Friday, January 10, 2025
Homeಇದೀಗ ಬಂದ ಸುದ್ದಿನಗರದಲ್ಲಿ ಗಂಭೀರ ಪ್ರಕರಣಗಳು, ಅಪಘಾತಗಳು ಕಡಿಮೆಯಾಗಿವೆ : ಪೊಲೀಸ್‌‍ ಆಯುಕ್ತ ಬಿ.ದಯಾನಂದ

ನಗರದಲ್ಲಿ ಗಂಭೀರ ಪ್ರಕರಣಗಳು, ಅಪಘಾತಗಳು ಕಡಿಮೆಯಾಗಿವೆ : ಪೊಲೀಸ್‌‍ ಆಯುಕ್ತ ಬಿ.ದಯಾನಂದ

ಬೆಂಗಳೂರು,ಜ.10- ನಗರದಲ್ಲಿ ಗಂಭೀರ ಪ್ರಕರಣಗಳು ಹಾಗೂ ಅಪಘಾತಗಳು ಕಡಿಮೆಯಾಗಿವೆ ಎಂದು ನಗರ ಪೊಲೀಸ್‌‍ ಆಯುಕ್ತ ಬಿ.ದಯಾನಂದ ಅವರು ತಿಳಿಸಿದರು. ಆಡುಗೋಡಿಯಲ್ಲಿನ ನಗರ ಸಶಸ್ತ್ರ ಮೀಸಲು ಪಡೆಯ ಕವಾಯಿತು ಮೈದಾನದಲ್ಲಿ ಇಂದು ಏರ್ಪಡಿಸಿದ್ದ ಮಾಸಿಕ ಕವಾಯಿತಿನಲ್ಲಿ ಅವರು ವಂದನೆ ಸ್ವೀಕರಿಸಿ ಮಾತನಾಡುತ್ತಿದ್ದರು. ಪ್ರಮುಖವಾಗಿ ನಮಗೆ ಮಾದಕ ವಸ್ತು ಸಾಗಾಣೆ ಮತ್ತು ಮಾರಾಟ ಪ್ರಕರಣಗಳು ಸವಾಲಾಗಿತ್ತು. ಈಗಾಗಲೇ ಸಾಕಷ್ಟು ನಿಯಂತ್ರಣ ಮಾಡಿದ್ದೇವೆ. ಅಲ್ಲದೆ ಸೈಬರ್‌ ಪ್ರಕರಣಗಳ ಹಾವಳಿಯನ್ನು ತಹಬದಿಗೆ ತರಲಾಗುತ್ತಿದೆ ಎಂದರು.

ಪ್ರಮುಖವಾಗಿ ಬೆಂಗಳೂರು ನಗರದಲ್ಲಿ ಮಹಿಳೆಯರ ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗಿದೆ. ಪೊಲೀಸರ ಕಾರ್ಯ ಮಹತ್ತರವಾಗಿದೆ. ಬೆಂಗಳೂರು ನಗರ ಮಹಿಳೆಯರಿಗೆ ಅತ್ಯಂತ ಸುರಕ್ಷಿತವಾಗಿದೆ ಎಂದು ಅವರು ಹೇಳಿದರು. ಕಳೆದ ವರ್ಷ ಹಲವು ಸವಾಲುಗಳನ್ನು ಎದುರಿಸಿದ್ದೇವೆ. ಹಲವು ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ. ವರ್ಷಗಟ್ಟಲೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು.

ನಗರ ಪೊಲೀಸರು ಕರ್ತವ್ಯ ನಿರ್ವಹಣೆಯಲ್ಲಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪೊಲೀಸ್‌‍ ಸಿಬ್ಬಂದಿಗಳ ಕಾರ್ಯ ವೈಖರಿಯನ್ನು ಹಿರಿಯ ಅಧಿಕಾರಿಗಳು ಪ್ರಶಂಶಿಸಿದ್ದಾರೆ. ಇದೇ ರೀತಿ ಮುಂದೆಯೋ ಕರ್ತವ್ಯ ನಿರ್ವಹಿಸುವಂತೆ ಆಯುಕ್ತರು ಕಿವಿ ಮಾತು ಹೇಳಿದರು.

ಆಡಳಿತ ಪಾರದರ್ಶಕವಾಗಿರಲಿ :
ಪೊಲೀಸರ ಕಾರ್ಯವೈಖರಿಗೆ ಮುಖ್ಯಮಂತ್ರಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪೊಲೀಸರ ಕೆಲಸ ಕಾರ್ಯಗಳು ಪಾರದರ್ಶಕ ಹಾಗೂ ಜನಸ್ನೇಹಿಯಾಗಬೇಕು ಎಂದರು. ನಗರದಲ್ಲಿ ಸಂಚಾರ ನಿರ್ವಹಣೆ ದೊಡ್ಡ ಸವಾಲಾಗಿದ್ದು, ಸಂಚಾರಿ ಪೊಲೀಸರು ಉತ್ತಮವಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಅಪಾಯಕಾರಿ ವೀಲಿಂಗ್‌ ಪ್ರಕರಣಗಳನ್ನು ಪತ್ತೆಹಚ್ಚಿ ಸಾಕಷ್ಟು ನಿಯಂತ್ರಣಕ್ಕೆ ತರಲಾಗುತ್ತಿದೆ ಎಂದು ಅವರು ಹೇಳಿದರು.

ಸಿಸಿ ಕ್ಯಾಮರಾ ನೆರವು : ನಗರದ ಹಲವೆಡೆ ನಡೆದಿರುವ ಪ್ರಕರಣಗಳನ್ನು ಸಿಸಿ ಕ್ಯಾಮರಾ ನೆರವಿನಿಂದ ಪತ್ತೆಹಚ್ಚಿದ್ದು, ನಮಗೆ ಕ್ಯಾಮರಾಗಳಿಂದ ಸಾಕಷ್ಟು ಸಹಾಯವಾಗಿದೆ. ನಗರದೆಲ್ಲೆಡೆ ಇದುವರೆಗೂ ಒಟ್ಟು 3.50 ಲಕ್ಷ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಒಂದೂವರೆ ಲಕ್ಷ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗುವುದು. ಒಟ್ಟಾರೆ 5 ಲಕ್ಷ ಸಿಸಿ ಕ್ಯಾಮರಾ ಅಳವಡಿಸಲು ಕ್ರಮ ಕೈಗೊಳ್ಳುವುದಾಗಿ ಅವರು ಇದೇ ವೇಳೆ ತಿಳಿಸಿದರು.

ಪೊಲೀಸ್‌‍ ಅಧಿಕಾರಿ ಮತ್ತು ಸಿಬ್ಬಂದಿಗಳು ಮಾನಸಿಕ ಹಾಗೂ ದೈಹಿಕ ಸ್ವಾಸ್ಥ್ಯಕ್ಕೆ ಗಮನ ಹರಿಸಬೇಕು. ಎಲ್ಲರೂ ಕೂಡ ಉತ್ತಮ ವಾತಾವರಣದಲ್ಲಿ ಕೆಲಸ ಮಾಡಬೇಕು. ಕೆಲಸದ ಹೊರತಾಗಿ ತಮ್ಮ ಕುಟುಂಬಕ್ಕೂ ಸಮಯ ಕೊಡಬೇಕು. ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ಸಿಬ್ಬಂದಿಗಳಿ ಆಯುಕ್ತರು ಕಿವಿ ಮಾತು ಹೇಳಿದರು.

RELATED ARTICLES

Latest News