್ರಾಹಕಿಯನ್ನು ಪೊಲೀಸ್‌‍ ಅಧಿಕಾರಿಗಳು ಎಂದು ಹೇಳಿ ವಂಚಿಸಲು ಪ್ರಯತ್ನಿಸುತ್ತಿದ್ದರು. ಅವರು ಜಾರಿ ನಿರ್ದೇಶನಾಲಯ(ಇ.ಡಿ.)ದ ದಾಳಿಯಲ್ಲಿ ಅವರು ಈ ಗ್ರಾಹಕರಿಗೆ ಸೇರಿದ 300-400 ಡೆಬಿಟ್‌ ಕಾರ್ಡ್‌ಗಳು ಸಿಕ್ಕಿದ್ದು ಅದರಲ್ಲಿ ಒಂದು ಈ ಗ್ರಾಹಕಿಗೆ ಸೇರಿದೆ ಎಂದು ಹೇಳಿದರು. ಅವರು ಗ್ರಾಹಕಿಯ ಖಾತೆಯನ್ನು ಹಣ ವರ್ಗಾವಣೆಗೆ ಬಳಲಾಗುತ್ತಿದ್ದು ಅದನ್ನು ಮತ್ತಷ್ಟು ತನಿಖೆ ಮಾಡಲಾಗುತ್ತಿದೆ ಎಂದು ಹೇಳಿದ್ದರು.

ನಂತರ ವಂಚಕರು ಆರ್‌.ಬಿ.ಐ. ಖಾತೆ ಎಂದು ಹೇಳಿ ಅದಕ್ಕೆ ಹಣ ಕಳಿಸುವಂತೆ ಒತ್ತಾಯಿಸಿದರು. ಗ್ರಾಹಕಿಗೆ ಈ ವ್ಯವಹಾರದಲ್ಲಿ ಪಾಲಿಲ್ಲವಾದರೆ ಬಡ್ಡಿ ಸಮೇತ ಹಣ ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದರು. ವಂಚಕರು ವಿಡಿಯೋ ಕಾಲ್‌ ನಲ್ಲಿ ಪೊಲೀಸ್‌‍ ಅಧಿಕಾರಿಗಳಂತೆ ಬಟ್ಟೆ ಧರಿಸಿದ್ದರು ಮತ್ತು ಸುಳ್ಳು ಅರೆಸ್ಟ್‌ ವಾರೆಂಟ್‌ ಪ್ರದರ್ಶಿಸಿದರು.

RELATED ARTICLES

Latest News