ಭೂಪಾಲ್,ಜ.11- ಆಡಳಿತಾರೂಢ ಬಿಜೆಪಿಯ ಮಾಜಿ ಶಾಸಕನ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು( ಐಟಿ) ದಾಳಿ ನಡೆಸಿದ ಸಂದರ್ಭದಲ್ಲಿ ಭಾರೀ ಪ್ರಮಾಣದ ಆಕ್ರಮ ಸಂಪತ್ತು ಪತ್ತೆಯಾಗಿದ್ದು, ಜೊತೆಗೆ ಮೊಸಳೆ ಕಾಣಿಸಿಕೊಂಡಿರುವುದು ಅನುಮಾನಕ್ಕೆ ಕಾರಣವಾಗಿದೆ. ದಾಳಿ ವೇಳೆ ಆದಾಯ ತೆರಿಗೆ ಇಲಾಖೆಯು, ಹರ್ವಾಂಶ್ ಸಿಂಗ್ ರಾಥೋಡ್ ಮನೆಯಲ್ಲಿ 14 ಕೆಜಿಯಷ್ಟು ಚಿನ್ನ ಮತ್ತು ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಇದಲ್ಲದೇ 3.80 ಕೋಟಿಯಷ್ಟು ನಗದು ಪತ್ತೆಯಾಗಿದೆ. ಅಷ್ಟೇ ಅಲ್ಲ, ದಾಳಿ ವೇಳೆ ಐಷಾರಾಮಿ ವಾಹನಗಳೂ ಪತ್ತೆಯಾಗಿದ್ದು, ಮೊಸಳೆ ಮತ್ತು ಇತರ ಸಾಕು ಪ್ರಾಣಿಗಳು ಪತ್ತೆಯಾಗಿವೆ.
ಕೆಲವು ದೂರು ಆಧರಿಸಿ ಮಧ್ಯಪ್ರದೇಶದಲ್ಲಿ ಮಾಜಿ ಶಾಸಕರ ಮನೆಗೆ ಇದೀಗ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಹಣ ಸೇರಿ ಹಲವು ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಮೊಸಳೆಯನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಬಿಜೆಪಿ ಮಾಜಿ ಶಾಸಕ ಹರ್ವಂಶ್ ಸಿಂಗ್ ರಾಥೋಡ್ ಅವರ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದಾಗ ಮೊಸಳೆಗಳು ಮತ್ತು ಇತರ ಸರೀಸೃಪಗಳನ್ನು ಪತ್ತೆಯಾಗಿರುವ ಸುದ್ದಿ ಇದೀಗ ವರದಿಯಾಗಿದೆ. ಕೋಟ್ಯಂತರ ರೂಪಾಯಿ ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ಭಾನುವಾರದಿಂದ ರಾಥೋಡ್ ಮತ್ತು ಬೀಡಿ ತಯಾರಕ ಮತ್ತು ಕಟ್ಟಡ ಗುತ್ತಿಗೆದಾರ ಮಾಜಿ ಕೌನ್ಸಿಲರ್ ರಾಜೇಶ್ ಕೇಶರವಾಣಿಗೆ ಸಂಬಂಧಿಸಿದ ಆಸ್ತಿಗಳ ಮೇಲೆ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ತನಿಖೆ ಮುಂದುವರೆಸಿದ್ದಾರೆ.
ಹರ್ವಂಶ್ ಸಿಂಗ್ ರಾಥೋಡ್ ಅವರು ಸಾಗರದ ಬಿಜೆಪಿಯ ಪ್ರಮುಖ ನಾಯಕರಲ್ಲಿ ಒಬ್ಬರು. ಅವರು 2013 ರಿಂದ 2018 ರವರೆಗೆ ಬಂಡಾ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿದ್ದರು. 2018 ರಲ್ಲಿ ಅವರು ಬಂಡಾದಿಂದ ಚುನಾವಣೆಯಲ್ಲಿ ಸೋತರು. ಮತ್ತೆ 2023ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಅವರಿಗೆ ಟಿಕೆಟ್ ನೀಡಲಿಲ್ಲ. ಇದಲ್ಲದೆ ಹರ್ವಂಶ್ ಸಿಂಗ್ ರಾಥೋಡ್ ಎರಡು ಬಾರಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರೂ ಆಗಿದ್ದಾರೆ. ಅವರ ತಂದೆ ಹರ್ನಾಮ್ ಸಿಂಗ್ ರಾಥೋಡ್ ಮಧ್ಯಪ್ರದೇಶ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
ಮಾಜಿ ಶಾಸಕ ಹರ್ವಂಶ್ ಸಿಂಗ್ ರಾಥೋಡ್ ಮನೆಯಲ್ಲೇ ಮೊಸಳೆಗಳನ್ನು ಸಾಕುತ್ತಿದ್ದರು. ಇದನ್ನು ಕಂಡು ಐಟಿ ಅಧಿಕಾರಿಗಳು ಆರಂಭದಲ್ಲಿ ಶಾಕ್ ಆಗಿದ್ದರು. ಅಷ್ಟೇ ಅಲ್ಲ ಇದರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾಜಿ ಶಾಸಕ ಹರ್ವಂಶ್ ಸಿಂಗ್ ರಾಥೋಡ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯಾರಾಗಿದ್ದರು.