Saturday, January 11, 2025
Homeರಾಜ್ಯನಕ್ಸಲರ ಶರಣಾಗತಿ ಪ್ರಕ್ರಿಯೆ ಅನುಮಾನಸ್ಪದ: ಅಣ್ಣಾಮಲೈ

ನಕ್ಸಲರ ಶರಣಾಗತಿ ಪ್ರಕ್ರಿಯೆ ಅನುಮಾನಸ್ಪದ: ಅಣ್ಣಾಮಲೈ

ಮಂಗಳೂರು,ಜ.11- ಶಸಾ್ತ್ರಸ್ತ್ರ ತ್ಯಜಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರು ಶರಣಾದ ನಕ್ಸಲೀಯರ ಶರಣಾಗತಿ ಪ್ರಕ್ರಿಯೆ ಬಗ್ಗೆ ಮಾಜಿ ನಿವೃತ್ತ ಐಪಿಎಸ್‌‍ ಅಧಿಕಾರಿ ಹಾಗೂ ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅನುಮಾನ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಇತ್ತೀಚಿಗೆ ನಡೆದ ನಕ್ಸಲ್‌ ಶರಣಾಗತಿ, ನಕ್ಸಲರು ಶರಣಾಗುವುದಾದರೆ ಅದಕ್ಕೆ ನಾನಾ ರೀತಿಯ ಕಾನೂನು ಪ್ರಕ್ರಿಯೆಗಳು ನಡೆಯುತ್ತವೆ. ಆದರೆ ಇಲ್ಲಿ ನಿಯಮಗಳನ್ನು ಉಲ್ಲಂಘಿಸಿ ಶರಣಾಗತಿ ಪ್ರಕ್ರಿಯೆ ನಡೆದಿದೆ ಎಂದು ಅವರು ಆರೋಪಿಸಿದರು.

ಕೆಲವು ದಿನಗಳ ಹಿಂದೆ ನಕ್ಸಲ್‌ ನಿಗ್ರಹದಳ(ಎಎನ್‌ಎಫ್‌)ದವರು ನಡೆಸಿದ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದ ವಿಕ್ರಮ್‌ ಗೌಡ ಅವರಿಗೆ ಸೇರಿದ್ದು ಎನ್ನಲಾದ ಆಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ಲಾಗಿದೆ. ಇದಕ್ಕೆ ಸರ್ಕಾರದ ಬಳಿ ಉತ್ತರವಿದೆಯೇ ಎಂದು ಅಣ್ಣಾಮಲೈ ಪ್ರಶ್ನೆ ಮಾಡಿದ್ದಾರೆ. ನಕ್ಸಲೀಯರು ಶರಣಾಗುವುದು ಎಂದರೆ ಅದು ನಂಬಿದ ತತ್ವ ಮತ್ತು ಸಿದ್ದಾಂತಕ್ಕೆ ಮಾಡಿದ ಮೋಸ. ದುಡಿಯುವ ಜನರಿಗೆ ದ್ರೋಹ ಮಾಡಿದಂತೆ. ದುಡ್ಡು ಮಾಡಲು ಹೋಗುತ್ತಾರೆ ಎಂದು ಜನರು ಆಡಿಕೊಳ್ಳುತ್ತಾರೆ. ನಮ ಜೊತೆ ಮಾತುಕತೆಗೆ ಬನ್ನಿ ಎಂದು ಸರ್ಕಾರ ಆಹ್ವಾನಿಸುತ್ತಿದೆ. ಲಕ್ಷಗಟ್ಟಲೇ ಹಣ ಕೊಡುತ್ತೇವೆ ಎನ್ನುತ್ತಾರೆ. ನಾವು ಸರ್ಕಾರದ ಪ್ಯಾಕೇಜ್‌ ಒಪ್ಪಿಕೊಂಡು ಶರಣಾಗುವುದೆಂದರೆ ನಮನ್ನು ನಾವು ಮಾರಿಕೊಂಡಂತೆ ಎಂದು ವಿಕ್ರಮ್‌ ಗೌಡ ಹೇಳಿರುವ ಆಡಿಯೋ ಬಹಿರಂಗಗೊಂಡಿದೆ. ಇದಕ್ಕೆ ಸರ್ಕಾರ ಉತ್ತರ ಕೊಡಬೇಕೆಂದು ಒತ್ತಾಯ ಮಾಡಿದ್ದಾರೆ.

ಈ ಹಿಂದೆಯೂ ಚಿಕ್ಕಮಗಳೂರಿನಲ್ಲಿ ನಕ್ಸಲ್‌ ಶರಣಾಗತಿ ಪ್ರಕ್ರಿಯೆ ಮಾಡಲಾಗಿದೆ. ಇದೊಂದು ದೊಡ್ಡ ಪ್ರಕ್ರಿಯೆ, ರಾಜ್ಯದಲ್ಲಿ ನಕ್ಸಲ್‌ ಶರಣಾಗತಿ ಪಾಲಿಸಿ ಕೂಡಾ ಇದೆ. ನಕ್ಸಲ್‌ ಶರಣಾಗತಿಯ ಮೊದಲು ಹಲವು ಚರ್ಚೆಗಳನ್ನು ನಡೆಸಬೇಕಿದೆ. ಅವರು ಜೀವನದಲ್ಲಿ ಏನು ಆಗಬೇಕು ಎನ್ನೋದನ್ನು ನಿರ್ಧರಿಸಿಯೇ ಬರುತ್ತಾರೆ. ಅವರಿಗೆ ತರಬೇತಿ, ಬ್ಯಾಂಕ್‌ ಸಾಲ ಸೌಲಭ್ಯಗಳ ವ್ಯವಸ್ಥೆ ಈ ಎಲ್ಲಾ ವಿಚಾರಗಳು ಚರ್ಚೆಯಾಗಬೇಕಿದೆ. ಆ ನಂತರ ನಕ್ಸಲರ ಶರಣಾಗತಿ ಆಗುತ್ತಾರೆ ಎಂದು ಹೇಳಿದರು. ಈ ಎಲ್ಲ ಚರ್ಚೆಯ ಬಳಿಕ ಅವರ ಮೇಲಿದ್ದ ಕೇಸುಗಳನ್ನು ಅವರು ಎದುರಿಸಬೇಕು. ನ್ಯಾಯಾಲಯದ ಮುಂದೆ ಹಾಜರಾಗಬೇಕು ಎನ್ನುವ ಷರತ್ತುಗಳೂ ಇವೆ. ಅವರು ಜಿಲ್ಲಾಡಳಿತ ಅಥವಾ ಪೊಲೀಸ್‌‍ ಠಾಣೆಯಲ್ಲಿ ಶರಣಾಗಬೇಕು ಎನ್ನುವ ನಿಯಮ ಇದೆ. ಪೋಲೀಸರಿಗೆ ಹಲವು ವರ್ಷಗಳಿಂದ ಬೇಕಾದ ನಕ್ಸಲರಾಗಿರುತ್ತಾರೆ. ಆದರೆ ಮುಖ್ಯಮಂತ್ರಿಗಳ ಮುಂದೆ ನಡೆದ ನಕ್ಸಲ್‌ ಶರಣಾಗತಿ ಪ್ರಕ್ರಿಯೆಯ ಮೇಲೆ ಸಹಜವಾಗಿ ಸಂಶಯ ಮೂಡುತ್ತದೆ ಎಂದರು.

ನಕ್ಸಲರ ಶರಣಾಗತಿ ನಿಯಮ ಬಹಳ ದೊಡ್ಡಮಟ್ಟದ ಪ್ರಕ್ರಿಯೆ. ಶರಣಾಗತಿ ಸಂದರ್ಭ ಕೆಲವೊಂದು ಶರತ್ತುಗಳಿರುತ್ತವೆ. ಆದರೆ ಕರ್ನಾಟಕದಲ್ಲಿ ಮೊನ್ನೆ ನಡೆದ ನಕ್ಸಲ್‌ ಶರಣಾಗತಿಯ ಬಗ್ಗೆ ಸ್ವಲ್ಪ ಅನುಮಾನ ಮೂಡಿಸಿದೆ. ನಕ್ಸಲ್‌ ಮುಖಂಡ ವಿಕ್ರಮ್‌ ಗೌಡನ ಎನ್‌ಕೌಂಟರ್‌ ನಲ್ಲೂ ಅನುಮಾನವಿದೆ. ಎನ್‌ಕೌಂಟರ್‌ ಆದ ತಕ್ಷಣ ನಕ್ಸಲ್‌ ಶರಣಾದರು ಎಂದು ಸರಕಾರ ಹೇಳುತ್ತಿದೆ. ನಕ್ಸಲರು ಶರಣಾಗುವಂತೆ ಯಾರು ಮಾತುಕತೆ ನಡೆಸಿದರು? ಎಂಬುದು ತಿಳಿದಿಲ್ಲ. ನಕ್ಸಲ್‌ ತಂಡದೊಳಗಡೆ ಇರುವ ಆಂತರಿಕ ರಾಜಕೀಯವನ್ನು ಕಾಂಗ್ರೆಸ್‌‍ ದುರ್ಬಳಕೆ ಮಾಡುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ.

ಒಬ್ಬ ಪೊಲೀಸ್‌‍ ಅಧಿಕಾರಿಯಾಗಿ ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಅನುಭವದಲ್ಲಿ ಹೇಳುತ್ತೇನೆ. ಈ ಪ್ರಕ್ರಿಯೆಯಲ್ಲಿ ಸಂಶಯವಿದೆ. ಈ ವಿಚಾರದಲ್ಲಿ ನಕ್ಸಲ್‌ ಬೆಂಬಲಿಗರ ಒತ್ತಡ ಮುಖ್ಯಮಂತ್ರಿಗಳ ಮೇಲಿದೆ ಅನ್ನಿಸುತ್ತದೆ. ಸಾಮಾಜಿಕ ಜೀವನಕ್ಕೆ ಬರುವಾಗ ಸರ್ಕಾರ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಿತ್ತು. ಆದರೆ ಇಲ್ಲಿ ಈ ಪ್ರಕ್ರಿಯೆ ಸರಿಯಾಗಿ ನಡೆದಿಲ್ಲ ಎಂದು ಹೇಳಿದರು. ನಕ್ಸಲ್‌ ಶರಣಾಗತಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪೋಲೀಸ್‌‍ ಅಧಿಕಾರಿಗಳ ಉಸ್ತುವಾರಿಯಲ್ಲಿ ನಡೆಯಬೇಕಿತ್ತು. ಇಲ್ಲಿ ಸರಕಾರ ಪೊಲಿಟಿಕಲ್‌ ಮೈಲೇಜ್‌ ಪಡೆಯಲು ಈ ವಿಚಾರವನ್ನು ಬಳಸಿಕೊಂಡಿದೆ. ಶರಣಾಗತಿ ಪ್ರಕ್ರಿಯೆ ಸರಿಯಾಗಿ ನಡೆಸದ ಕಾರಣ ಮುಂದೆ ನಕ್ಸಲ್‌ ಚಿಂತನೆಯ ಜನ ಸಾಮಾಜಿಕ ಜೀವನಕ್ಕೆ ಬಂದರೆ ಪ್ರಜಾಪ್ರಭುತ್ವ ವ್ಯವಸ್ಥೆಗೂ ಹಾನಿಯಾಗಲಿದೆ ಎಂದು ಅಣ್ಣಾಮಲೈ ಆತಂಕ ವ್ಯಕ್ತಪಡಿಸಿದರು.

ಈ ಹಿಂದೆ ನಾನು ಚಿಕ್ಕಮಂಗಳೂರು ಎಸ್ಪಿಯಾಗಿದ್ದ ಸಂದರ್ಭ ನಕ್ಸಲರು ಶರಣಾಗಿದ್ದರು. ನಕ್ಸಲರ ಶರಣಾಗತಿ ಪ್ರಕ್ರಿಯೆಯಲ್ಲಿ ನಾನು ಭಾಗವಹಿಸಿದ್ದೆ. ನಿಯಮಗಳ ಪ್ರಕಾರ ಜಿಲ್ಲಾಧಿಕಾರಿ ಮತ್ತು ಎಸ್ಪಿಯ ಎದುರು ನಕ್ಸಲರು ಶರಣಾಗಬೇಕು. ಆನಂತರ ಬೇರೆ ಪ್ರಕ್ರಿಯೆಗಳು ನಡೆಯುತ್ತವೆ. ಇಲ್ಲಿ ರಾಜಕೀಯ ಮೈಲೇಜ್‌ಗೋಸ್ಕರ ಶರಣಾಗತಿ ಪ್ರಕ್ರಿಯೆ ನಡೆಸಲಾಗಿದೆ. ನಕ್ಸಲ್‌ ಬೆಂಬಲಿಗರು ಸರಕಾರದ ಮೇಲೆ ಪ್ರಭಾವ ಬೀರಿದ್ದಾರೆ. ನಾಗರಿಕ ಸಮಾಜದ ಮೇಲೂ ಇವರು ಪ್ರಭಾವ ಬೀರಲಿದ್ದಾರೆ ಎಂದು ಅವರು ಆರೋಪಿಸಿದರು. ನಕ್ಸಲರು ಶರಣಾದಾಗ ಜನರಿಗೆ ವಿಶ್ವಾಸಬರಬೇಕು. ನಕ್ಸಲರ ಶರಣಾಗತಿಯ ಬಗ್ಗೆ ಜನರಿಗೆ ವಿಶ್ವಾಸವಿಲ್ಲ. ಶರಣಾಗತಿಯ ಬಗ್ಗೆ ಗೃಹಸಚಿವರೇ ಮಾಹಿತಿಯ ಕೊರತೆಯಿದ್ದ ಹಾಗೆ ಉಲ್ಟಾ-ಪಲ್ಟಾ ಮಾತನಾಡುತ್ತಾರೆ. ಶರಣಾದ ನಕ್ಸಲರು ನಾಗರಿಕ ಸಮಾಜದ ಮೇಲೆ ಪ್ರಭಾವ ಬೀರುವ ಅಪಾಯವಿದೆ ಎಂದು ಅಣ್ಣಾಮಲೈ ಎಂದು ಹೇಳಿದ್ದಾರೆ.

RELATED ARTICLES

Latest News