ಬೆಂಗಳೂರು,ಜ.11- ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಸ್ವತಂತ್ರ ಪರೀಕ್ಷಾ ನಿಯಂತ್ರಕರ ಹುದ್ದೆಗಳನ್ನು ಸೃಷ್ಟಿಸುವ ಮೂಲಕ ನ್ಯಾಯಯುತ ಹಾಗೂ ನಿಷ್ಪಕ್ಷಪಾತ ನೇಮಕಾತಿ ಪ್ರಕ್ರಿಯೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ರಾಜ್ಯ ಲೋಕಸೇವಾ ಆಯೋಗಗಳ ಅಧ್ಯಕ್ಷರ 25ನೇ ರಾಷ್ಟ್ರೀಯ ಸಮೇಳನದಲ್ಲಿ ಮಾತನಾಡಿದ ಅವರು, ಜನಕೇಂದ್ರಿತವಾಗಿ ಭವಿಷ್ಯದ ಸವಾಲುಗಳನ್ನು ಎದುರಿಸುವ ಆಡಳಿತ ವ್ಯವಸ್ಥೆಯನ್ನು ಕೆಪಿಎಸ್‌ಸಿ ಅಳವಡಿಸಿಕೊಳ್ಳಬೇಕು. ಉತ್ತಮ ಆಡಳಿತಕ್ಕಾಗಿ ಸರ್ಕಾರಿ ನೌಕರರಿಗೆ ಗುಣಮಟ್ಟದ ಸೇವಾ ತರಬೇತಿ ನೀಡುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಲೋಕಸೇವಾ ಆಯೋಗಗಳು ಅರ್ಹತೆ ಮತ್ತು ನ್ಯಾಯಪರತೆಯನ್ನು ಎತ್ತಿಹಿಡಿದು ಕಾರ್ಯಾಂಗಕ್ಕೆ ಅಭೂತಪೂರ್ವವಾದ ಕೊಡುಗೆ ನೀಡುವ ಪ್ರಜಾಪ್ರಭುತ್ವದ ಆಧಾರಸ್ತಂಭಗಳಾಗಿವೆ ಎಂದಿದ್ದಾರೆ. 1892 ರಲ್ಲಿ ಮೈಸೂರು ಸಿವಿಲ್ ಸರ್ವಿಸ್ ಪರೀಕ್ಷೆಗಳನ್ನು ಆಗಿನ ದಿವಾನ್ ಕೆ.ಶೇಷಾದ್ರಿ ಅಯ್ಯರ್ ಆರಂಭಿಸುವ ಮೂಲಕ ಸಾರ್ವಜನಿಕ ಸೇವೆಯಲ್ಲಿ ಕರ್ನಾಟಕಕ್ಕೆ ಶ್ರೀಮಂತ ಐತಿಹ್ಯವಿದೆ. ಈ ಮೂಲಕ ವಿಶಿಷ್ಟ ಆಡಳಿತಗಾರರ ಪಡೆಯನ್ನು ನೇಮಕಾತಿ ಮಾಡಿಕೊಳ್ಳುವ ಪ್ರಕ್ರಿಯೆಗಳಿಗೆ ಕರ್ನಾಟಕ ಭದ್ರ ಬುನಾದಿ ಹಾಕಿದ್ದು ಅದೇ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದೆ ಎಂದು ತಿಳಿಸಿದ್ದಾರೆ.
1951 ರಲ್ಲಿ ಕರ್ನಾಟಕ ಲೋಕಸೇವಾ ಆಯೋಗ ಸಾಂವಿಧಾನಿಕ ಸಂಸ್ಥೆಯಾಗಿ ಸ್ಥಾಪನೆಗೊಂಡು ಸಾಕಷ್ಟು ವಿಕಸನಗಳನ್ನು ಕಂಡಿದೆ. ದಕ್ಷತೆ ಮತ್ತು ಪಾರದರ್ಶಕತೆಯ ಗುರುತಾಗಿದೆ. ಪಿ.ಸಿ.ಹೋಟ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ನಮ ಸರ್ಕಾರ ಗ್ರೂಪ್ ಸಿ ಹುದ್ದೆಗಳ ಸಂದರ್ಶನವನ್ನು ರದ್ದುಗೊಳಿಸಿದೆ. ಗ್ರೂಪ್ ಡಿ ಹುದ್ದೆಗಳಿಗೆ ಹಾಗೂ ಗೆಜೆಟೆಡ್ ಪ್ರೊಬೇಷನರ್ ಪರೀಕ್ಷೆಗಳಲ್ಲಿ ಸಂದರ್ಶನದ ಅಂಕಗಳನ್ನು ಕಡಿತಗೊಳಿಸಲಾಗಿದೆ. ನ್ಯಾಯಯುತ ಹಾಗೂ ಪಾರದರ್ಶಕತೆಯನ್ನು ಪ್ರೋತ್ಸಾಹಿಸಲು ನೇಮಕಾತಿ ಮಾದರಿಗಳನ್ನು ಸರಳೀಕೃತಗೊಳಿಸಿದೆ ಎಂದು ವಿವರಿಸಿದ್ದಾರೆ.
ಕರ್ನಾಟಕ ಲೋಕಸೇವಾ ಆಯೋಗದ ನೇರ ನೇಮಕಾತಿ ನಿಯಮಗಳನ್ನು 2021 ರಲ್ಲಿ ಪರಿಚಯಿಸಿದ್ದು, ಇದು ವ್ಯಕ್ತಿತ್ವ ಪರೀಕ್ಷೆಯ ಮೌಲ್ಯಕ್ಕಿಂತ ಪ್ರಮಾಣೀಕರಿಸಿದ ಪ್ರಕ್ರಿಯೆಗಳಿಗೆ ಒತ್ತು ನೀಡಿದೆ. ಪ್ರಶ್ನೆಪತ್ರಿಕೆ ಸೋರಿಕೆ ತಡೆಗಟ್ಟಿ ಪಾರದರ್ಶಕತೆಯನ್ನು ಖಾತ್ರಿಗೊಳಿಸಲು, ಸಾರ್ವಜನಿಕರ ವಿಶ್ವಾಸವನ್ನು ದೃಢಗೊಳಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ನಿರುದ್ಯೋಗ ನಿಯಂತ್ರಣಕ್ಕೆ ನ್ಯಾಯಯುತ ಹಾಗೂ ತ್ವರಿತ ನೇಮಕಾತಿ ಪ್ರಕ್ರಿಯೆಗಳ ಅಗತ್ಯವಿದ್ದು, ಯುಪಿಎಸ್‌ಸಿಯಲ್ಲಿರುವಂತೆ ಸಕಾಲಕ್ಕೆ ಫಲಿತಾಂಶ ಪ್ರಕಟಿಸುವ ಮಾದರಿಯನ್ನು ರಾಜ್ಯಗಳು ಅನುಸರಿಸಬೇಕಿದೆ. ಲೋಕಸೇವಾ ಆಯೋಗಗಳ ವಿರುದ್ಧ ಇರುವ ಬ್ಯಾಕ್‌ಲಾಗ್ ಪ್ರಕರಣಗಳನ್ನು ಬಗೆಹರಿಸುವುದು, ದಕ್ಷತೆಯ ಸುಧಾರಣೆ, ಸಾರ್ವಜನಿಕರ ವಿಶ್ವಾಸ ಗಳಿಸುವುದು ಮುಖ್ಯವಾಗಿದೆ. ಕೆಪಿಎಸ್‌ಸಿಯನ್ನು ಸದೃಢಗೊಳಿಸಲು ಹೆಚ್ಚಿನ ಸಂಪನೂಲ, ಸಿಬ್ಬಂದಿ ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುವುದು. ಕೃತಕ ಬುದ್ಧಿಮತ್ತೆಯಂತಹ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ನೇಮಕಾತಿ ಪ್ರಕ್ರಿಯೆಗಳನ್ನು ಪಾರದರ್ಶಕ ಹಾಗೂ ಭ್ರಷ್ಟಾಚಾರ ರಹಿತವಾಗಿ ನಿರ್ವಹಿಸಲಾಗುವುದು. ಮಹಿಳೆಯರು, ಯುವಜನರು ಹಾಗೂ ನಿರ್ಲಕ್ಷಿತ ವರ್ಗಗಳು ಸೇರಿದಂತೆ ಎಲ್ಲಾ ಸಮುದಾಯಗಳಿಗೂ ಅವಕಾಶ ಕಲ್ಪಿಸುವುದು ನಮ ಸರ್ಕಾರದ ಉದ್ದೇಶ ಎಂದಿದ್ದಾರೆ. ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್, ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಯುಪಿಎಸ್‌ಸಿ ಅಧ್ಯಕ್ಷರಾದ ಪ್ರೀತಿ ಸುದಾನ್ ಸೇರಿದಂತೆ ಹಲವಾರು ಮಂದಿ ಗಣ್ಯರು ಉಪಸ್ಥಿತರಿದ್ದರು.