Friday, January 10, 2025
Homeರಾಜ್ಯಬಿ ವೈ ವಿಜಯೇಂದ್ರ ಸಭೆಗೆ ನಿರೀಕ್ಷೆಗೂ ಮೀರಿ ಬೆಂಬಲ

ಬಿ ವೈ ವಿಜಯೇಂದ್ರ ಸಭೆಗೆ ನಿರೀಕ್ಷೆಗೂ ಮೀರಿ ಬೆಂಬಲ

ಬೆಂಗಳೂರು,ಜ.10- ಮುಂಬರುವ ಜಿಲ್ಲಾ, ತಾಲ್ಲೂಕು ಪಂಚಾಯತ್‌, ಬಿಬಿಎಂಪಿ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಹತ್ವದ ಸಭೆ ನಡೆಸಿದರು. ನಗರದ ಖಾಸಗಿ ಹೋಟೆಲ್‌ನಲ್ಲಿ ಕರೆಯಲಾಗಿದ್ದ ಮಾಜಿ ಶಾಸಕರು, ಮಾಜಿ ವಿಧಾನಪರಿಷತ್‌ ಸದಸ್ಯರು ಹಾಗೂ ಪಕ್ಷದ ಕೆಲವು ಪದಾಧಿಕಾರಿಗಳಿಗೆ ಮಾತ್ರ ಭೋಜನಕೂಟಕ್ಕೆ ಆಹ್ವಾನ ಕೊಡಲಾಗಿತ್ತು.

ವಿಜಯೇಂದ್ರ ರಾಜ್ಯಾಧ್ಯಕ್ಷರಾದ ನಂತರ ನಡೆದ ಮೊದಲ ಭೋಜನಕೂಟಕ್ಕೆ ಮಾಜಿ ಶಾಸಕರು, ಮಾಜಿ ವಿಧಾನಪರಿಷತ್‌ಸದಸ್ಯರು, ಪಕ್ಷದ ಪ್ರಮುಖರು ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಭಾಗಿಯಾಗಿದ್ದರು.
ಮೇಲ್ನೋಟಕ್ಕೆ ಇದೊಂದು ಪಕ್ಷ ಸಂಘಟನೆ ಕುರಿತಾಗಿ ನಡೆಯಲಿರುವ ಸಭೆ ಎಂದು ಹೇಳಲಾಗಿತ್ತಾದರೂ ತಮ್ಮ ನಾಯಕತ್ವದ ವಿರುದ್ಧ ಕತ್ತಿ ಮಸೆಯುತ್ತಿರುವ ಬಸನಗೌಡ ಪಾಟೀಲ್‌ ಯತ್ನಾಳ್‌, ರಮೇಶ್‌ ಜಾರಕಿಹೊಳಿ, ಅರವಿಂದ ಲಿಂಬಾವಳಿ ಸೇರಿದಂತೆ ಮತ್ತಿತರ ಭಿನ್ನಮತೀಯರಿಗೆ ತಿರುಗೇಟು ನೀಡುವ ನೆಪದಲ್ಲೇ ಸಭೆ ಆಯೋಜಿಸಲಾಗಿತ್ತು.

ವಿಜಯೇಂದ್ರ ಬಣದಲ್ಲಿ ಗುರುತಿಸಿಕೊಂಡಿರುವ ಪ್ರಮುಖರೊಬ್ಬರು ಖುದ್ದು ಆಸಕ್ತಿ ವಹಿಸಿ ಮಾಜಿ ಶಾಸಕರು ಮತ್ತು ಮಾಜಿ ವಿಧಾನಪರಿಷತ್‌ ಸದಸ್ಯರು ಹಾಗೂ ಮಾಜಿ ಸಚಿವರನ್ನು ಸಭೆಗೆ ಆಹ್ವಾನಿಸಿದ್ದರು. ಭೋಜನಕೂಟಕ್ಕೆ ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಪ್ರಮುಖರು ಭಾಗವಹಿಸುವ ಮೂಲಕ ವಿಜಯೇಂದ್ರ ನಾಯಕತ್ವಕ್ಕೆ ಬಹುತೇಕರು ಬಹುಪರಾಕ್‌ ಹೇಳಿದ್ದಾರೆ. 2028ರ ವಿಧಾನಸಭಾ ಚುನಾವಣೆವರೆಗೂ ವಿಜಯೇಂದ್ರ ನಾಯಕತ್ವ ಬದಲಾವಣೆ ಮಾಡಬಾರದು. ಅವರ ಮುಂದಾಳತ್ವದಲ್ಲೇ ಚುನಾವಣೆ ಎದುರಿಸೋಣ. ಸಾಧ್ಯವಾದರೆ ಪಕ್ಷದ ವರಿಷ್ಠರನ್ನು ಭೇಟಿಯಾಗಿ ಮನವರಿಕೆ ಮಾಡಿಕೊಡುವ ತೀರ್ಮಾನಕ್ಕೂ ಬರಲಾಗಿದೆ ಎಂದು ತಿಳಿದುಬಂದಿದೆ.

ಯತ್ನಾಳ್‌ ಮತ್ತು ಅವರ ತಂಡ ನಡೆಸುತ್ತಿರುವ ಪ್ರತ್ಯೇಕ ಹೋರಾಟಕ್ಕೆ ಶೀಘ್ರದಲ್ಲೇ ಕಡಿವಾಣ ಹಾಕಬೇಕು. ಇದರಿಂದಾಗಿ ಪಕ್ಷದ ಸಂಘಟನೆಗೆ ಹಿನ್ನಡೆಯಾಗಿದೆ. ಪಕ್ಷದ ಚಿಹ್ನೆಯಡಿ ಎಲ್ಲಾ ಹೋರಾಟಗಳು ನಡೆಯಬೇಕು. ಪ್ರತ್ಯೇಕವಾಗಿ, ವೈಯಕ್ತಿಕವಾಗಿ ನಡೆಸಲು ಅವಕಾಶ ಕೊಡದಂತೆ ವರಿಷ್ಠರಿಗೆ ಮನವರಿಕೆ ಮಾಡಿಕೊಡುವುದರ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಯತ್ನಾಳ್‌ ಮತ್ತು ಅವರ ತಂಡ ಪ್ರತ್ಯೇಕವಾಗಿ ನಡೆಸುತ್ತಿರುವ ಹೋರಾಟದಿಂದಾಗಿ ಪಕ್ಷದ ಸಂಘಟನೆಗೆ ಹಿನ್ನಡೆಯಾಗಿದೆ. ಕಾರ್ಯಕರ್ತರಲ್ಲಿ ಹಿನ್ನಡೆ ಉಂಟಾಗಿದೆ. ನಾವು ಕಾಂಗ್ರೆಸ್‌‍ ಸರ್ಕಾರದ ವೈಫಲ್ಯಗಳ ಚಕಾರ ಎತ್ತಿದರೆ ಮೊದಲು ನಿಮ್ಮ ತಟ್ಟೆಯಲ್ಲಿ ಕತ್ತೆ ಬಿದ್ದಿದೆ. ನಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ಏಕೆ ನೋಡುತ್ತೀರಿಎಂದು ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕೆಂದು ಸಭೆಯಲ್ಲಿ ಒತ್ತಾಯಿಸಿದ್ದಾರೆ.

ಇದನ್ನು ವರಿಷ್ಠರ ಗಮನಕ್ಕೂ ತರಲಾಗಿದೆ. ಶೀಘ್ರದಲ್ಲಿಯೇ ಎಲ್ಲವೂ ಸುಖಾಂತ್ಯ ಕಾಣಲಿದೆ. ಕಾಂಗ್ರೆಸ್‌‍ ಸರ್ಕಾರದ ಆಸೆ-ಆಮಿಷಗಳಿಗೆ ಬಲಿಯಾಗಿ ಪಕ್ಷ ಬಿಡದಂತೆ ವಿಜಯೇಂದ್ರ ಮನವರಿಕೆ ಮಾಡಿಕೊಟ್ಟಿದ್ದಾರೆಂದು ಮೂಲಗಳು ತಿಳಿಸಿವೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ ಬಣದ ಮುಖಂಡರು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ದೂರು ನೀಡಿದ್ದರು.
ಇತ್ತೀಚೆಗಷ್ಟೇ ವಿಜಯೇಂದ್ರ ಅವರು ಅಮಿತ್‌ ಶಾ ಅವರನ್ನು ಭೇಟಿಯಾಗಿ ಯತ್ನಾಳ್‌ ಬಣದ ವಿರುದ್ಧ ದೂರು ನೀಡಿದ್ದರು. ಜತೆಗೆ ಇದರಿಂದ ಕಾಂಗ್ರೆಸ್‌‍ ವಿರುದ್ಧದ ಹೋರಾಟದಲ್ಲಿ ಪಕ್ಷಕ್ಕೆ ಹಿನ್ನಡೆಯಾಗುತ್ತಿದೆ ಎಂದು ಹೇಳಿಕೊಂಡಿದ್ದರು. ಅದಕ್ಕೆ ಪ್ರತಿಯಾಗಿ ಇದೀಗ ಯತ್ನಾಳ್‌ ಬಣದವರು ಪಕ್ಷದ ವರಿಷ್ಠರಿಗೆ ದೂರು ನೀಡಿರುವುದು ಕುತೂಹಲ ಮೂಡಿಸಿತ್ತು.

ವಿಜಯೇಂದ್ರ ಅವರು ಪಕ್ಷದಲ್ಲಿ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವ ಪ್ರಯತ್ನ ಮಾಡುತ್ತಿಲ್ಲ. ತಮ ಆಪ್ತರನ್ನು, ಬೆಂಬಲಿಗರನ್ನು ಮಾತ್ರ ಜತೆಗೆ ಕರೆದೊಯ್ಯುತ್ತಾರೆ. ಪಕ್ಷದ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಾಗ ಎಲ್ಲ ನಾಯಕರೊಂದಿಗೆ ಚರ್ಚೆ ನಡೆಸುವುದಿಲ್ಲ. ಇದು ಪಕ್ಷದ ಸಂಘಟನೆ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ. ಜತೆಗೆ, ಆಡಳಿತಾರೂಢ ಕಾಂಗ್ರೆಸ್‌‍ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಹೀಗಾಗಿ, ಸರ್ಕಾರದ ವೈಫಲ್ಯಗಳ ವಿರುದ್ಧದ ಹೋರಾಟ ತಾರ್ಕಿಕ ಅಂತ್ಯಕ್ಕೆ ತಲುಪುತ್ತಿಲ್ಲ. ಕೇವಲ ಮಾಧ್ಯಮಗಳ ಹೇಳಿಕೆ, ಪ್ರಸಾರಕ್ಕೆ ಮಾತ್ರ ಸೀಮಿತವಾಗುತ್ತಿದೆ ಎಂದು ಯತ್ನಾಳ ಬಣದ ಮುಖಂಡರು ಅಮಿತ್‌ ಶಾ ಎದುರು ದೂರಿದ್ದರು.

ವಿಜಯೇಂದ್ರ ನಾಯಕತ್ವದ ವಿರುದ್ಧ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ ಬಣದ ಮುಖಂಡರು ಅಭಿಪ್ರಾಯ ಸಂಗ್ರಹಿಸಲು ಜಿಲ್ಲಾ ಪ್ರವಾಸ ಆರಂಭಿದ್ದಾರೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ಪಕ್ಷದ ಮಾಜಿ ಸಚಿವರು ಹಾಗೂ ಶಾಸಕರ ವಿಶ್ವಾಸ ಗಳಿಸಲು ಈ ಔತಣಕೂಟ ಏರ್ಪಡಿಸಲಾಗಿತ್ತು ಎಂದು ಹೇಳಲಾಗಿದೆ.

RELATED ARTICLES

Latest News