ಹಾಸನ,ಜ.11- ಜಿಲ್ಲಾ ಉಸ್ತುವಾರಿಯಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಲು ವಿಫಲರಾಗಿರುವ ಕೆ.ಎನ್ ರಾಜಣ್ಣ ಅವರು ರಾಜೀನಾಮೆ ನೀಡಲಿ ಎಂದು ಕಾಂಗ್ರೆಸ್ ಮುಖಂಡ ಬನವಾಸೆ ರಂಗಸ್ವಾಮಿ ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ ಜಿಲ್ಲಾ ಉಸ್ತುವಾರಿಯಾಗಿ ಕೆ.ಎನ್ ರಾಜಣ್ಣ ಅವರು ಅಧಿಕಾರ ಸ್ವೀಕರಿಸಿ ಸುಮಾರು ಎರಡು ವರ್ಷ ಆಗಿದೆ. ಆದರೆ ಅವರ ಕಾರ್ಯವೈಖರಿ ಸರಿ ಇಲ್ಲ, ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರ ನೋವಿಗೆ ಸ್ಪಂದಿಸುತ್ತಿಲ್ಲ. ಹಾಗೂ ಜಿಲ್ಲೆಯ ಅಭಿವೃದ್ಧಿ ಕಡೆ ಗಮನ ಹರಿಸುತ್ತಿಲ್ಲ ಎಂದು ದೂರಿದರು.
ರಾಜ್ಯದ ವರಿಷ್ಠರು ರಾಜಣ್ಣ ಅವರ ಮೇಲೆ ಭರವಸೆಯನ್ನಿಟ್ಟು ಹಾಸನ ಜಿಲ್ಲೆಗೆ ಉಸ್ತುವಾರಿಯಾಗಿ ನೇಮಿಸಿದರು. ಜಿಲ್ಲೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ಹಲವಾರು ವರ್ಷಗಳ ಕಿರುಕುಳವನ್ನು ಸಹಿಸಿಕೊಂಡಿರುವ ಕಾಂಗ್ರೆಸ್ ಕಾರ್ಯಕರ್ತರಿಗೆ ಒಳ್ಳೆಯ ಬದುಕು ಕಟ್ಟಿಕೊಡುವ ಭರವಸೆಯನ್ನು ಹೊಂದಲಾಗಿತ್ತು ಆದರೆ ಎಲ್ಲವೂ ಹುಸಿಯಾಗಿದೆ ಎಂದು ಆರೋಪಿಸಿದರು. ಜಿಲ್ಲೆಯಲ್ಲಿ ಎಚ್.ಡಿ.ಸಿ.ಸಿ ಬ್ಯಾಂಕ್ ಹಾಗೂ ಕೆಎಂಎಫ್ ಸಹಕಾರ ಖಾತೆಯಡಿ ಬಂದರೂ ಕಾಂಗ್ರೆಸ್ ಕಾರ್ಯಕರ್ತರಿಗೆ ಯಾವುದೇ ಹ್ದುೆಯನ್ನು ಪಡೆಯುವಲ್ಲಿ ರಾಜಣ್ಣ ಸಹಕರಿಸಿಲ್ಲ ಎಂದು ಆರೋಪಿಸಿದರು.
ಉಸ್ತುವಾರಿ ಬದಲಿಸುವುದೇ ಸೂಕ್ತ :
ಕೆ.ಎನ್ ರಾಜಣ್ಣ ಅವರು ಹಾಸನ ಜಿಲ್ಲಾ ಉಸ್ತುವಾರಿ ಹೊಣೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಆದ್ದರಿಂದ ಅವರು ರಾಜೀನಾಮೆ ನೀಡಬೇಕು ಹಾಗೂ ಹೈಕಮಾಂಡ್ ಸಚಿವ ಸ್ಥಾನದಿಂದ ಅವರನ್ನು ತೆರವು ಮಾಡಿದರೆ ಉತ್ತಮ ಎಂದರು. ಪತ್ರಿಕಾಗೋಷ್ಠಿಯಲ್ಲಿ ವೆಂಕಟೇಗೌಡ ,ಬೋದೇಶ್, ಚಂದ್ರಶೇಖರ, ಉಮೇಶ್, ತಲಹಾ ಇದ್ದರು.