Saturday, January 24, 2026
Homeರಾಜ್ಯಹಾಸನದಲ್ಲಿ ಜೆಡಿಎಸ್‌ ಶಕ್ತಿ ಪ್ರದರ್ಶನ, ಕಾರ್ಯಕರ್ತರ ಅವಿರತ ಶ್ರಮಕ್ಕೆ ಗೌಡರ ಮೆಚ್ಚುಗೆ

ಹಾಸನದಲ್ಲಿ ಜೆಡಿಎಸ್‌ ಶಕ್ತಿ ಪ್ರದರ್ಶನ, ಕಾರ್ಯಕರ್ತರ ಅವಿರತ ಶ್ರಮಕ್ಕೆ ಗೌಡರ ಮೆಚ್ಚುಗೆ

JDS shows strength in Hassan, HD Deve Gowda praises workers for their tireless efforts

ಹಾಸನ,ಜ.24- ಜೆಡಿಎಸ್‌‍ ರಜತ ಮಹೋತ್ಸವದ ಅಂಗವಾಗಿ ಇಂದು ಜಿಲ್ಲೆಯಲ್ಲಿ ಬೃಹತ್‌ ಕಾರ್ಯಕರ್ತರ ಸಮಾವೇಶ ನಡೆಸುವ ಮೂಲಕ ಶಕ್ತಿ ಪ್ರದರ್ಶನ ನಡೆಸಲಾಯಿತು. ಜೆಡಿಎಸ್‌‍ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ನೇತೃತ್ವದಲ್ಲಿ ಇಂದು ಸಮಾವೇಶ ನಡೆಸಿ ಆಡಳಿತಾರೂಢ ಕಾಂಗ್ರೆಸ್‌‍ ವಿರುದ್ಧ ವಾಗ್ದಾಳಿ ನಡೆಸಲಾಯಿತು.ಹಾಸನದ ಹೊರವಲಯದ ಹುಡ ಬಡಾವಣೆಯಲ್ಲಿ ಸಮಾವೇಶ ಆಯೋಜಿಸಲಾಗಿತ್ತು. ಸಮಾವೇಶಕ್ಕೂ ಮುನ್ನ ದೇವೇಗೌಡರು ತಮ ಕುಲ ದೇವರಾದ ಹೊಳೆನರಸೀಪುರ
ತಾಲ್ಲೂಕಿನ ಹರದನಹಳ್ಳಿಯ ದೇವೀಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿದರು. ಬಳಿಕ ಮಾವಿನಕೆರೆಯ ರಂಗನಾಥಸ್ವಾಮಿ ದೇವಾಲಯದಲ್ಲೂ ವಿಶೇಷ ಪೂಜೆಯನ್ನು ದೇವೇಗೌಡರು ಸಲ್ಲಿಸಿದರು.

ಸಮಾವೇಶದಲ್ಲಿ ಅಳವಡಿಸಿದ್ದ ರ್ಯಾಂಪ್‌ ಮೇಲೆ ಬ್ಯಾಟರಿ ಚಾಲಿತ ಗಾಲಿ ಕುರ್ಚಿಯಲ್ಲಿ ಕುಳಿತು ಗೌಡರು ನೆರೆದಿದ್ದ ಅಪಾರ ಸಂಖ್ಯೆಯ ಕಾರ್ಯಕರ್ತರತ್ತ ಕೈಬೀಸಿ ಹರ್ಷ ವ್ಯಕ್ತಪಡಿಸುತ್ತಾ ವೇದಿಕೆಗೆ ಆಗಮಿಸಿದರು.ದೇವೇಗೌಡರೊಂದಿಗೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿಯವರು ಕೂಡ ರ್ಯಾಂಪ್‌ ಮೇಲೆ ವೇದಿಕೆಯತ್ತ ಬಂದರು.ಈ ಸಂದರ್ಭದಲ್ಲಿ ಮಾಜಿ ಸಚಿವ ಎಚ್‌.ಡಿ.ರೇವಣ್ಣ, ಶಾಸಕರಾದ ಸ್ವರೂಪ್‌ ಪ್ರಕಾಶ್‌, ಸೂರಜ್‌ ರೇವಣ್ಣ ಅವರು ಸಾಥ್‌ ನೀಡಿದರು.

ದೇವೇಗೌಡರು ವೇದಿಕೆಗೆ ಆಗಮಿಸುತ್ತಿದ್ದಂತೆ ನೆರೆದಿದ್ದ ಕಾರ್ಯಕರ್ತರು ಹಷೋದ್ಘಾರ ವ್ಯಕ್ತಪಡಿಸಿ ಸಂಭ್ರಮಿಸಿದರು.ಹಾಸನ ಜಿಲ್ಲೆಯಲ್ಲಿ ಆಡಳಿತಾರೂಢ ಕಾಂಗ್ರೆಸ್‌‍ ಈಗಾಗಲೇ ಎರಡು ಸಮಾವೇಶಗಳನ್ನು ನಡೆಸುವ ಮೂಲಕ ಜೆಡಿಎಸ್‌‍ ಭದ್ರಕೋಟೆಯನ್ನು ಭೇದಿಸಲು ಮುಂದಾಗಿತ್ತು. ಅಲ್ಲದೆ, ಪಕ್ಷಸಂಘಟನೆಗೆ ಒತ್ತು ಕೊಟ್ಟಿತ್ತು. ಇದರಿಂದ ಆಕ್ರೋಶಗೊಂಡ ಜೆಡಿಎಸ್‌‍ ವರಿಷ್ಠರು ಕಾಂಗ್ರೆಸ್‌‍ ಸಮಾವೇಶಕ್ಕಿಂತಲೂ ಮಿಗಿಲಾದ ಪಕ್ಷದ ಸಮಾವೇಶ ನಡೆಸಿ ಜೆಡಿಎಸ್‌‍ ನೆಲೆ ಹಾಸನದಲ್ಲಿ ಭದ್ರವಾಗಿದೆ ಎಂಬುದನ್ನು ಸಾಬೀತುಪಡಿಸಲು ಈ ಬೃಹತ್‌ ಸಮಾವೇಶ ನಡೆಸಿದರು.

ಸಮಾವೇಶದಲ್ಲಿ ಜೆಡಿಎಸ್‌‍ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್‌ ಬಾಬು, ಶಾಸಕರಾದ ಎ.ಮಂಜು, ಸಿ.ಎನ್‌.ಬಾಲಕೃಷ್ಣ, ಶಾರದಾ ಪೂರ್ಯನಾಯಕ್‌, ಬೋಜೇಗೌಡ, ಮಾಜಿ ಸಚಿವರಾದ ಎಚ್‌.ಕೆ.ಕುಮಾರಸ್ವಾಮಿ, ಜೆಡಿಎಸ್‌‍ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ, ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರು, ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಸೇರಿದಂತೆ ಅಪಾರ ಸಂಖ್ಯೆಯ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಿದ್ದರು.

ಜಿಲ್ಲೆಯ ವಿವಿಧ ತಾಲ್ಲೂಕು ಹಾಗೂ ಕ್ಷೇತ್ರಗಳಿಂದ ಹಾಸನಕ್ಕೆ ಜೆಡಿಎಸ್‌‍ ಕಾರ್ಯಕರ್ತರ ದಂಡೇ ಹರಿದುಬಂದಿತ್ತು. ಜನರು ಸಮಾವೇಶಕ್ಕೆ ಬರಲು ಅನುಕೂಲವಾಗುವಂತೆ ಬಸ್ಸು ಹಾಗೂ ಊಟೋಪಚಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಕಳೆದ ವಿಧಾನಸಭಾ ಹಾಗೂ ಲೋಕಸಭೆ ಚುನಾವಣೆ ನಂತರ ಜೆಡಿಎಸ್‌‍ ನಡೆಸಿದ ಬೃಹತ್‌ ಸಮಾವೇಶ ಇದಾಗಿತ್ತು. ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸುವುದು ಹಾಗೂ ಪಕ್ಷ ಸಂಘಟನೆಗೆ ಒತ್ತು ನೀಡುವುದು ಸಮಾವೇಶದ ಪ್ರಮುಖ ಉದ್ದೇಶವಾಗಿತ್ತು.ಮುಖ್ಯ ವೇದಿಕೆ ಮುಂಭಾಗದಲ್ಲಿ ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಜನರು ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗಿತ್ತು.

ಸಮಾವೇಶದ ಭದ್ರತೆಗೆ ಸುಮಾರು 1,400 ಪೊಲೀಸ್‌‍ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.ನಗರದಲ್ಲಿ ಸಮಾವೇಶಕ್ಕೆ ಆಗಮಿಸುವ ಪಕ್ಷದ ನಾಯಕರಿಗೆ ಸ್ವಾಗತ ಕೋರುವ ಫ್ಲೆಕ್ಸ್, ಬ್ಯಾನರ್‌, ಕಟೌಟ್‌ಗಳು ಕೂಡ ರಾರಾಜಿಸುತ್ತಿದ್ದವು. ಒಟ್ಟಾರೆ ಈ ಸಮಾವೇಶದ ಮೂಲಕ ಜೆಡಿಎಸ್‌‍ ಚುನಾವಣೆ ಸಿದ್ಧತೆಗೆ ನಾಂದಿ ಹಾಡಿದರೆ ಆಡಳಿತಾರೂಢ ಕಾಂಗ್ರೆಸ್‌‍ಗೆ ತಿರುಗೇಟು ನೀಡಿದೆ ಎಂದು ಬಿಂಬಿಸಲಾಗಿದೆ.

ಕಾರ್ಯಕರ್ತರ ಅವಿರತ ಶ್ರಮಕ್ಕೆ ದೇವೇ ಗೌಡರ ಮೆಚ್ಚುಗೆ

ಹಾಸನ,ಜ.24- ಜೆಡಿಎಸ್‌‍ ಪಕ್ಷ ಉಳಿಸಬೇಕೆಂಬ ಉದ್ದೇಶದಿಂದ ಜಿಲ್ಲೆಯಲ್ಲಿ ಬೃಹತ್‌ ಸಮಾವೇಶ ಆಯೋಜಿಸಲಾಗಿದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ತಿಳಿಸಿದರು. ಹೊಳೆನರಸೀಪುರದ ಹರದನಹಳ್ಳಿಯಲ್ಲಿ ಕುಲ ದೇವರು ದೇವೇಶ್ವರನಿಗೆ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು, ಮೊದಲ ಬಾರಿಗೆ ಹಾಸನದಲ್ಲಿ ಜೆಡಿಎಸ್‌‍ಗೆ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ ಬೃಹತ್‌ ಸಮಾವೇಶ ನಡೆಸಲಾಗುತ್ತಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೇಂದ್ರ ಸಚಿವ ಕುಮಾರಸ್ವಾಮಿ ಸೇರಿದಂತೆ ಎಲ್ಲಾ ನಾಯಕರು, ಮುಖಂಡರು ಬಂದಿದ್ದೇವೆ. ಕಾರ್ಯಕ್ರಮದ ಯಶಸ್ಸಿಗೆ ಜಿಲ್ಲೆಯ ನಾಯಕರು ಮತ್ತು ಕಾರ್ಯಕರ್ತರು ಶ್ರಮಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನನ್ನನ್ನು ಜಿಲ್ಲೆಯ ಜನರೇ ಬೆಳೆಸಿದ್ದಾರೆ. 93ನೇ ವಯಸ್ಸಿನಲ್ಲೂ ಬದುಕಿರಲು ಜನರ ಆಶೀರ್ವಾದವೇ ಕಾರಣ. ನನ್ನ ಜೀವನದ ಕೊನೆಯ ಉಸಿರು ಇರುವವರೆಗೂ ಅವರ ಬೆಂಬಲವನ್ನು ಮರೆಯುವುದಿಲ್ಲ ಎಂದು ಮಾಜಿ ಪ್ರಧಾನಿ ಹೇಳಿದರು.ಕಾಂಗ್ರೆಸ್‌‍ ಪಕ್ಷವು ಎರಡೂವರೆ ವರ್ಷಗಳಲ್ಲಿ ಜಿಲ್ಲೆ ಒಂದರಲ್ಲೇ ಹೆಜ್ಜೆ ಇಟ್ಟು ಜೆಡಿಎಸ್‌‍ ಮುಗಿಸಲು ಪ್ರಯತ್ನಿಸಿದೆ ಎಂದು ಅವರು ಆರೋಪಿಸಿದರು.

ಜಿಲ್ಲೆಯ ಜನರ ಬೆಂಬಲದಿಂದಲೇ ಜೆಡಿಎಸ್‌‍ ರಾಜ್ಯದಲ್ಲಿ ಹಂತ ಹಂತವಾಗಿ ಬೆಳೆದಿದೆ. ತಾವು ಸಾಮಾನ್ಯ ಶಾಸಕರಾಗಿ ಆಯ್ಕೆಯಾಗಿ, ನಂತರ ಹಂತ ಹಂತವಾಗಿ ಪ್ರಧಾನಮಂತ್ರಿ ಹುದ್ದೆಯವರೆಗೂ ಹೋಗುವ ಅವಕಾಶ ದೊರೆತಿದೆ ಎಂದು ಅವರು ಸರಿಸಿದರು.

ತಮ ರಾಜಕೀಯ ಜೀವನದ 65 ವರ್ಷಗಳಲ್ಲಿ ನೋವು-ನಲಿವು ಎರಡನ್ನೂ ಅನುಭವಿಸಿದ್ದೇನೆ. ಐಕ್ಯತೆಯಿಂದ ಎಲ್ಲರೂ ದುಡಿದಿದ್ದು, ಕಾರ್ಯಕ್ರಮ ಯಶಸ್ವಿಯಾಗಬೇಕು ಎಂಬ ಆಶಯದಿಂದ ಕಾರ್ಯಕರ್ತರೆಲ್ಲರೂ ಸಮಾವೇಶಕ್ಕೆ ಆಗಮಿಸಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

RELATED ARTICLES

Latest News